ಗೋಧಿ ಬಣ್ಣ, ಸಾಧಾರಣ ಮೈಕಟ್ಟು!

Update: 2020-11-13 06:42 GMT

ವೃದ್ಧಾಪ್ಯದಲ್ಲಿ ಮರೆವಿನ ಕಾಯಿಲೆ ಸಾಮಾನ್ಯ. ಮರೆವು ಮನುಷ್ಯನ ನಡವಳಿಕೆಗಳಲ್ಲಿ ವಿರೋಧಾಭಾಸಗಳನ್ನು ಸೃಷ್ಟಿಸುತ್ತದೆೆ. ಕೆಲವೊಮ್ಮೆ ಈ ಮರೆವು ಕಾಯಿಲೆಯಾಗಿಯೂ ಕಾಡುತ್ತದೆ. ‘ಅಲ್‌ಝೈಮರ್’ ಕಾಯಿಲೆಯೆಂದು ಈ ಮರೆವಿಗೆ ಹೆಸರಿಡಲಾಗಿದೆ. ಈ ಕಾಯಿಲೆ ಪೀಡಿತರು ಒಬ್ಬಂಟಿಯಾಗಿ ಮನೆಯಿಂದ ಹೊರಹೋದರೆ ತಮ್ಮ ಮನೆಯ ದಾರಿಯನ್ನೇ ಮರೆತು ಬಿಡುವ ಸಂದರ್ಭಗಳಿವೆ. ಎಷ್ಟೋ ವೃದ್ಧರು ಈ ಕಾಯಿಲೆಯಿಂದಾಗಿ ಮನೆಯ ದಾರಿ ತಿಳಿಯದೆ ನಾಪತ್ತೆಯಾಗಿದ್ದಾರೆ. ಆಗಾಗ ಪತ್ರಿಕೆಗಳಲ್ಲಿ ‘ಕಾಣೆಯಾಗಿದ್ದಾರೆ-ಗೋಧಿಬಣ್ಣ, ಸಾಧಾರಣ ಮೈಕಟ್ಟು’ ಎನ್ನುವ ಜಾಹೀರಾತಿನ ಬಹುತೇಕ ಸಂತ್ರಸ್ತರು ಅಲ್‌ಝೈಮರ್ ಕಾಯಿಲೆಯಿಂದ ನರಳುವ ವೃದ್ಧರೇ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯವ್ಯವಸ್ಥೆಯೂ ಇಂತಹದೇ ಕಾಯಿಲೆಯಿಂದ ನರಳುತ್ತಿದೆಯೇ ಎಂದು ಜನತೆ ಆತಂಕ ಪಡುತ್ತಿದ್ದಾರೆ. ಒಂದು ಪ್ರಕರಣಕ್ಕೆ ಸಂಬಂಧಿಸಿ ತಾನೇ ನೀಡಿದ ಅಧಿಕೃತ ತೀರ್ಪನ್ನು ಮರೆತು, ಮತ್ತೊಂದು ಪ್ರಕರಣದಲ್ಲಿ ಅದಕ್ಕೆ ವ್ಯತಿರಿಕ್ತವಾದ ತೀರ್ಪು ನೀಡುವ ಪ್ರವೃತ್ತಿ ನ್ಯಾಯವ್ಯವಸ್ಥೆಯೊಳಗೆ ಹೆಚ್ಚುತ್ತಿವೆ. ತೀರ್ಪುಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತಿವೆ. ಒಮ್ಮಿಮ್ಮೆ ಅಭಿವ್ಯಕ್ತಿ ಸ್ವಾತಂತ್ರ ಕುರಿತಂತೆ ಅಪಾರ ಕಾಳಜಿ ವ್ಯಕ್ತಪಡಿಸುವ ನ್ಯಾಯಾಲಯ, ಮಗದೊಮ್ಮೆ ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿದಾತನ ವಿರುದ್ಧವೇ ದಾಖಲಿಸಲಾದ ದೇಶದ್ರೋಹ ಪ್ರಕರಣವನ್ನು ಮಾನ್ಯ ಮಾಡುತ್ತದೆ. ಪತ್ರಕರ್ತನನ್ನು ಬಹಿರಂಗ ಕ್ಷಮೆಯಾಚನೆಗೆ ಒತ್ತಾಯಿಸುತ್ತದೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಒಂದು ಸುದ್ದಿ ಜಾಲ ತಾಣ, ಗುಜರಾತ್ ಮುಖ್ಯಮಂತ್ರಿಯ ಕೊರೋನ ವೈಫಲ್ಯವನ್ನು ಟೀಕಿಸಿತ್ತು. ಈ ವೈಫಲ್ಯಕ್ಕಾಗಿ ಮುಖ್ಯಮಂತ್ರಿಯನ್ನು ಬದಲಾಯಿಸುವ ಸಾಧ್ಯತೆಗಳಿವೆ ಎಂದು ಜಾಲತಾಣದಲ್ಲಿ ಪತ್ರಕರ್ತ ಆರೋಪಿಸಿದ್ದ. ಅಷ್ಟಕ್ಕೇ ಆ ಪತ್ರಕರ್ತನ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಯಿತು. ಸರಕಾರದ ಕ್ರಮವನ್ನು ಸ್ವಯಂ ಪ್ರಶ್ನಿಸಬೇಕಾಗಿದ್ದ ನ್ಯಾಯಾಲಯ, ಪತ್ರಕರ್ತನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ವಿಚಾರಣೆ ನಡೆಸಿತು. ಆದರೆ ಇನ್ನೂ ಯುವ ಪತ್ರಕರ್ತನಾಗಿರುವ ಆತ, ಜಂಜಡಗಳಿಂದ ಪಾರಾಗಲು ನ್ಯಾಯಾಲಯದ ಮುಂದೆ ಕ್ಷಮೆಯಾಚಿಸಿದ. ಅದರಿಂದ ತೃಪ್ತಿಗೊಂಡ ನ್ಯಾಯಾಲಯ ಆತನ ಮೇಲಿರುವ ದೇಶದ್ರೋಹ ಪ್ರಕರಣವನ್ನು ರದ್ದು ಗೊಳಿಸಲು ಆದೇಶಿಸಿತು. ಹಾಗಾದರೆ ಸರಕಾರವನ್ನು ಟೀಕಿಸುವುದು ದೇಶವನ್ನು ಟೀಕಿಸಿದಂತೆ ಎಂದು ಸ್ವತಃ ನ್ಯಾಯಾಲಯವೇ ಭಾವಿಸುತ್ತದೆಯೇ? ತಾನೇ ಆಯ್ಕೆ ಮಾಡಿದ ಸರಕಾರದ ವೈಫಲ್ಯಗಳನ್ನು ಟೀಕಿಸುವ ಅಧಿಕಾರ ಈ ದೇಶದ ಜನಸಾಮಾನ್ಯರಿಗಿಲ್ಲವೇ? ಹಾಥರಸ್ ಪ್ರಕರಣದಲ್ಲಿ ಇದು ಇನ್ನಷ್ಟು ಅತಿರೇಕಕ್ಕೆ ಹೋಯಿತು. ಹಾಥರಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರವನ್ನು ವರದಿ ಮಾಡಲು ಹೋದ ಕೇರಳದ ನಾಲ್ವರು ಪತ್ರಕರ್ತರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದರು. ಅವರ ಮೇಲೆ ದೇಶವಿರೋಧಿ ಸಂಚು ನಡೆಸಿದ ಆರೋಪಗಳನ್ನು ಹೊರಿಸಲಾಯಿತು. ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಬಂಧನವಾಗಿ ಒಂದು ತಿಂಗಳಾಗಿದೆ. ಆದರೂ ಅವರ ಜಾಮೀನು ಅರ್ಜಿ ವಿಚಾರಣೆಯಾಗಿಲ್ಲ. ಕನಿಷ್ಠ ಕುಟುಂಬಕ್ಕೂ ಪತ್ರಕರ್ತನನ್ನು ಭೇಟಿ ನೀಡಲು ಅವಕಾಶ ನೀಡಲಿಲ್ಲ. ಜಾಮೀನು ಅರ್ಜಿಯ ತುರ್ತು ವಿಚಾರಣೆಗಾಗಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಲಾಗಿದೆಯಾದರೂ, ಅದು ವಿಚಾರಣೆಯ ಅವಧಿಯನ್ನು ನ.16ಕ್ಕೆ ಮುಂದೂಡಿದೆ.

