'ಮಾದರಿ ಪಾರಂಪರಿಕ ಗ್ರಾಮ' ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

Update: 2020-11-13 14:34 GMT

ಬೆಂಗಳೂರು, ನ. 13: ನಮ್ಮ ಹಿಂದಿನ ಗ್ರಾಮೀಣ ಸಂಸ್ಕೃತಿ ಮತ್ತು ಸ್ವಾವಲಂಬನೆಯ ಬದುಕನ್ನು ನಾವೂ ಎಂದಿಗೂ ಮರೆಯಬಾರದು. ಈಗಿನ ಒತ್ತಡದ ಮನೋಭಾವವುಳ್ಳ ಬದುಕಿನಲ್ಲಿರುವ ಜನತೆಗೆ ಮತ್ತು ಮಕ್ಕಳಿಗೆ ನಮ್ಮ ಹಿಂದಿನ ಪರಂಪರೆಯನ್ನು ನೆನಪಿಸುವ ಉದ್ದೇಶದಿಂದ ಈ `ಮಾದರಿ ಪಾರಂಪರಿಕ ಗ್ರಾಮ'ವನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಗರದ ಜಕ್ಕೂರಿನ ಶ್ರೀರಾಮಪುರ ಕ್ರಾಸ್‍ನಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿ ಅಭಿವೃದ್ಧಿಪಡಿಸಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮಾದರಿ ಪಾರಂಪರಿಕ ಗ್ರಾಮ ನಮಗೆ ನಮ್ಮ ಹಿಂದಿನ ಗ್ರಾಮೀಣ ಸಂಸ್ಕೃತಿ ಮತ್ತು ಸ್ವಾವಲಂಬಿ ಬದುಕಿನ ಪರಿಚಯವನ್ನು ಭವಿಷ್ಯದ ಜನಾಂಗಕ್ಕೆ ತೋರಿಸುವ ಒಂದು ವಿಶೇಷ ಯೋಜನೆಯಾಗಿದೆ ಎಂದರು.

ಶಿಲ್ಪಾಕಲಾ ಕುಟೀರದ ಖ್ಯಾತ ಕಲಾವಿದ ಡಾ.ಟಿ.ಬಿ.ಸೊಲಬಕ್ಕನವರ ತಂಡ ಮೂರು ವರ್ಷಗಳಿಂದ ಈ ಮಾದರಿ ಗ್ರಾಮವನ್ನು ಅತ್ಯಂತ ಸುಂದರವಾಗಿ ಅರ್ಥಗರ್ಭಿತವಾಗಿ ರೂಪಿಸಿದ್ದಾರೆ ಎಂದು ಕಲಾವಿದರನ್ನು ಶ್ಲಾಘಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಭವಿಷ್ಯದಲ್ಲಿ ಇದನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಇದೊಂದು ವೈಶಿಷ್ಟಪೂರ್ಣ ಯೋಜನೆಯಾಗಿದ್ದು, ಕರ್ನಾಟಕದ ಪ್ರತಿ ಜಿಲ್ಲೆಯ ವಿಶೇಷಗಳನ್ನು ಮತ್ತು ಅವುಗಳ ಕಲಾವಂತಿಕೆಯನ್ನು ಅದ್ಭುತವಾಗಿ ಕಲಾಕೃತಿಗಳಲ್ಲಿ ನಿರ್ಮಿಸಲಾಗಿದೆ. ಇನ್ನೂ ಕೆಲವೇ ತಿಂಗಳುಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಸಿದ್ಧಗೊಳ್ಳಲಿದೆ, ಶುಲ್ಕದ ಬಗ್ಗೆ ಶೀಘ್ರದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ಈ ಯೋಜನೆ ಆರಂಭವಾಗಿ 3 ವರ್ಷಗಳಾಗಿದ್ದು, ಹಿಂದಿನ ಸರಕಾರದ ಈ ಯೋಜನೆಗೆ ಆರ್ಥಿಕ ನೆರವು ನೀಡಿ ಪೂರ್ಣಗೊಳಿಸಿದ ಸಿಎಂಗೆ ಧನ್ಯವಾದಗಳು. ಆಧುನಿಕ ಪ್ರಪಂಚ ತನ್ನ ಮೂಲವನ್ನೇ ಮರೆತಿದ್ದು, ಬೆಂಗಳೂರಿನಂತ ಮಹಾನಗರದಲ್ಲಿ ಮಾದರಿ ಗ್ರಾಮೀಣ ಬದುಕಿನ ಈ ಸ್ಥಳ ಪ್ರಖ್ಯಾತ ಪ್ರವಾಸಿತಾಣವಾಗಲಿದೆ ಎಂದ ಅವರು, ಪಕ್ಕದಲ್ಲಿರುವ ಕೆರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಿಎಂಗೆ ಮನವಿ ಮಾಡಿದರು.

