‘ಬಿಜೆಪಿ ಪ್ರಚೋದಿತ ವಿಭಜನಕಾರಿ ರಾಷ್ಟ್ರೀಯತೆ' ಬಗ್ಗೆ ಆತ್ಮಕತೆಯಲ್ಲಿ ಕಳವಳ ವ್ಯಕ್ತಪಡಿಸಿದ ಒಬಾಮ

Update: 2020-11-16 16:13 GMT

ಹೊಸದಿಲ್ಲಿ: 'ಎ ಪ್ರಾಮಿಸ್ಡ್ ಲ್ಯಾಂಡ್' ಆತ್ಮಚರಿತ್ರೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಹುಲ್‍ ಗಾಂಧಿಯವರ ಬಗ್ಗೆ ಉಲ್ಲೇಖಿಸಿರುವುದು ಕಳೆದ ವಾರ ಮಾಧ್ಯಮಗಳಲ್ಲಿ ವಿಸ್ತೃತವಾಗಿ ವರದಿಯಾಗಿತ್ತು. ಇದಕ್ಕೆ ಕಾಂಗ್ರೆಸ್ ಪರ ಇರುವವರು ಹಾಗೂ ವಿರೋಧಿಗಳು ಹೀಗೆ ಎರಡೂ ಕಡೆಗಳಿಂದ ವ್ಯಾಪಕ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ರಾಹುಲ್ ಬಗ್ಗೆ ಒಬಾಮ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಆಡಳಿತಾರೂಢ ಬಿಜೆಪಿ ಬೆಂಬಲಿಗರು ವ್ಯಾಪಕವಾಗಿ ಬಿಂಬಿಸಿದ್ದರು.

ಆದಾಗ್ಯೂ ಶ್ವೇತಭವನದ ತಮ್ಮ ಹಾದಿಯ ಬಗ್ಗೆ, 2008-2012ರ ಅವಧಿಯ ಬಗ್ಗೆ ವಿವರಗಳನ್ನು ಒಳಗೊಂಡ ಕೃತಿಯಲ್ಲಿ ಒಬಾಮ ಭಾರತ ಭೇಟಿ ಬಗೆಗೂ ವಿವರಿಸಿದ್ದಾರೆ. ಈ ಕೃತಿಯಲ್ಲಿ ಅವರು ‘ಬಿಜೆಪಿಯಿಂದ ಪ್ರಚೋದಿತವಾಗಿರುವ ವಿಭಜನಕಾರಿ ರಾಷ್ಟ್ರೀಯತೆ’ ಬಗ್ಗೆ ಅಪಾರ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಹಿಂಸೆ, ದುರಾಸೆ, ಭ್ರಷ್ಟಾಚಾರ, ರಾಷ್ಟ್ರೀಯತೆ, ವರ್ಣಬೇಧ ನೀತಿ ಮತ್ತು ಧಾರ್ಮಿಕ ಅಸಹಿಷ್ಣುತೆಯಂತಹ ಪ್ರಚೋದನೆಗಳು ಪ್ರಜಾಪ್ರಭುತ್ವದಲ್ಲಿ ಕಾಯಂ ಆಗಿ ಅಡಕವಾಗಿರುತ್ತವೆಯೇ ಎಂಬ ಬಗ್ಗೆಯೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತದ ಆರ್ಥಿಕತೆ 1990ರ ದಶಕದಲ್ಲಿ ಮಾರುಕಟ್ಟೆ ಆಧರಿತ ಆರ್ಥಿಕತೆಯಾಗಿ ವರ್ಗಾಂತರ ಹೊಂದಿದ ಕಾಲಘಟ್ಟವನ್ನು ಕೂಡಾ ಒಬಾಮ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಭಾರತದ ಗಗನಮುಖಿ ಅಭಿವೃದ್ಧಿ, ತಂತ್ರಜ್ಞಾನದ ಅಬ್ಬರ, ಹೆಚ್ಚುತ್ತಿರುವ ಮಧ್ಯಮವರ್ಗವನ್ನು ವಿವರಿಸುತ್ತಾ, "ಭಾರತದ ಆರ್ಥಿಕತೆಯ ವರ್ಗಾಂತರದ ಮುಖ್ಯ ವಾಸ್ತುಶಿಲ್ಪಿಯಾಗಿ, ಪ್ರಧಾನಿ ಮನಮೋಹನ್ ಸಿಂಗ್ ಅವರು, ಈ ಪ್ರಗತಿಯ ಲಾಂಛನವಾಗಿ ಗುರುತಿಸಲ್ಪಟ್ಟರು. ಪುಟ್ಟ, ಹಿಂಸೆಗೊಳಗಾದ ಸಿಖ್ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅವರು, ಆ ನೆಲದ ಅತ್ಯುನ್ನತ ಅಧಿಕಾರದ ಪದವಿಗೆ ಏರಿದರು. ಜನಸಾಮಾನ್ಯರ ಮೇಲೆ ಪ್ರಭಾವ ಬೀರುವ ಮೂಲಕ ಮಾತ್ರವಲ್ಲದೇ, ಅವರ ಜೀವನ ಮಟ್ಟದಲ್ಲಿ ಸುಧಾರಣೆಯನ್ನು ತರುವ ಮೂಲಕ ಹಾಗೂ ಭ್ರಷ್ಟಾಚಾರಿ ಅಲ್ಲ ಎಂಬ ಉತ್ತಮ ಘನತೆಯನ್ನು ಉಳಿಸಿಕೊಂಡ ಅವರು ಸ್ವಯಂಪ್ರಭೆಯ ತಂತ್ರಜ್ಞರಾಗಿ ಜನತೆಯ ವಿಶ್ವಾಸ ಗಳಿಸಿದರು" ಎಂದು ಬಣ್ಣಿಸಿದ್ದಾರೆ.

