ದಾಖಲೆ ನಕಲು ಮಾಡಿದ ಆರೋಪ: ಇಬ್ಬರು ಬಿಡಿಎ ಅಧಿಕಾರಿಗಳ ಅಮಾನತು

Update: 2021-03-12 12:22 GMT

ಬೆಂಗಳೂರು, ನ.13: ದಾಖಲೆಗಳನ್ನು ನಕಲು ಮಾಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಮೂಲಗಳ ಪ್ರಕಾರ ಬಿಡಿಎದ ಸೈಟ್ ಹಂಚಿಕೆ ವಿಭಾಗದ ಬಿ.ವೆಂಕಟರಮಣಪ್ಪ ಮತ್ತು ಅಕೌಂಟ್ಸ್ ವಿಭಾಗದ ಹಿರಿಯ ವಿಭಾಗೀಯ ಸಹಾಯಕ ಎಂ.ಮರಿಗೌಡ ಅವರನ್ನು ನ.4ರಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಮತ್ತು ಈ ಕುರಿತಂತೆ ಪ್ರತ್ಯೇಕ ವಿಚಾರಣೆ ನಡೆಯುತ್ತಿದೆ ಎಂದು ಬಿಡಿಎ ಆಯುಕ್ತ ಎಚ್.ಆರ್ ಮಹಾದೇವ್ ತಿಳಿಸಿದ್ದಾರೆ.

ಇಬ್ಬರ ಪೈಕಿ ಬಿ.ವೆಂಕಟರಮಣಪ್ಪ ಅವರ ಮೇಲೆ ಗಂಭೀರ ಕ್ರಿಮಿನಲ್ ಆರೋಪವಿದ್ದು, ಇದರಿಂದ ಸಂಸ್ಥೆಗೆ ನಷ್ಟ ಉಂಟಾಗಿದೆ. ಮತ್ತೋರ್ವ ಅಮಾನತುಗೊಂಡ ಅಧಿಕಾರಿ ಎಂ.ಮರಿಗೌಡ ಅವರು ತಮ್ಮ ವೃತ್ತಿ ಜೀವನದ ಪ್ರಮೋಷನ್ ಪಡೆಯಲು ಪರೀಕ್ಷಾ ದಾಖಲೆಗಳನ್ನು ನಕಲು ಮಾಡುವ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ವೆಂಕಟರಮಣಪ್ಪ ಅವರ ವಿರುದ್ಧ 9 ಆರೋಪಗಳಿದ್ದು, ಅವರಿಂದ ಬಿಡಿಎಗೆ ಕನಿಷ್ಠ 3 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹಿರಿಯ ಬಿಡಿಎ ಅಧಿಕಾರಿಯೊಬ್ಬರ ಪ್ರಕಾರ, ಜುಲೈ 2018 ರಲ್ಲಿ ಜೆ.ಪಿ.ನಗರ 8ನೇ ಹಂತದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾಗಿರುವ ಸೈಟ್‍ಗಳನ್ನು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಪಡೆಯಲು ವ್ಯವಸ್ಥಾಪಕರಿಗಾಗಿ ಈ ಹಿಂದೆ ಬುಕ್ ಮಾಡಲಾಗಿತ್ತು.

ವೆಂಕಟರಮಣಪ್ಪ ಅವರು ತಮ್ಮ ಪತ್ನಿ, ಸಹೋದರರ ಹೆಸರಿನಲ್ಲಿ ಸೈಟ್‍ಗಳನ್ನು ಖಾತ್ರಿಪಡಿಸಿಕೊಂಡಿದ್ದರು. ಕೇವಲ ತಮ್ಮ ಕುಟುಂಬಸ್ಥರು ಮಾತ್ರವಲ್ಲದೇ ತಮ್ಮ ಸಹೋದರ ಮತ್ತು ಸಹ ಸಹೋದರನ ಕುಟುಂಬಸ್ಥರ ಹೆಸರಿನಲ್ಲೂ ಅಕ್ರಮವಾಗಿ ಸೈಟ್ ಪಡೆದಿರುವ ಗಂಭೀರ ಆರೋಪವಿದೆ. ಈ ಬಗ್ಗೆ ಮೊದಲೇ ಬಿಡಿಎ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿ ಅಮಾನತು ಮಾಡಿದ್ದರು. ಆದರೆ, ವೆಂಕಟರಮಣಪ್ಪ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಅದನ್ನು ಹಿಂತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇತ್ತೀಚೆಗಷ್ಟೇ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ಮತ್ತು ಹಾರೋಹಳ್ಳಿಯಲ್ಲಿ ಸೈಟ್ ಪಡೆದ ಪ್ರಕರಣದಲ್ಲಿ ಅಮಾನತಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News