ಮಾದರಿ ಪಾರಂಪರಿಕ ಗ್ರಾಮ ವಿಶೇಷ: ಮಾದರಿ ಪಾರಂಪರಿಕ ಗ್ರಾಮವನ್ನು ಅಂದಾಜು 11.68 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಕಲೆ ಮತ್ತು ಕಲ್ಪನೆಯ ಕಲಾವಿದ ಡಾ.ಟಿ.ಬಿ.ಸೊಲಬಕ್ಕನವರ ಅವರದ್ದು. ಈ ಪಾರಂಪರಿಕ ಗ್ರಾಮದಲ್ಲಿ ನಾವೂ ವಿಶೇಷವಾಗಿ ನಮ್ಮ ಗ್ರಾಮೀಣ ಕರ್ನಾಟಕದ ಸ್ವಾವಲಂಬಿ ಗ್ರಾಮದಲ್ಲಿರುವ ಅಗಸಿ, ಬಾಗಿಲು, ಅಕ್ಕ-ಪಕ್ಕದಲ್ಲಿ ಕುರಿ-ಆಡುಗಳ ಸಾಕಾಣಿಕೆ, ಮಕ್ಕಳ ಗೋಲಿ ಆಟ, ಬುಡುಬುಡಿಕೆ ಹೇಳುವವ, ಒಕ್ಕಲಿಗರ ಮನೆ, ಹಳ್ಳಿ ವೈದ್ಯೆ, ಕಿರಾಣಿ ಅಂಗಡಿ, ಸಿಂಪಿಗರ, ಪತ್ತಾರ, ಬ್ರಾಹ್ಮಣರ, ಮಂಗಳೂರು, ಶಾನಭೋಗರ, ಗೌಡರ, ಮಾಳಿಗೆ ಮನೆ, ತೋಟ್ಟಿ ಮನೆ, ಗಾಣಿಗೇರ, ಗ್ರಾಮೀಣ ಮನೆಯಲ್ಲಿ ಶಾವಿಗೆ ಮಾಡುವವರ ಮನೆ, ಕುರುಬರ ಮನೆ, ಅಗಸರ ಮನೆ, ಶಿಲ್ಪಕಾರರ ಮನೆ, ಆಟಿಕೆ ನಿರ್ಮಾಣಕಾರರ ಮನೆ, ಪಿಂಗಾರ ಮನೆ, ಬಳೆಗಾರ ಮನೆ, ಕಂಬಾರ ಮನೆ, ಬಡಿಗರ ಮನೆ, ಕೊಡಗು ಮನೆ, ಶಾಲಿ ಗುಡಿ, ಪಂಚಾಯಿತಿ ಕಟ್ಟೆ, ನೀರು ಸೇದುವ ಬಾವಿ ದೃಶ್ಯ, ಮೀನುಗಾರರ ಮನೆ, ಸುಣಗಾರ ಬಟ್ಟೆ  ನಿರ್ಮಾಣ, ಚಮ್ಮಾರ ಮನೆ, ಲಂಬಾಣಿ ಮನೆ, ಚಕ್ಕಡಿ ಬಂಡಿ, ಗ್ರಾಮೀಣ ಮಕ್ಕಳ ಕ್ರೀಡೆಗಳನ್ನು ನೋಡಬಹುದು. ಹಾಗೆಯೇ ನಮ್ಮ ಸಾಂಪ್ರದಾಯಿಕ ಬೇಸಾಯ ಪದ್ಧತಿಯಲ್ಲಿರುವ ರಂಟೆ, ಕುಂಟೆ, ಉಳುಮೆ, ಬಿತ್ತುವ ಸನ್ನಿವೇಶಗಳನ್ನು ಇಲ್ಲಿ ಕಾಣಬಹುದು. ಅದೇ ರೀತಿ ದನಗಳ ಸಂತೆ, ರೈತರ ಸಂತೆ, ದೇಸಿ ಕುಸ್ತಿ ಕಣ, ಕಪಲಿ ಬಾವಿ, ಕಣ ಇಲ್ಲಿ ಕಾಣಬಹುದು.