ಆದರೆ ಇದೀಗ ಅರ್ನಬ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವ್ಯಕ್ತಪಡಿಸಿದ ಆತಂಕ, ಅವಸರ ಸಿದ್ದೀಕ್ ಕಪ್ಪನ್ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅರ್ನಬ್ ಅವರು ಪತ್ರಕರ್ತರೇ ಆಗಿದ್ದರೂ, ಅವರನ್ನು ಜೈಲಿಗೆ ತಳ್ಳಿದ ಪ್ರಕರಣಕ್ಕೂ ಅಭಿವ್ಯಕ್ತಿ ಸ್ವಾತಂತ್ರಕ್ಕೂ ಯಾವುದೇ ಸಂಬಂಧವಿರಲಿಲ್ಲ. ಹಣಕಾಸಿನ ವ್ಯವಹಾರದಲ್ಲಿ ವಂಚನೆಯ ಆರೋಪ ಅರ್ನಬ್ ಮೇಲಿತ್ತು. ಆ ವಂಚನೆಯಿಂದಾಗಿ ಒಂದೇ ಕುಟುಂಬದ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಆರೋಪಿಸಿ ಅರ್ನಬ್‌ರನ್ನು ಬಂಧಿಸಿದ್ದರು. ಯಾವಾಗ ಮುಂಬೈ ಹೈಕೋರ್ಟ್ ಈ ಪ್ರಕರಣದಲ್ಲಿ ಅರ್ನಬ್‌ಗೆ ಮಧ್ಯಂತರ ಜಾಮೀನನ್ನು ನೀಡಲು ನಿರಾಕರಿಸಿತೋ, ತಕ್ಷಣ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿತು. ಮಾತ್ರವಲ್ಲ, ಅರ್ನಬ್ ಬಂಧನಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸರಕಾರವನ್ನೂ, ಹೈಕೋರ್ಟನ್ನ್ನೂ ತರಾಟೆಗೆ ತೆಗೆದುಕೊಂಡಿತು. ಈ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ‘ಅರ್ನಬ್ ಟಿವಿ ಚಾನೆಲ್‌ನ್ನು ನಾನು ನೋಡುವುದಿಲ್ಲ. ಅವರ ಸಿದ್ಧಾಂತ ಬೇರೆಯಾಗಿರಬಹುದು. ಆದರೆ ವ್ಯವಸ್ಥೆ ವ್ಯಕ್ತಿಯೊಬ್ಬನನ್ನು ಗುರಿ ಮಾಡಿದಾಗ ಸಾಂವಿಧಾನಿಕ ನ್ಯಾಯಾಲಯಗಳು ಮಧ್ಯ ಪ್ರವೇಶಿಸದೆ ಇದ್ದರೆ ನಿರ್ವಿವಾದವಾಗಿ ನಾವು ವಿನಾಶದ ಹಾದಿಯಲ್ಲಿ ಸಾಗುತ್ತೇವೆ. ರಾಜ್ಯ ಸರಕಾರಗಳು ವ್ಯಕ್ತಿಯೊಬ್ಬನನ್ನು ಗುರಿಯಾಗಿಸಿದರೆ ವೈಯಕ್ತಿಕ ಸ್ವಾತಂತ್ರವನ್ನು ಎತ್ತಿ ಹಿಡಿಯಲು ಹೈಕೋರ್ಟ್ ಇದೆ ಎಂಬ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಹೈಕೋರ್ಟ್‌ಗಳು ಕಾರ್ಯನಿರ್ವಹಿಸಬೇಕು. ತೀರ್ಪು ನೀಡುವಾಗ ವೈಯಕ್ತಿಕ ಸ್ವಾತಂತ್ರಕ್ಕೆ ಪ್ರಾಧಾನ್ಯತೆ ನೀಡುವಂತೆ ಹೈಕೋರ್ಟ್‌ಗೆ ಸಂದೇಶ ನೀಡ ಬಯಸುತ್ತೇನೆ’ ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿದರು. ಅವರು ಹೇಳಿರುವುದು ಇಂದಿನ ದಿನಗಳಿಗೆ ಅತ್ಯಂತ ಅಗತ್ಯವಾದ ಮಾತುಗಳು. ಆದರೆ ಈ ಮಾತುಗಳು ಪತ್ರಕರ್ತನಾಗಿ ಹಾಥರಸ್ ಪ್ರಕರಣವನ್ನು ವರದಿ ಮಾಡಲು ಹೋದ ಒಂದೇ ಒಂದು ತಪ್ಪಿಗಾಗಿ ದೇಶದ್ರೋಹ ಆರೋಪವನ್ನು ಎದುರಿಸುತ್ತಾ ಒಂದು ತಿಂಗಳಿಂದ ಜೈಲಲ್ಲಿರುವ ಸಿದ್ದೀಕ್ ಕಪ್ಪನ್ ವಿಷಯದಲ್ಲಿ ಯಾಕೆ ಹೊರಬೀಳಲಿಲ್ಲ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ. ಒಬ್ಬ ಟಿವಿ ಮಾಲಕನಿಗೊಂದು ನ್ಯಾಯ, ಸಾಮಾನ್ಯ ಪತ್ರಕರ್ತನಿಗೊಂದು ನ್ಯಾಯವನ್ನು ಸುಪ್ರೀಂಕೋರ್ಟ್ ಯಾಕೆ ನೀಡುತ್ತಿದೆ? ಎನ್ನುವುದನ್ನು ಪ್ರಶ್ನಿಸುವುದು ಕೂಡ ಅಪರಾಧ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ನ್ಯಾಯಾಲಯದ ತೀರ್ಪನ್ನು ವ್ಯಂಗ್ಯ ಮಾಡಿದ ಕುನಾಲ್ ಕಾಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಈಗಾಗಲೇ ಅನುಮತಿ ನೀಡಿದ್ದಾರೆ.

