ನರೇಗಾ ಕಾಮಗಾರಿಯಲ್ಲಿ ಯಂತ್ರಗಳ ಅಕ್ರಮ ಬಳಕೆ ಪ್ರಶ್ನಿಸಿದ ಪತ್ರಕರ್ತನ ಮೇಲೆ ದಾಳಿ

Update: 2020-11-13 15:20 GMT

ಹೊಸದಿಲ್ಲಿ,ನ.13: ನರೇಗಾ ಕಾಮಗಾರಿಯಲ್ಲಿ ಕಾರ್ಮಿಕರಿಗೆ ಕೆಲಸ ಒದಗಿಸುವ ಬದಲು ಅಕ್ರಮವಾಗಿ ಯಂತ್ರಗಳನ್ನು ಬಳಸುತ್ತಿರುವುದನ್ನು ಪ್ರಶ್ನಿಸಿದ ಸ್ಥಳೀಯ ಪತ್ರಕರ್ತನ ಮೇಲೆ ಗ್ರಾಮ ಪ್ರಧಾನರ ಕುಟುಂಬವು ತೀವ್ರ ದಾಳಿಯನ್ನು ನಡೆಸಿರುವ ಘಟನೆ ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ಧವುರಾ ಗ್ರಾಮದಲ್ಲಿ ನಡೆದಿದೆ.

ನ.7ರಂದು ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಬುಂದೇಲಖಂಡ್ ಟೈಮ್ಸ್ ಟಿವಿಯ ವರದಿಗಾರ ವಿನಯ ತಿವಾರಿ (35)ವೀಡಿಯೊ ಚಿತ್ರೀಕರಿಸಿಕೊಳ್ಳುತ್ತಿ ದ್ದರು. ಇದನ್ನು ಆಕ್ಷೇಪಿಸಿದ ಗ್ರಾಮ ಪ್ರಧಾನ ಬಬಿತಾ ಮಿಶ್ರಾರ ಪುತ್ರರು ಲಾಠಿಗಳಿಂದ ಥಳಿಸಿದ್ದು,ಹಲವಾರು ಮೂಳೆ ಮುರಿತದ ಗಾಯಗಳಾಗಿರುವ ತಿವಾರಿಯನ್ನು ಝಾನ್ಸಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

 ತಿವಾರಿಯವರ ದೂರಿನ ಮೇರೆಗೆ ಬಬಿತಾ ಶರ್ಮಾ,ಆಕೆಯ ಪತಿ ಮತ್ತು ಮೂವರು ಪುತ್ರರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು,ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಲಲಿತಪುರ ಎಸ್‌ಪಿ ಮಂಝರ್ ಬೇಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಗಳು ತಿವಾರಿಯವರ ವೀಡಿಯೊ ಕ್ಯಾಮೆರಾ ಮಾತ್ರವಲ್ಲ,ಅವರ ಮೊಬೈಲ್ ಮತ್ತು ಹಣವನ್ನೂ ಕಿತ್ತುಕೊಂಡಿದ್ದಾರೆ.

ಆರೋಪಿಗಳ ಬಳಿ ಪರವಾನಿಗೆಯಿದ್ದ ಪಿಸ್ತೂಲು ಇತ್ತು ಮತ್ತು ಗುಂಡು ಹಾರಿಸುವುದಾಗಿ ತಿವಾರಿಗೆ ಬೆದರಿಕೆಯೊಡ್ಡಿ ತಾನು ಹಫ್ತಾ ವಸೂಲಿಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಬಲವಂತಗೊಳಿಸಿದ್ದರು. ಇದೇ ವೇಳೆ ತಿವಾರಿ ರಕ್ಷಣೆಗಾಗಿ ಅವರ ಸೋದರ ಸ್ಥಳವನ್ನು ತಲುಪಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಿವಾರಿಯವರ ಮೇಲಿನ ದಾಳಿಯನ್ನು ಖಂಡಿಸಿರುವ ಅಂತರ್ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಮತ್ತು ಅದರ ಭಾರತೀಯ ಘಟಕ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ, ಪ್ರಕರಣದ ತನಿಖೆ ನಡೆಸಲು ಮತ್ತು ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ವಿಚಾರಣಾ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಗ್ರಹಿಸಿವೆ.

ಇದು ತಿವಾರಿಯವರ ಮೇಲಿನ ಮೊದಲ ದಾಳಿಯಲ್ಲ, ರಾಜ್ಯದಲ್ಲಿ ಅಕ್ರಮ ಮದ್ಯಮಾರಾಟದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಅವರ ಮೇಲೆ ಹಿಂದೆ ಹಲ್ಲೆ ನಡೆದಿತ್ತು.

ದಾಳಿಕೋರರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಗೂಂಡಾಗಳಾಗಿದ್ದಾರೆ ಎಂದು ಟ್ವೀಟ್‌ನಲ್ಲಿ ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಸರಕಾರವು ಆಯ್ದ ಕೆಲವೇ ಪತ್ರಕರ್ತರ ಹಕ್ಕುಗಳನ್ನು ಮಾತ್ರ ರಕ್ಷಿಸುವುದೇ ಅಥವಾ ತಿವಾರಿಯವರಂತಹ ಪತ್ರಕರ್ತರಿಗೂ ನೆರವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News