ಒಂದು ವರ್ಷದಿಂದ ವೇತನವಿಲ್ಲದೇ ನರಳುತ್ತಿರುವ ಹೊರಗುತ್ತಿಗೆ ನೌಕರರು

Update: 2020-11-16 10:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ. 15: ರಾಜ್ಯದಲ್ಲಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ ಬರುವ ಹಾಸ್ಟೆಲ್‍ಗಳಲ್ಲಿ ಕೆಲಸ ಮಾಡುತ್ತಿರುವಂತಹ ಹೆಚ್ಚುವರಿ ಹೊರಗುತ್ತಿಗೆ ನೌಕರರು ಒಂದು ವರ್ಷದಿಂದಲೂ ವೇತನ ಸಿಗದೇ ಪರದಾಡುವಂತಾಗಿದೆ.

ಕೊರೋನ ಸೋಂಕು ಎಲ್ಲ ಕಡೆಗಳಲ್ಲಿ ವ್ಯಾಪಕವಾಗಿ ಹರಡಿ ಇಡೀ ವಾಣಿಜ್ಯ ವಹಿವಾಟನ್ನೇ ಅಟ್ಟಡಗಿಸಿಬಿಟ್ಟಿದೆ. ಇಂತಹ ಸಮಯದಲ್ಲಿ ಅತ್ಯಂತ ಕಷ್ಟದಲ್ಲಿ ಬದುಕುತ್ತಿರುವ ಹಾಸ್ಟೆಲ್‍ಗಳಲ್ಲಿ ದುಡಿಯುವ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಸಿಗದಿದ್ದರಿಂದ ಕಂಗಾಲಾಗಿದ್ದಾರೆ. ಬದುಕು ನಡೆಸಲು ಪರದಾಡುತ್ತಿದ್ದಾರೆ.

ಸಾಮಾನ್ಯ ವ್ಯಕ್ತಿಯ ಕುಟುಂಬದಲ್ಲಿ ತಿಂಗಳಿಗೆ ಕನಿಷ್ಠ ಆದಾಯ ಸಿಗದಿದ್ದಲ್ಲಿ ಕುಟುಂಬವನ್ನು ನಿರ್ವಹಣೆ ಮಾಡುವುದು ಅತ್ಯಂತ ಕಷ್ಟ. ಅಂತಹ ಸಮಯದಲ್ಲಿ ಕೊರೋನ ಸೋಂಕು ಹರಡಿ, ಜನರು ಮನೆಗಳಿಂದ ಹೊರ ಬಾರದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಿದ್ದರೂ, ಸರಕಾರ ಹಾಗೂ ಅಧಿಕಾರಿಗಳು ಹಾಸ್ಟೆಲ್‍ಗಳಲ್ಲಿ ದುಡಿದವರಿಗೆ ವೇತನ ನೀಡದೇ ತಾರತಮ್ಯ ಎಸಗಿರುವುದು ಎಷ್ಟು ಸರಿ..?

ಕೊರೋನ ಎಂತಹವರನ್ನು ನಡುಗಿಸಿಬಿಟ್ಟಿದೆ. ಹಾಸ್ಟೆಲ್‍ಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಶಾಲಾ-ಕಾಲೇಜು ಹಾಗೂ ಹಾಸ್ಟೆಲ್‍ಗಳನ್ನು ಕಳೆದ ಎಂಟು ತಿಂಗಳಿನಿಂದ ಮುಚ್ಚಿದ್ದರಿಂದ ಕೆಲಸವಿಲ್ಲ. ಅಲ್ಲದೆ, ಹೊರಗಡೆ ಕೆಲಸಕ್ಕೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂಧಿಗ್ನ ಸಂದರ್ಭದಲ್ಲಿ ಬಾಕಿ ವೇತನ ನೀಡಿದ್ದರೆ ಬಡ ನೌಕರರಿಗೆ ಒಂದಷ್ಟು ನೆರವಾದಂತಾಗುತ್ತಿತ್ತು ಎಂದು ಸರಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಮುಖಂಡ ಹನುಮೇಗೌಡ ಹೇಳಿದ್ದಾರೆ.

ರಾಜ್ಯ ಸರಕಾರದ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳಲಿ 24 ಸಾವಿರ ಜನರು ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರು, ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇವರನ್ನು ನೇರ ನೇಮಕಾತಿ ಎಂಬ ನೆಪವೊಡ್ಡಿ ಸರಕಾರ ಕೆಲಸದಿಂದ ತೆಗೆಯಿತು.