   ‘ಕುನಾಲ್ ಕಾಮ್ರಾ ಅವರ ಟ್ವೀಟ್‌ಗಳು ಕೆಟ್ಟ ಅಭಿರುಚಿಯನ್ನು ಹೊಂದಿವೆ ಮಾತ್ರವಲ್ಲ, ಇದು ಹಾಸ್ಯ ಹಾಗೂ ನ್ಯಾಯಾಂಗ ನಿಂದನೆಯ ನಡುವಿನ ಗೆರೆಯನ್ನು ದಾಟಿದೆ’ ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಆದರೆ, ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಪತ್ರಕರ್ತನ ವೈಯಕ್ತಿಕ ಸ್ವಾತಂತ್ರದ ಬಗ್ಗೆ ತೀವ್ರ ಆತಂಕ ಪಡುತ್ತಾ, ಹಾಥರಸ್ ಪ್ರಕರಣದಲ್ಲಿ ವರದಿ ಮಾಡಲು ಹೋದ ಕಾರಣಕ್ಕೆ ಬಂಧಿತನಾದ ಪತ್ರಕರ್ತನ ಕುರಿತಂತೆ ಸುಪ್ರೀಂಕೋರ್ಟ್ ವೌನ ತಾಳುವುದು ನ್ಯಾಯದ ವ್ಯಂಗ್ಯವೇ ಅಲ್ಲವೇ? ನ್ಯಾಯವ್ಯವಸ್ಥೆಯ ತೀರ್ಪು ನಗೆಪಾಟಲಿಗೀಡಾದಾಗ, ಅದನ್ನು ನೋಡಿ ನಕ್ಕರೆ ಅಪರಾಧವಾಗುವುದು ಹೇಗೆ? ನಾಳೆ ಕಾಮ್ರಾ ಅವರ ಬಂಧನವಾದರೆ ಆಗ ಒಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ ಹರಣಕ್ಕೆ ಸ್ವತಃ ಸುಪ್ರೀಂಕೋರ್ಟ್ ಹೊಣೆಯಾಗುವುದಿಲ್ಲವೆ? ನ್ಯಾಯಾಲಯ ತನ್ನ ಅಲ್‌ಝೈಮರ್ ಕಾಯಿಲೆಗೆ ತಕ್ಷಣ ಔಷಧಿ ತೆಗೆದುಕೊಳ್ಳದೇ ಇದ್ದರೆ, ಅದು ರಾಜಕೀಯ, ಸಿದ್ಧಾಂತದ ಸಂತೆಗಳ ನಡುವೆ ಸಂಪೂರ್ಣ ಕಳೆದು ಹೋಗುವ ಎಲ್ಲ ಸಾಧ್ಯತೆಗಳಿವೆ. ‘ಗೋಧಿ ಮೀಡಿಯಾ’ಗಳು ಈ ದೇಶವನ್ನು ಸಂಪೂರ್ಣ ತಪ್ಪು ಹಾದಿಯಲ್ಲಿ ಕೊಂಡೊಯ್ಯುತ್ತಿರುವ ಈ ದಿನಗಳಲ್ಲಿ ದಾರಿ ತಪ್ಪಿ ತನ್ನ ಆಲಯವನ್ನು ಸೇರಲಾಗದೆ ಸಂತೆಯೊಳಗೆ ತಡವರಿಸುತ್ತಿರುವ ನ್ಯಾಯದೇವತೆಯನ್ನು ಹುಡುಕಿ ಅದರ ಜಾಗದಲ್ಲಿ ತಂದು ಸೇರಿಸಬೇಕಾದ ಅನಿವಾರ್ಯ ಎಲ್ಲ ಸಂವಿಧಾನ ಪರವಾಗಿರುವ ಜನರ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News