ಜಿಎಸ್‌ಟಿ ಮಂಡಳಿಯ ಸಭೆ ಕರೆಯುವಂತೆ ಕೇಂದ್ರಕ್ಕೆ ಪ.ಬಂಗಾಳ ವಿತ್ತಸಚಿವರ ಆಗ್ರಹ

Update: 2020-11-14 18:05 GMT

ಕೋಲ್ಕತಾ,ನ.14: ತೆರಿಗೆ ಸಂಗ್ರಹದಲ್ಲಿಯ ಕೊರತೆಯನ್ನು ತುಂಬಿಕೊಳ್ಳಲು ಕೇಂದ್ರದ ಸಾಲಗಳ ಕುರಿತು ಚರ್ಚಿಸಲು ಸರಕುಗಳು ಮತ್ತು ಸೇವಾ ತೆರಿಗೆಗಳ (ಜಿಎಸ್‌ಟಿ) ಮಂಡಳಿಯ ಸಭೆಯನ್ನು ಕರೆಯುವಂತೆ ಆಗ್ರಹಿಸಿ ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರಾ ಅವರು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ಜಿಎಸ್‌ಟಿ ಸಂಗ್ರಹದಲ್ಲಿ ಕೊರತೆಯನ್ನು ತುಂಬಿಕೊಳ್ಳಲು ಕೇಂದ್ರ ಸರಕಾರವು ಆರ್‌ಬಿಐನ ವಿಶೇಷ ಗವಾಕ್ಷಿಯಿಂದ ಸಾಲ ಪಡೆದುಕೊಳ್ಳಬೇಕು ಎಂದು ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ನಡೆದಿದ್ದ ಜಿಎಸ್‌ಟಿ ಸಭೆಗಳಲ್ಲಿ ಹಲವಾರು ರಾಜ್ಯಗಳು ವಾದಿಸಿದ್ದನ್ನು ಮಿತ್ರಾ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೇಲ್ತೆರಿಗೆ ಸಂಗ್ರಹ ಅವಧಿಯನ್ನು 2022ರ ಆಚೆಗೆ ವಿಸ್ತರಿಸಲು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿತ್ತು. ಆದರೆ ಸರಕಾರವು 2021 ಜನವರಿವರೆಗಿನ ಅಂದಾಜು ಕೊರತೆ 1.10 ಲ.ಕೋ.ಗಳ ಮೂರನೇ ಎರಡು ಭಾಗದಷ್ಟು ಸಾಲವನ್ನು ತಾನು ಪಡೆದುಕೊಳ್ಳುವ ಮತ್ತು ರಾಜ್ಯಗಳು ಉಳಿಕೆ 72,000 ಕೋ.ರೂ.ಗಳ ಕೊರತೆಯನ್ನು 2022,ಜೂನ್ ಬಳಿಕವಷ್ಟೇ ಪಡೆದುಕೊಳ್ಳುವ ಪ್ರಸ್ತಾವನೆಯನ್ನು ಮುಂದಿರಿಸಿತ್ತು. ಈ ನೂತನ ಪ್ರಸ್ತಾವನೆಯು 72,000 ಕೋ.ರೂ.ಗಳ ಸಾಲವನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ರಾಜ್ಯಗಳಿಗೆ ಜಿಎಸ್‌ಡಿಪಿಯ ಶೇ.0.5ರಷ್ಟು ಹೆಚ್ಚುವರಿ ಸಾಲ ಮಿತಿಯನ್ನು ಒದಗಿಸಿತ್ತು ಎಂದು ಮಿತ್ರಾ ತಿಳಿಸಿದ್ದಾರೆ.

ಆರ್‌ಬಿಐನ ವಿಶೇಷ ಗವಾಕ್ಷಿಯಿಂದ ಕೇಂದ್ರವು 1.10 ಲ.ಕೋ.ರೂ.ಗಳ ಸಾಲವನ್ನು ಪಡೆಯುವುದರಿಂದ ಅದರ ವಿತ್ತೀಯ ಕೊರತೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದಿರುವ ಅವರು,ವಿಶೇಷ ಗವಾಕ್ಷಿಯಿಂದ ಶೇ.5ರ ಬಡ್ಡಿದರದಲ್ಲಿ ಸಾಲ ಪಡೆಯಲು ಕೇಂದ್ರಕ್ಕೆ ಸಾಧ್ಯವಿದೆ,ಆದರೆ ರಾಜ್ಯಗಳು ಶೇ.6.8ರಷ್ಟು ಬಡ್ಡಿಯನ್ನು ತೆರಬೇಕಾಗುತ್ತದೆ ಮತ್ತು ಇದು ಅವುಗಳಿಗೆ ಹೊರೆಯಾಗುತ್ತದೆ. ಬಡ್ಡಿದರಗಳಲ್ಲಿ ವ್ಯತ್ಯಾಸವಾಗುವುದರಿಂದ ಕೇಂದ್ರವೇ ವಿಶೇಷ ಗವಾಕ್ಷಿಯಿಂದ ಸಂಪೂರ್ಣ ಸಾಲವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News