ಕರ್ನಾಟಕದ ಬೇರೆ ಬೇರೆ ಪ್ರಾಂತ್ಯದ ಜಾನಪದ ಪ್ರಕಾರಗಳ ಮತ್ತು ಜನಪದ ಮೇಳಗಳ ಮಾದರಿ ಶಿಲ್ಪಕಲಾಕೃತಿಗಳು(ದೊಡ್ಡಾಟ, ಯಕ್ಷಗಾನ, ಮೂಡಲಪಾಯ ಬಯಲಾಟ, ಹುಲಿವೇಷ, ಜಗ್ಗಲಿಗೆ, ಕರಡಿ, ಮಜಲು ವೀರಗಾಸೆ, ರಣ ಹಲಗಿ, ಬುರ್ರಕಥಾ, ನಗಾರಿ, ಗೊಂದಲಿಗರು, ಕಿನ್ನರಿ ಜಫಗಿ, ಕರಗ, ಪೂಜಾ ಕುಣಿತ, ಸೋಮನ ಕುಣಿತ, ನಂದಿಕೋಲು ಕುಣಿತ, ಜೋಗತಿ-ಚೌಡಕಿ, ಕಂಸಾಳೆ, ಗೊರವರ-ಕರಡಿ, ಗೊರವರ ಕುಣಿತ, ಉತ್ತರಿ, ಆಟಿಕಳಂಜ, ಕೀಲು ಕುದುರೆ ಕುಣಿತ, ಕುಡುಬಿಯರ ಕುಣಿತ, ಕೊರಗೆ ಡೋಲು ಕುಣಿತ, ಸಿದ್ದಿಯರ ಪುಗಡಿ ಕುಣಿತ, ಹಾಲಕ್ಕಿ ಒಕ್ಕಲಿಗರ ಗಮಟೆ ಪಾಂಗ, ಗೌಳಿಗರ ಕುಣಿತ, ಕಾಡು ಗೊಲ್ಲರ ಗಣೇಪದ, ಲಂಬಾಣಿಯರ ಕುಣಿತ, ಬಹುರೂಪಿ-ವೇಷಗಾರರು, ಪಾರಿಜಾರ, ಸೂತ್ರದ ಗೊಂಬೆಯಾಟ, ಮಾಂಕಾಳಿ ಕುಣಿತ, ಕಾವಡಿ ಕುಣಿತ, ಗೊಂಡರ ಮಂಡರ, ಭೂತಾರಾಧನೆ, ಪಾಳೆಗಾರ ವೇಷ, ಸುಡುಗಾಡು ಸಿದ್ಧ, ಮಳೆರಾಯನ ಪೂಜೆ-ಉರ್ಜಿ, ಕೊಂಡಾ ಮಾಮಾ (ಕುರಕುರ ಮಾಮಾ), ಗಾರುಡಿ ಗೊಂಬೆ ಕುಣಿತ) ಕರ್ನಾಟಕ ಗ್ರಾಮೀಣ ಕ್ರೀಡೆಗಳ ಮಾದರಿ ಶಿಲ್ಪಕೃತಿಗಳು (ಬುಗುರು ಆಟ, ಚಮೆ, ಲಿಂಬು ಆಟ, ಬಳಿ ಚುಕ್ಕ ಆಟ, ಎಡೆ ಮಟ್ಟೆ ಆಟ, ಕಣ್ಣಾಮುಚ್ಚಾಲೆ ಆಟ, ಕಪ್ಪೆ ಜಿಗತ ಆಟ, ಗುಬ್ಬು ಮನೆ ಆಟ, ಮೂರು ಕಾಲಿನ ಓಟದಾಟ, ಹಗ್ಗ ಜಿಗಿಯುವ ಆಟ, ಚೋರಿ-ಚೋರರ ಆಟ, ನಂದಿ ಕೋಲು ಆಟ, ಜಕ್-ಬುಕ್ ಆಟ, ಕುಂಟಾ ಬಿಲ್ಲೆ ಆಟ, ಗಡಿಗೆ ಒಡೆಯುವಾ, ಮುಷ್ಟಿ ಬಗ್ಗಿಸುವ ಆಟ, ಜಡೆಯ ಲಿಂಗದ ಆಟ) ಹೀಗೆ ಇನ್ನೂ ಹಲವು ಸನ್ನಿವೇಶಗಳು ಮತ್ತು ಕಲಾತ್ಮಕ ಶೈಲಿಯಲ್ಲಿರುವ ಉಪಾಹಾರ ಗೃಹ ಇರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News