ಮುಖ್ಯಮಂತ್ರಿ ಕೈ ಕಟ್ಟಿ ಹಾಕಿದ ಬಿಜೆಪಿ ಹೈಕಮಾಂಡ್

Update: 2020-11-21 05:42 GMT

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಅಲ್ಲಿರುವುದು ಹೈಕಮಾಂಡ್ ಸಂಸ್ಕೃತಿ ಎಂದು ಬಿಜೆಪಿ ಮುಂಚಿನಿಂದಲೂ ಕಾಂಗ್ರೆಸ್ ಮೇಲೆ ಕೆಂಡ ಕಾರುತ್ತಲೇ ಬಂದಿದೆ. ಆದರೆ ಬಿಜೆಪಿಯಲ್ಲಿ ಇರುವುದು ಯಾವ ಸಂಸ್ಕೃತಿ? ಅದರಲ್ಲೂ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಬಿಜೆಪಿ ನಿಜವಾಗಿಯೂ ಒಂದು ಪ್ರಜಾಸತ್ತಾತ್ಮಕ ಪಕ್ಷವಾಗಿ ಉಳಿದಿದೆಯೇ? ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಆ ಪಕ್ಷದಲ್ಲಿ ಯಾವ ಸಂಸ್ಕೃತಿ ಇದೆಯೆಂಬುದು ಗೊತ್ತಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಮೋದಿ, ಅಮಿತ್ ಶಾ ಕೇಂದ್ರಿತ ಬಿಜೆಪಿ ವರಿಷ್ಠ ನಾಯಕತ್ವದ ಕೈಯಲ್ಲಿ ಸಿಕ್ಕು ವಿಲವಿಲ ಒದ್ದಾಡುತ್ತಿದ್ದಾರೆ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದರೂ ತಮ್ಮ ಸಚಿವ ಸಂಪುಟವನ್ನು ಪುನಾರಚಿಸುವ ಸ್ವಾತಂತ್ರ್ಯ ಅವರಿಗಿಲ್ಲ. ಸಂಪುಟ ಪುನಾರಚನೆಗೆ ಅನುಮತಿ ಕೋರಿ ತರಾತುರಿಯಲ್ಲಿ ರಾಜಧಾನಿ ದಿಲ್ಲಿಗೆ ಹೋಗಿದ್ದ ಯಡಿಯೂರಪ್ಪಅವರು ಬುಧವಾರ ಬರಿಗೈಲಿ ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದು ಶಾಸಕರಾಗಿರುವ ನಾಲ್ವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಐವರು ನಿಷ್ಕ್ರಿಯ ಸಚಿವರನ್ನು ಕೈ ಬಿಡಬೇಕೆಂದು ಬಯಸಿದ ಯಡಿಯೂರಪ್ಪಪಕ್ಷದ ಹೈಕಮಾಂಡ್‌ನ ಅನುಮತಿ ಕೋರಿದ್ದರು. ಆದರೆ ಈ ಬಗ್ಗೆ ನಾಲ್ಕೈದು ದಿನಗಳಲ್ಲಿ ತಿಳಿಸುವುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪನವರನ್ನು ನಿರಾಶೆಗೊಳಿಸಿದ್ದಾರೆ.

ಸಂವಿಧಾನದ ಪ್ರಕಾರ ಸಂಪುಟ ಪುನಾರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ಇನ್ನು ರಾಷ್ಟ್ರೀಯ ಪಕ್ಷವೊಂದರ ಸರಕಾರ ರಾಜ್ಯವೊಂದರಲ್ಲಿದ್ದರೆ ಪಕ್ಷದ ವರಿಷ್ಠ ನಾಯಕತ್ವದ ಜೊತೆ ಸಮಾಲೋಚನೆ ಮಾಡಬೇಕೆಂಬುದು ಸಂಪ್ರದಾಯ. ಇದು ಔಪಚಾರಿಕ ಮಾತ್ರ. ಆದರೆ ಯಡಿಯೂರಪ್ಪನವರ ವಿಷಯದಲ್ಲಿ ಬಿಜೆಪಿಯ ಉನ್ನತ ನಾಯಕತ್ವ ನಡೆದುಕೊಂಡ ರೀತಿ ಸಹಜವಾಗಿ ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಮಂತ್ರಿ ಮಂಡಲ ಪುನಾರಚನೆಗೂ ಅವಕಾಶ ನೀಡದಿರುವ ನಡ್ಡಾ ಅವರ ವರ್ತನೆ ನಾಯಕತ್ವದ ಬಗೆಗಿನ ಅಪನಂಬಿಕೆಗೆ ಸಾಕ್ಷಿಯಾಗಿದೆ. ಎರಡು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರವೂ ಮುಖ್ಯಮಂತ್ರಿ ಯಡಿಯೂರಪ್ಪಅಸಹಾಯಕರಾಗಿ ದಿಲ್ಲಿಯ ವರಿಷ್ಠರ ಎದುರು ಕೈ ಕಟ್ಟಿ ನಿಲ್ಲಬೇಕಾಗಿರುವುದು ಆ ಪಕ್ಷದಲ್ಲಿ ಒಳಗೇನೋ ನಡೆಯುತ್ತಿದೆ ಎಂಬ ಸಂದೇಹವನ್ನು ಮೂಡಿಸುತ್ತದೆ.

