ಕೊರೋನದ ಆರ್ಥಿಕ ಪರಿಣಾಮ ಭಾರತದ ಮೇಲೆ ತೀವ್ರವಾಗಿರುತ್ತದೆ: ಆಕ್ಸ್‌ಫರ್ಡ್ ವರದಿ

Update: 2020-11-19 16:52 GMT

ಹೊಸದಿಲ್ಲಿ, ನ.19: ಕೊರೋನ ಸಾಂಕ್ರಾಮಿಕ ಕ್ಷೀಣಿಸಿದರೂ ಅದರಿಂದ ಸುದೀರ್ಘಾವಧಿಯವರೆಗೆ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಎದುರಿಸಲಿರುವ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಸೇರಲಿದೆ ಎಂದು ಆಕ್ಸ್‌ಫರ್ಡ್ ಇಕನಾಮಿಕ್ಸ್ ಹೇಳಿದೆ. 

ಭಾರತದಲ್ಲಿ ದಶಕದ ಮಧ್ಯಭಾಗದಲ್ಲಿ ಉತ್ಪಾದನೆಯು ಕೊರೋನ ಪೂರ್ವದ ಮಟ್ಟಕ್ಕಿಂತ 12ಶೇ. ಕೆಳಗಿಳಿಯಲಿದೆ. ಕೊರೋನಕ್ಕಿಂತ ಮೊದಲು ಭಾರತದಲ್ಲಿ ಅಭಿವೃದ್ಧಿ(ಪ್ರಗತಿ) ದರ 6.5ಶೇ. ವಿದ್ದರೆ, ಮುಂದಿನ 5 ವರ್ಷಗಳಲ್ಲಿ ಇದು 4.5ಶೇ.ಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಆಕ್ಸ್‌ಫರ್ಡ್ ವಿವಿಯ ದಕ್ಷಿಣ ಏಶ್ಯಾ ಮತ್ತು ಆಗ್ನೇಯ ಏಶ್ಯಾ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರಿಯಾಂಕಾ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

2020ಕ್ಕೂ ಮೊದಲೇ ಅಭಿವೃದ್ಧಿಯ ದರದ ಏರಿಕೆಗೆ ತೊಡಕಾಗಿ ಪರಿಣಮಿಸಿದ್ದ ಕಾರ್ಪೊರೇಟ್ ಸಂಸ್ಥೆಗಳ ಬ್ಯಾಲೆನ್ಸ್‌ಶೀಟ್‌ಗಳ ಮೇಲಿನ ಒತ್ತಡ, ಬ್ಯಾಂಕಿನ ನಿಷ್ಕ್ರಿಯ(ಅನುತ್ಪಾದಕ) ಆಸ್ತಿಗಳ ಹೆಚ್ಚಳ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಪತನ, ಕಾರ್ಮಿಕ ಮಾರುಕಟ್ಟೆ ದುರ್ಬಲಗೊಂಡಿರುವುದು ಮುಂತಾದ ಸಮಸ್ಯೆಗಳು ಇನ್ನಷ್ಟು ತೀವ್ರಗೊಳ್ಳಲಿದೆ . ಇದರಿಂದ ಸುದೀರ್ಘಾವಧಿಯ ಪರಿಣಾಮ ಉಂಟಾಗಲಿದೆ ಮತ್ತು ಭಾರತದ ಅಭಿವೃದ್ಧಿಯ ಗತಿಯನ್ನು ಕೊರೋನ ಪೂರ್ವದ ಮಟ್ಟಕ್ಕಿಂತಲೂ ಕೆಳಗಿಳಿಸಲಿದೆ ಎಂದವರು ಹೇಳಿದ್ದಾರೆ. ದೇಶದ ಆರ್ಥಿಕತೆಯನ್ನು 2025ರ ವೇಳೆಗೆ 5 ಲಕ್ಷಕೋಟಿ ಡಾಲರ್‌ಗೇರಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರೂ, ಈಗಿನ ಪರಿಸ್ಥಿತಿಯಲ್ಲಿ ಇದು ಬಹುತೇಕ ಅಸಾಧ್ಯವಾಗಿದೆ. ಬೇಡಿಕೆ ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಹಲವು ಪ್ಯಾಕೇಜ್‌ಗಳನ್ನು ಘೋಷಿಸಿದರೂ ಇವು ನಿರೀಕ್ಷಿತ ಪರಿಣಾಮ ಬೀರಿಲ್ಲ.

ಏಶ್ಯದ ಮೂರನೇ ಅತೀ ದೊಡ್ಡ ಅರ್ಥವ್ಯವಸ್ಥೆ ಚಾರಿತ್ರಿಕ ಹಿಂಜರಿಕೆಯ ಅವಧಿಯಲ್ಲಿದೆ ಎಂದು ಕಳೆದ ವಾರ ಆರ್‌ಬಿಐ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ ಎಂದು ಪ್ರಿಯಾಂಕಾ ಕಿಶೋರ್ ಹೇಳಿದ್ದಾರೆ. ಪ್ರಧಾನಿ ಮೋದಿ ಅನಿರೀಕ್ಷಿತವಾಗಿ ಮತ್ತು ಹಠಾತ್ತಾಗಿ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆಯ ಮೇಲೆ ಮಾರಕ ಹೊಡೆತ ಬಿದ್ದಿದ್ದು ಬೆಳವಣಿಗೆಯ ದರ(ಜಿಡಿಪಿ) ಮಾರ್ಚ್ 2021ರ ವೇಳೆಗೆ 10.3ಶೇ. ಕುಗ್ಗಲಿದೆ ಎಂದು ಅಂತರ್ ರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಂದಾಜಿಸಿದೆ. ಆರ್ಥಿಕ ಚಟುವಟಿಕೆ ಈಗ ಪುನರಾರಂಭಗೊಂಡಿದ್ದರೂ ಲಾಕ್‌ಡೌನ್‌ನ ಪ್ರಹಾರದಿಂದ ಇನ್ನೂ ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News