ನೂತನ ಅಧ್ಯಕ್ಷರ ಆಯ್ಕೆಯ ಹಾದಿಯಲ್ಲಿ ಕಾಂಗ್ರೆಸ್: ಈ ಬಾರಿ ಎಲ್ಲವೂ ಡಿಜಿಟಲ್

Update: 2020-11-20 05:25 GMT

ಹೊಸದಿಲ್ಲಿ: ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ತನ್ನ ಹೊಸ ಅಧ್ಯಕ್ಷರನ್ನು ಆರಿಸಲು ಡಿಜಿಟಲ್ ಪ್ರಕ್ರಿಯೆ ಅನುಸರಿಸಲಿದೆ. ಪ್ರಪ್ರಥಮ ಬಾರಿಗೆ ಎಐಸಿಸಿ ಪ್ರತಿನಿಧಿಗಳಿಗೆ ಡಿಜಿಟೈಸ್ಡ್ ಐಡಿ ಕಾರ್ಡ್ ಗಳನ್ನು ನೀಡಲಾಗುವುದು. ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರವು ಸುಮಾರು 1500 ಎಐಸಿಸಿ ಪ್ರತಿನಿಧಿಗಳ ಹೆಸರುಗಳಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ. ಈ ಪ್ರತಿನಿಧಿಗಳ ಡಿಜಿಟಲ್ ಫೋಟೋಗಳನ್ನು ಕಳುಹಿಸಿಕೊಡುವಂತೆ ಪಕ್ಷದ ಎಲ್ಲಾ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ ಎಂದು indiatoday.in ವರದಿ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮರಳುವಂತಾಗಲು ವೇದಿಕೆ ಸಜ್ಜುಗೊಂಡಿದ್ದರೂ ಕೊನೇ ಕ್ಷಣದಲ್ಲಿ ಅವರಿಗೆ ಯಾರಾದರೂ ಪ್ರತಿಸ್ಪರ್ಧಿ ಕಾಣಿಸಿದರೂ ಕಾಣಿಸಿಕೊಳ್ಳಬಹುದು. ಒಂದು ವೇಳೆ ರಾಹುಲ್‍ಗೆ ಎದುರಾಗಿ ಬೇರೆ ಯಾರಾದರೂ ಕಣಕ್ಕಿಳಿದಿದ್ದೇ ಆದಲ್ಲಿ ಚುನಾವಣೆಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಹಾಗೂ ಮತಪತ್ರಗಳ ಮೂಲಕ ಮತದಾನ ಕೂಡ ನಡೆಯಬಹುದು ಎಂದೂ ವರದಿಯಾಗಿದೆ.

"ನಾವು ಪೂರ್ಣಪ್ರಮಾಣದ  ಮತದಾನ ಪ್ರಕ್ರಿಯೆಗಾಗಿ ತಯಾರಾಗುತ್ತಿದ್ದೇವೆ. ಎರಡು ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಪಟ್ಟಿ ಈಗ ನಮ್ಮ ಬಳಿಯಿದೆ.  ಕೆಲವು ವಾರಗಳಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಪಕ್ಷಾಧ್ಯಕ್ಷೆಗೆ  ಮಾಹಿತಿ ನೀಡಲಿದ್ದೇವೆ,'' ಎಂದು ಈ ಪ್ರಕ್ರಿಯೆಯ ಭಾಗವಾಗಿರುವ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಎಐಸಿಸಿ ಪ್ರತಿನಿಧಿಗಳಿಗೆ ನೀಡಲಾಗುವ ಐಡಿ ಕಾರ್ಡ್ ನಲ್ಲಿ ಬಾರ್ ಕೋಡ್ ಇರಲಿದ್ದು ಮತದಾರನ ಎಲ್ಲಾ ಮಾಹಿತಿಗಳೂ ಅದರಲ್ಲಿರಲಿದೆ.

ಈ ಬಾರಿ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿನ ಇನ್ನೊಂದು ವಿಶಿಷ್ಟತೆಯೆಂದರೆ ಅಧ್ಯಕ್ಷರ ಅವಧಿ ಕೇವಲ ಎರಡು ವರ್ಷಗಳಾಗಿರಲಿದೆ. ಕಾಂಗ್ರೆಸ್ ನಾಯಕತ್ವ ವಂಶಾಡಳಿತ ನಡೆಸುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣಾ ಪ್ರಕ್ರಿಯೆ ಹಿಂದಿಗಿಂತಲೂ ಹೆಚ್ಚು ಪಾರದರ್ಶಕವಾಗಿರುವಂತೆ ಪಕ್ಷ ನೋಡಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಪಕ್ಷಾಧ್ಯಕ್ಷರ ಚುನಾವಣೆಗೆ ತಯಾರಿಯಲ್ಲಿ ತೊಡಗಿರುವ ಪಕ್ಷದ ಚುನಾವಣಾ ಪ್ರಾಧಿಕಾರದಲ್ಲಿ  ಮಧುಸೂದನ್ ಮಿಸ್ತ್ರಿ ಅಧ್ಯಕ್ಷರಾಗಿದ್ದು  ಪ್ರಾಧಿಕಾರದಲ್ಲಿ ಅರ್ವಿಂದರ್ ಸಿಂಗ್ ಲವ್ಲಿ, ಸಂಸದರಾದ ರಾಜೇಶ್ ಮಿಶ್ರಾ,  ಜೋತಿಮಣಿ ಹಾಗೂ ಕರ್ನಾಟಕದ ಮಾಜಿ ಸಚಿವ ಕೃಷ್ಣ ಭೈರೇಗೌಡ  ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News