ಆ ಸಂದರ್ಭದಲ್ಲಿ ಸಂಘಟನೆಗಳ ಮುಂದಾಳತ್ವದಲ್ಲಿ ಹೋರಾಟ ಮಾಡಿದಾಗ ಹೆಚ್ಚುವರಿ ಹೊರಗುತ್ತಿಗೆ ನೌಕರರು ಎಂದು ಪರಿಗಣಿಸಿ ಕೆಲಸದಲ್ಲಿ ಮುಂದುವರಿಸಲಾಯಿತು. ಸುಮಾರು ವರ್ಷದಿಂದಲೂ ಬಾಕಿ ವೇತನ ನೀಡುವಂತೆ ಹೋರಾಟ ಮಾಡಲಾಯಿತು. ಆ ಸಂದರ್ಭದಲ್ಲಿ ಸರಕಾರ ಆರ್ಥಿಕ ಇಲಾಖೆ ಮೂಲಕ ಹೆಚ್ಚುವರಿ ಹೊರಗುತ್ತಿಗೆ ನೌಕರರ ಸಂಬಳಕ್ಕಾಗಿ 17 ಕೋಟಿ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಆದರೆ, ಅದನ್ನು ನೌಕರರಿಗೆ ಪಾವತಿ ಮಾಡಲು ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಹನುಮೇಗೌಡ ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಹೊರಗುತ್ತಿಗೆ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು, ಜಂಟಿ ನಿರ್ದೇಶಕರುಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಅವರಿಂದ ನಿರೀಕ್ಷಿತ ಉತ್ತರವೂ ಸಿಕ್ಕಿಲ್ಲ. ಈ ಮೂಲಕ ಹೊರ ಗುತ್ತಿಗೆ ನೌಕರರ ಬಗ್ಗೆ ಅವರಿಗಿರುವ ಕಾಳಜಿ ಎಷ್ಟೆಂದು ಅರ್ಥವಾಗುತ್ತದೆ ಎಂದು ಸರಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಕೊರೋನ ಕಾರಣಕ್ಕಾಗಿ ಸರಕಾರ ಘೋಷಿಸಿದ ಲಾಕ್‍ಡೌನ್ ಸಮಯದಲ್ಲಿ ಹೊರಗುತ್ತಿಗೆ ನೌಕರರು ಕೆಲಸ ಮತ್ತು ಸಂಬಳ ಇಲ್ಲದೆ ಬಹಳ ಕಷ್ಟದಿಂದ ಇಡೀ ಕುಟುಂಬ ನಿರ್ವಹಣೆ ಮಾಡುವುದು ಸಮಸ್ಯೆಯಾಗಿತ್ತು. ಸರಕಾರ ಹಾಗೂ ಅಧಿಕಾರಿಗಳು ಬೇರೆ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಕೊರೋನ ಸಮಯದಲ್ಲಿನ ಸಂಬಳವನ್ನು ಕೊಟ್ಟಿರುತ್ತಾರೆ. ಆದರೆ, ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ವೇತನ ಕೊಡದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ಅಪಾದಿಸಿದರು.

ಕಳೆದ 10 ವರ್ಷಗಳಿಂದಲೂ ಹಾಸ್ಟೆಲ್‍ನಲ್ಲಿ ಹೊರಗುತ್ತಿಗೆ ನೌಕರರಳಾಗಿ ಕೆಲಸ ಮಾಡುತ್ತಿದ್ದೆ. ಆದರೆ, ಅಧಿಕಾರಿಗಳು ಇತ್ತೀಚಿಗೆ ನಾವು ಬೇರೆಯವರನ್ನ ನೇಮಕ ಮಾಡಿಕೊಳ್ಳಲಿದ್ದೇವೆ. ನಿಮ್ಮನ್ನು ಕೈ ಬಿಡ್ತಿದ್ದೇವೆ ಅಂತ ಮಾಹಿತಿ ನೀಡಿದರು. ಬಳಿಕ ನಾವೆಲ್ಲರೂ ಸೇರಿ ಹೋರಾಟ ಮಾಡಿದ ಬಳಿಕ ಹೆಚ್ಚುವರಿಯಾಗಿ ನೇಮಕ ಮಾಡಿಕೊಂಡರು. ಅನಂತರ ಕೆಲಸ ಮಾಡ್ತಾನೆ ಇದೀವಿ. ಆದರೆ, ಇನ್ನೂ ಸಂಬಳನೇ ಕೊಟ್ಟಿಲ್ಲ. ಮನೆಯನ್ನು ನಡೆಸೋಕೆ ಕಷ್ಟ ಆಗುತ್ತಿದೆ.

ರಾಮಯ್ಯ, ಎಸ್ಸಿ-ಎಸ್ಟಿ ಹಾಸ್ಟೆಲ್ ಹೊರಗುತ್ತಿಗೆ ನೌಕರರು

ಒಂದು ವರ್ಷದಿಂದ ಮಾಡಿದ ಕೆಲಸಕ್ಕೆ ಇನ್ನೂ ದುಡ್ಡೇ ಬಂದಿಲ್ಲ. ಕೊರೋನ ಸೋಂಕು ಹರಡುತ್ತಿರೋದರಿಂದ ನಾವು ಹೊರಗಡೆ ಹೋಗಿ ದುಡಿಯೋಕೆ ಆಗುತ್ತಿಲ್ಲ. ಇನ್ನು, ಲಾಕ್‍ಡೌನ್ ಮಾಡಿದಾಗಲಂತೂ ಸತ್ತು ಬದಕಿದಂತಾಗಿದೆ. ಅನ್ನ, ನೀರಿಲ್ಲದೇ ತುಂಬಾ ಕಷ್ಟ ಪಟ್ಟೆವು. ಆದರೆ, ಅಧಿಕಾರಿಗಳಿಗೆ ನಮ್ಮ ನೋವು ಕೇಳಿಸುತ್ತಲೇ ಇಲ್ಲ.

- ಪಾರ್ವತಮ್ಮ, ಒಬಿಸಿ ಹಾಸ್ಟೆಲ್ ಹೊರಗುತ್ತಿಗೆ ನೌಕರರು

ಹೆಚ್ಚುವರಿ ಹೊರಗುತ್ತಿಗೆ ನೌಕರರ ಬಾಕಿ ವೇತನ ಮತ್ತು ಕೊರೋನ ಸಮಯದಲ್ಲಿನ ಎಲ್ಲ ಹಾಸ್ಟೆಲ್ ಹೊರಗುತ್ತಿಗೆ ನೌಕರರ ವೇತನವನ್ನು ಕೊಡದೇ ಇದ್ದರೆ ಮುಂದಿನ ದಿನಗಳಲ್ಲಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ.

-ನಿತ್ಯಾನಂದಸ್ವಾಮಿ, ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News