ಭಾರತದ ರಾಜಕೀಯ ಇಂದಿಗೂ ಧರ್ಮ, ವಂಶ ಮತ್ತು ಜಾತಿಯ ಸುತ್ತ ತಿರುಗುತ್ತಿದೆ. ಸಿಂಗ್ ಪ್ರಧಾನಿ ಹುದ್ದೆಗೆ ಏರಿದ್ದು, ದೇಶದ ಪ್ರಗತಿಯಲ್ಲಿ ಹೊಸಶಕೆಯ ಆರಂಭಕ್ಕೆ ಕಾರಣವಾಗಿ, ಪಂಥೀಯ ವಿಭಜನೆಯನ್ನು ಮೀರುವಂತೆ ಆದದ್ದು ಅತ್ಯಂತ ಪ್ರಮುಖವಾದದ್ದು ಎಂದು ಒಬಾಮ ಅಭಿಪ್ರಾಯಪಟ್ಟಿದ್ದಾರೆ.

“ಒಬ್ಬರಿಗಿಂತ ಹೆಚ್ಚು ರಾಜಕೀಯ ವಿಶ್ಲೇಷಕರ ನಂಬಿಕೆಯಂತೆ ಅವರು (ಸೋನಿಯಾಗಾಂಧಿ) ರಾಷ್ಟ್ರ ರಾಜಕಾರಣದ ಹಿನ್ನೆಲೆ ಇಲ್ಲದ ಒಬ್ಬ ಸಿಖ್ ಸಮುದಾಯದ ಹಿರಿಯರೊಬ್ಬರನ್ನು ನಿರ್ದಿಷ್ಟವಾಗಿ ಆಯ್ಕೆ ಮಾಡಲು ಕಾರಣವೆಂದರೆ ಮನಮೋಹನ್ ಸಿಂಗ್ ಎಂದೂ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತಾನು ಸಜ್ಜುಗೊಳಿಸುತ್ತಿರುವ 40 ವರ್ಷ ವಯಸ್ಸಿನ ಮಗ ರಾಹುಲ್‍ ಗಾಂಧಿಗೆ ಅಪಾಯಕಾರಿ ಆಗಲು ಸಾಧ್ಯವಿಲ್ಲ ಎನ್ನುವುದು" ಎಂದು ಒಬಾಮ ಸ್ಪಷ್ಟಪಡಿಸಿದ್ದಾರೆ.

ಸಿಂಗ್ ಅವರು ಅಧಿಕಾರದಿಂದ ಇಳಿದಾಗ, ಬಿಜೆಪಿಯಿಂದ ಪ್ರಚೋದಿತವಾದ ವಿಭಜನಕಾರಿ ರಾಷ್ಟ್ರೀಯತೆಯನ್ನು ಮೀರಿಸುವ ರೀತಿಯಲ್ಲಿ ಅಧಿಕಾರ ಯಶಸ್ವಿಯಾಗಿ ರಾಹುಲ್‍ ಗಾಂಧಿಗೆ ಹಸ್ತಾಂತರಿಸಲಾಗುತ್ತದೆಯೇ, ಸೋನಿಯಾ ಪೋಷಿಸಿದ್ದ ಒತ್ತಾಸೆಗಳು ಈಡೇರುತ್ತದೆಯೇ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಉಳಿಯುತ್ತದೆಯೇ ಎಂಬ ಕುತೂಹಲ ತನಗೆ ಇತ್ತು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News