ತನ್ನ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕುರಿತು ಕುನಾಲ್ ಕಾಮ್ರಾ ಪ್ರತಿಕ್ರಿಯಿಸಿದ್ದು ಹೀಗೆ...

Update: 2020-11-13 11:34 GMT

ಹೊಸದಿಲ್ಲಿ: ಸುಪ್ರೀಂಕೋರ್ಟ್ ಕುರಿತು ತನ್ನ ಟ್ವೀಟ್‌ಗಳನ್ನು ಹಿಂತೆಗೆದುಕೊಳ್ಳುವ ಅಥವಾ ಕ್ಷಮೆಯಾಚಿಸುವ ಉದ್ದೇಶವನ್ನು ನಾನು ಹೊಂದಿಲ್ಲ ಎಂದು ಕಾಮಿಡಿಯನ್ ಕುನಾಲ್ ಕಾಮ್ರಾ ಶುಕ್ರವಾರ ಹೇಳಿದ್ದಾರೆ.

ರಿಪಬ್ಲಿಕ್ ಟಿ.ವಿ.ಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌ನ ಕುರಿತು ಸರಣಿ ಟ್ವೀಟ್ ಮಾಡಿದ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಆರಂಭಿಸಲು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಗುರುವಾರ ಅನುಮತಿ ನೀಡಿದ ಮರುದಿನವೇ ಕುನಾಲ್ ಪ್ರತಿಕ್ರಿಯಿಸಿದ್ದಾರೆ.

"ನನ್ನ ದೃಷ್ಟಿಕೋನವು ಬದಲಾಗಿಲ್ಲ. ಏಕೆಂದರೆ ಇತರರ ವೈಯಕ್ತಿಕ ಸ್ವಾತಂತ್ರದ ವಿಷಯಗಳಲ್ಲಿ ಭಾರತದ ಸುಪ್ರೀಂಕೋರ್ಟ್ ಮೌನವು ವಿಮರ್ಶೆಗೆ ಒಳಗಾಗುವುದಿಲ್ಲ. ನನ್ನ ಟ್ವೀಟನ್ನು ಹಿಂಪಡೆಯುವ ಅಥವಾ ಕ್ಷಮೆಕೋರುವ ಉದ್ದೇಶ ಹೊಂದಿಲ್ಲ. ಅವರು ತಮ್ಮಷ್ಟಕ್ಕೆ ಮಾತನಾಡುತ್ತಾರೆ ಎಂದು ನಂಬುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಕುನಾಲ್ ಕಾಮ್ರಾ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲೇನಿದೆ?

ಮಾನ್ಯ ನ್ಯಾಯಾಧೀಶರು ಮತ್ತು ಕೆ.ಕೆ.ವೇಣುಗೋಪಾಲ್ ಅವರೇ,
ನಾನು ಇತ್ತೀಚಿಗೆ ಮಾಡಿದ್ದ ಟ್ವೀಟ್‌ಗಳನ್ನು ನ್ಯಾಯಾಂಗ ನಿಂದನೆ ಎಂದು ಹೇಳಲಾಗುತ್ತಿದೆ. ನನ್ನ ಟ್ವೀಟ್‌ಗಳು ಭಾರತದ ಸರ್ವೋಚ್ಚ ನ್ಯಾಯಾಲಯವು ‘ಪ್ರೈಮ್ ಟೈಮ್ ಲೌಡ್‌ಸ್ಪೀಕರ್ ’ ಪರವಾಗಿ ನೀಡಿರುವ ಪಕ್ಷಪಾತಿ ತೀರ್ಪಿನ ಬಗ್ಗೆ ನನ್ನ ಅಭಿಪ್ರಾಯಗಳಾಗಿವೆ.
ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುವುದನ್ನು ನಾನು ಪ್ರೀತಿಸುತ್ತೇನೆ ಮತ್ತು ಮಂತ್ರಮುಗ್ಧ ಪ್ರೇಕ್ಷಕರು ನನಗೆ ಬಹುವಾಗಿ ಇಷ್ಟವಾಗುತ್ತಾರೆ ಎನ್ನುವುದನ್ನು ನಾನು ಒಪ್ಪಿಕೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ದೇಶದ ವರಿಷ್ಠ ಕಾನೂನು ಅಧಿಕಾರಿಗಳು ಬಹುಶಃ ವಿಐಪಿ ಪ್ರೇಕ್ಷಕರಾಗುತ್ತಾರೆ. ನಾನು ಕಾರ್ಯಕ್ರಮ ನೀಡುವ ಯಾವುದೇ ಸ್ಥಳಕ್ಕಿಂತ ಸರ್ವೋಚ್ಚ ನ್ಯಾಯಾಲಯದ ಎದುರು ನನಗೆ ಸಮಯಾವಕಾಶ ದೊರೆಯುವುದು ದುರ್ಲಭ ಎನ್ನುವುದು ನನಗೆ ಗೊತ್ತು.