ಯಡಿಯೂರಪ್ಪ ನಾಯಕತ್ವದ ಬಗ್ಗೆ ಆರೆಸ್ಸೆಸ್ ವರಿಷ್ಠ ನಾಯಕತ್ವದಲ್ಲಿ ಒಂದು ವಿಧದ ಅಸಮಾಧಾನವಿರುವುದು ಗುಟ್ಟಿನ ಸಂಗತಿಯಲ್ಲ. ಬಿಜೆಪಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಸಂಘದ ನಾಯಕತ್ವ ಬಿಜೆಪಿ ಹೈಕಮಾಂಡ್ ಮೂಲಕ ಯಡಿಯೂರಪ್ಪನವರಿಗೆ ಪದೇ ಪದೇ ಅಡ್ಡಗಾಲು ಹಾಕುತ್ತಲೇ ಇದೆ. ಕೆಲ ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿ ರಾಜ್ಯದ ಬಿಜೆಪಿಯ ಎಲ್ಲ ಬಣಗಳ ನಾಯಕರೊಂದಿಗೆ ಸಮಾಲೋಚನೆ ಮಾಡಿದ ಬಳಿಕವೇ ಸಂಪುಟ ಪುನಾರಚನೆಗೆ ಚಾಲನೆ ದೊರಕಬಹುದಾಗಿದೆ. ಆದರೆ ಯಡಿಯೂರಪ್ಪಬಣದವರು ಅಲ್ಲಿಯವರೆಗೆ ತಡೆಯಲು ಸಿದ್ಧವಿಲ್ಲ. ಅಂತಲೇ ಯಡಿಯೂರಪ್ಪನವರು ದಿಲ್ಲಿಯ ನಾಯಕತ್ವ ಕರೆಯದಿದ್ದರೂ ತಾವಾಗಿ ಅಲ್ಲಿ ಹೋಗಿ ಖಾಲಿ ಕೈಯಲ್ಲಿ ತಿರುಗಿ ಬಂದರು.

ಯಡಿಯೂರಪ್ಪನವರಿಗೆ ಈ ರೀತಿ ಮುಜುಗರವಾಗುತ್ತಿರುವುದು ಇದೇ ಮೊದಲ ಸಲವೇನಲ್ಲ. ಈ ಹಿಂದೆ ಅಧಿಕಾರ ಸ್ವೀಕರಿಸುವಾಗ, ಆನಂತರ ಸಂಪುಟ ರಚನೆ ಮಾಡುವಾಗ ಬಿಜೆಪಿ ಹೈಕಮಾಂಡ್ ಸಕಾಲದಲ್ಲಿ ಯಡಿಯೂರಪ್ಪನವರ ಮನವಿಗೆ ಸ್ಪಂದಿಸಲಿಲ್ಲ. ರಾಜ್ಯಸಭೆಯ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲೂ ಅವರ ಮಾತು ನಡೆಯಲಿಲ್ಲ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ತಮ್ಮ ಕುರ್ಚಿ ಅಲುಗಾಡಿಸಲು ಹುನ್ನಾರ ನಡೆದಿದೆ ಎಂಬುದನ್ನು ಅರಿತೇ ಯಡಿಯೂರಪ್ಪನವರು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಮರಾಠಾ ಅಭಿವೃದ್ಧಿ ನಿಗಮ ರಚಿಸುವ ಪ್ರತ್ಯಸ್ತ್ರದ ಪ್ರಯೋಗ ಮಾಡಿದರು. ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಮಣಿಯುತ್ತಿಲ್ಲ.

ಆಪರೇಷನ್ ಕಮಲದ ಮೂಲಕ ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿದಿರುವ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಒಳ ತಿಕ್ಕಾಟದ ಪರಿಣಾಮ ಆಡಳಿತದ ಮೇಲೆ ಆಗುತ್ತಿದೆ. ಕೊರೋನ ಹಾಗೂ ನೆರೆ ಹಾವಳಿಯಿಂದ ಸಂತ್ರಸ್ತರಾದವರ ಪರಿಸ್ಥಿತಿ ಇನ್ನೂ ಗಂಭೀರವಾಗಿರುವಾಗಲೇ ಅದನ್ನು ನಿಭಾಯಿಸಬೇಕಾದ ಸರಕಾರ ನಡೆಸುವ ಪಕ್ಷದಲ್ಲಿ ಯಾವುದೂ ಸರಿಯಿಲ್ಲ ಎಂಬುದು ಆಡಳಿತದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದಕ್ಕೆ ಅವಕಾಶ ಮಾಡಿಕೊಡುವುದು ಸರಿಯಲ್ಲ. ಸಂಪುಟ ಪುನಾರಚನೆ ಇರಲಿ, ಇನ್ಯಾವುದೇ ವಿಷಯವಿರಲಿ ಬೇಗನೇ ಇತ್ಯರ್ಥ ಮಾಡಿ ಸರಕಾರ ಸುಗಮವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಆ ಪಕ್ಷದ ಮೇಲಿದೆ. ಬಿಜೆಪಿ ಹೈಕಮಾಂಡ್ ಈ ವಿಷಯದಲ್ಲಿ ಮುಖ್ಯಮಂತ್ರಿಯವರ ಪರಮಾಧಿಕಾರವನ್ನು ಪ್ರಶ್ನಿಸುವಂತೆ ಸಂದೇಹಾಸ್ಪದವಾಗಿ ವರ್ತಿಸುವುದು ಅದಕ್ಕೆ ಶೋಭೆ ತರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News