ಮುಂಬೈ: 2ನೇ ಮಹಾಯುದ್ಧದಲ್ಲಿ ಹೋರಾಡಿದ ನೌಕಾಪಡೆ ಅಧಿಕಾರಿ ನಿಧನ

Update: 2020-11-18 05:12 GMT

ಮುಂಬೈ : ಎರಡನೇ ಮಹಾಯುದ್ಧದಲ್ಲಿ ಹೋರಾಡಿ ಉಳಿದ ಕೆಲವೇ ಸೇನಾಧಿಕಾರಿಗಳಲ್ಲಿ ಒಬ್ಬರಾದ ವೈಸ್ ಅಡ್ಮಿರಲ್ ಜಾನ್ ಥಾಮಸ್ ಗೋಸ್ಲಿಂಗ್ ಪೆರೇರಾ ಅವರಿಗೆ ಮಂಗಳವಾರ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅಂತಿಮ ವಿದಾಯ ಹೇಳಲಾಯಿತು.

ಪೆರೇರಾ ಅವರಿಗೆ 97 ವರ್ಷ ವಯಸ್ಸಾಗಿತ್ತು. ಅಸಂಖ್ಯಾತ ಸಂಖ್ಯೆಯಲ್ಲಿ ಶ್ವೇತ ಸಮವಸ್ತ್ರದಲ್ಲಿದ್ದ ನೌಕಾ ಅಧಿಕಾರಿಗಳ ಸಮ್ಮುಖದಲ್ಲಿ ಪೆರೇರಾ ಅವರ ಅಂತ್ಯಸಂಸ್ಕಾರ ಮರೇನ್ ಲೈನ್ಸ್‌ನಲ್ಲಿನ ಚಂದನವಾಡಿ ಸ್ಮಶಾನದಲ್ಲಿ ನಡೆಯಿತು.

1923ರ ಫೆಬ್ರುವರಿ 15ರಂದು ಜನಿಸಿದ ಪೆರೇರಾ, 1971ರ ಭಾರತ- ಪಾಕ್ ಸಂಘರ್ಷದ ಸಂದರ್ಭದಲ್ಲಿ ಪಶ್ಚಿಮ ನೆವಲ್ ಕಮಾಂಡ್‌ನ ಮುಖ್ಯ ಸಿಬ್ಬಂದಿ ಅಧಿಕಾರಿ (ತಾಂತ್ರಿಕ) ಯಾಗಿದ್ದರು. ಕರಾಚಿ ಮೇಲೆ ಈ ಸಂದರ್ಭದಲ್ಲಿ ನಡೆದ ಕ್ಷಿಪಣಿ ದಾಳಿಯ ಓಎಸ್‌ಎ ಕ್ಲಾಸ್ ಕ್ಷಿಪಣಿ ನಾವೆಗಳ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು. ಜತೆಗೆ ಬಂಗಾಳಕೊಲ್ಲಿಯಲ್ಲಿ ನಿಯೋಜಿಸಲಾದ ಐಎನ್‌ಎಸ್ ವಿಕ್ರಾಂತ್‌ನ ದುರಸ್ತಿಯ ಮೂಲಕ ಪೆರೇರಾ ಹೆಸರುವಾಸಿಯಾಗಿದ್ದರು.

ಅವರು ಪುತ್ರ ಮೈಕೆಲ್ ಪೆರೇರಾ ಹಾಗೂ ಪುತ್ರಿ ಜೆನ್ನಿಫರ್ ಫರ್ನಾಂಡಿಸ್ ಅವರನ್ನು ಅಗಲಿದ್ದಾರೆ.

"ಇಂಗ್ಲೆಂಡಿನಲ್ಲಿ ಎರಡು ವರ್ಷಗಳ ಸಾಗರ ತರಬೇತಿ ಪಡೆದ ಬಳಿಕ ಪೆರೇರಾ ಅವರು 1944ರ ಮೇ ಒಂದರಂದು ನೌಕಾಪಡೆಗೆ ನೇಮಕಗೊಂಡಿದ್ದರು. ನೌಕಾ ಎಂಜಿನಿಯರ್ ಆಗಿ ತರಬೇತಿ ಪಡೆದಿದ್ದರು" ಎಂದು ಅವರ ಕಿರಿಯ ಸಹೋದ್ಯೋಗಿ ವೈಸ್ ಅಡ್ಮಿರಲ್ ಐ.ಸಿ.ರಾವ್ ಸುದ್ದಿಪೋರ್ಟೆಲ್‌ಗೆ ಬರೆದ ಲೇಖನದಲ್ಲಿ ನೆಪಿಸಿಕೊಂಡಿದ್ದಾರೆ. ಪೆರೇರಾ ಅವರು ಕಮಾಂಡರ್ ಕವಾಸ್ ನಾನಾವತಿಯವರ ಜತೆ ತರಬೇತಿ ಪಡೆದಿದ್ದರು. ನೌಕಾಪಡೆಯ ಪುಟ್ಟ ದುರಸ್ತಿ ಯಾರ್ಡನ್ನು ಅತ್ಯಾಧುನಿಕ ಹಾಗೂ ಪ್ರಮುಖ ಆಸ್ತಿಯಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News