ಇತರರ ವೈಯಕ್ತಿಕ ಸ್ವಾತಂತ್ರದ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ವೌನವು ಟೀಕೆಗೆ ಗುರಿಯಾಗದೇ ಇರುವುದಿಲ್ಲ,ಹೀಗಾಗಿ ನನ್ನ ಅಭಿಪ್ರಾಯ ಬದಲಾಗಿಲ್ಲ. ನಾನು ನನ್ನ ಟ್ವೀಟ್‌ಗಳನ್ನು ಹಿಂದೆಗೆದುಕೊಳ್ಳುವ ಅಥವಾ ಕ್ಷಮೆ ಯಾಚಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಈ ಟ್ವೀಟ್‌ಗಳು ಸ್ವಯಂ ಮಾತನಾಡುತ್ತವೆ ಎಂದು ನನಗನಿಸುತ್ತದೆ. ಪ್ರಶಾಂತ ಭೂಷಣ ಅವರ ಪ್ರಕರಣವನ್ನು ಪರಿಗಣಿಸಿದರೆ ನನ್ನ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಗೆ ಕನಿಷ್ಠ 20 ಗಂಟೆಗಳ ಸಮಯವನ್ನು ಹಂಚಿಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆಯನ್ನು ಹೊಂದಿದ್ದೇನೆ. ನನ್ನ ಹಾಗೆ ಸರದಿಯನ್ನು ಮುರಿಯುವ ಅದೃಷ್ಟವಿಲ್ಲದ ಇತರ ವಿಷಯಗಳು ಮತ್ತು ವ್ಯಕ್ತಿಗಳ ವಿಚಾರಣೆಗೆ ನನ್ನ ಈ ಸಮಯವನ್ನು ನೀಡುವ ಇಚ್ಛೆ ನನ್ನದು. ನೋಟು ನಿಷೇಧ ಅರ್ಜಿ,ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದನ್ನು ಪ್ರಶ್ನಿಸಿರುವ ಅರ್ಜಿ,ಚುನಾವಣಾ ಬಾಂಡ್‌ಗಳ ಕಾನೂನು ಬದ್ಧತೆಯ ವಿಷಯ ಅಥವಾ ಇಂತಹ ಇತರ ಅಸಂಖ್ಯಾತ ವಿಷಯಗಳ ವಿಚಾರಣೆ ಹೆಚ್ಚು ಜರೂರಿಯಾಗಿದೆ ಎಂದು ನಾನು ತಮಗೆ ಸಲಹೆ ನೀಡಬಹುದೇ? ಹಿರಿಯ ವಕೀಲ ಹರೀಶ ಸಾಳ್ವೆ ಅವರ ಮಾತನ್ನೇ ಕೊಂಚ ತಿರುಚಿ ಹೇಳುವುದಾದರೆ ‘ಹೆಚ್ಚು ಮಹತ್ವಪೂರ್ಣ ವಿಷಯಗಳಿಗೆ ನನ್ನ ಸಮಯ ಸಿಗುವುದಾದರೆ ಆಕಾಶ ಕಳಚಿ ಬೀಳುವುದೇ?’
 ಸರ್ವೋಚ್ಚ ನ್ಯಾಯಾಲಯವು ಈವರೆಗೆ ನನ್ನ ಟ್ವೀಟ್‌ಗಳ ಬಗ್ಗೆ ಏನನ್ನೂ ಘೋಷಿಸಿಲ್ಲ. ಆದರೆ ಅವುಗಳನ್ನು ನ್ಯಾಯಾಂಗ ನಿಂದನೆ ಎಂದು ಅದು ಘೋಷಿಸಿದರೆ ಹಾಗೆ ಮಾಡುವ ಮುನ್ನ ಈ ಟ್ವೀಟ್‌ಗಳು ನ್ಯಾಯಾಧೀಶರ ಮುಖಗಳಲ್ಲಿ ಕೊಂಚ ನಗು ಮೂಡಿಸುತ್ತವೆ ಎಂದು ನಾನು ಆಶಿಸಿದ್ದೇನೆ. ಅಲ್ಲದೆ ನನ್ನ ಒಂದು ಟ್ವೀಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಾತ್ಮಾ ಗಾಂಧಿಯವರ ಫೋಟೊದ ಬದಲು ಹರೀಶ ಸಾಳ್ವೆಯವರ ಫೋಟೊ ಹಾಕುವಂತೆ ನಾನು ಕೋರಿದ್ದೇನೆ. ಪಂಡಿತ ಜವಾಹರಲಾಲ್ ನೆಹರು ಅವರ ಫೋಟೋವನ್ನೂ ತೆಗೆದು ಮಹೇಶ ಜೇಠ್ಮಲಾನಿಯವರ ಫೋಟೊವನ್ನು ಹಾಕುವಂತೆಯೂ ಈಗ ಸೂಚಿಸುತ್ತಿದ್ದೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News