ಯೂರೋಪ್‌ನಲ್ಲಿ ಪ್ರತಿ 17 ಸೆಕೆಂಡ್‌ಗೆ ಓರ್ವ ಕೋವಿಡ್‌ಗೆ ಬಲಿ!

Update: 2020-11-20 03:46 GMT

ಜಿನೀವಾ : ಯೂರೋಪ್ ಖಂಡದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಎರಡನೇ ಅಲೆ ವ್ಯಾಪಕವಾಗಿದ್ದು, ಪ್ರತಿ 17 ಸೆಕೆಂಡ್‌ಗೆ ಒಬ್ಬರಂತೆ ವೈರಸ್‌ಗೆ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದರೂ, ಸೋಂಕಿಗೆ ಬಲಿಯಾಗುತ್ತಿರುವವರ ಪ್ರಮಾಣ ಆತಂಕಕಾರಿಯಾಗಿಯೇ ಮುಂದುವರಿದಿದೆ ಎಂದು ಅಭಿಪ್ರಾಯಪಟ್ಟಿದೆ.

ಯೂರೋಪ್‌ನಲ್ಲಿ ಕೊರೋನ ವೈರಸ್‌ನ ಹೊಸ ಪ್ರಕರಣಗಳು ಕಳೆದ ವಾರ 18 ಲಕ್ಷ ಆಗಿದ್ದು, ಹಿಂದಿನ ವಾರ 20 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಯೂರೋಪ್ ಖಂಡದಾದ್ಯಂತ ಆಸ್ಪತ್ರೆಗಳು ಭರ್ತಿಯಾಗಿದ್ದು, ರೋಗಿಗಳು ಈ ಮಾರಕ ಸೋಂಕಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. "ಒಂದಷ್ಟು ಒಳ್ಳೆಯ ಸುದ್ದಿ ಇದೆ. ಆದರೆ ಇನ್ನೂ ತೀರಾ ಒಳ್ಳೆಯ ಸುದ್ದಿ ಇಲ್ಲ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಹನ್ಸ್ ಕ್ಲೂಗ್ ಹೇಳಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ಯೂರೋಪಿಯನ್ ದೇಶಗಳಲ್ಲಿ ವ್ಯಾಪಕವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ತುಂಬಿ ತುಳುಕುತ್ತಿದ್ದು, ಹಲವು ದೇಶಗಳಲ್ಲಿ ಆರ್ಥಿಕತೆ ಕುಸಿಯುವ ಭೀತಿಯ ನಡುವೆಯೂ ಲಾಕ್‌ಡೌನ್ ಮರು ಜಾರಿಗೊಳಿಸಲಾಗಿದೆ. ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಅಮೆರಿಕದಲ್ಲಿ ಹೆಚ್ಚುತ್ತಲೇ ಇದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ ವಾರ ಸಾವಿನ ಸಂಖ್ಯೆ ಶೇಕಡ 18ರಷ್ಟು ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News