ಕೇರಳ: ಸಾಮಾಜಿಕ ಜಾಲತಾಣದಲ್ಲಿ 'ನಿಂದನೆ', ಬೆದರಿಕೆ ಪೋಸ್ಟ್ ಗೆ 5 ವರ್ಷ ಜೈಲು

Update: 2020-11-22 16:42 GMT

ತಿರುವನಂತಪುರ,ನ.22: ಕೇರಳದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ‘ಅವಮಾನಕಾರಿ’ ಅಥವಾ ‘ಬೆದರಿಕೆ’ಯ ಪೋಸ್ಟ್‌ಗಳನ್ನು ಮಾಡುವುದು ಇನ್ನು ಮುಂದೆ ತುಂಬಾ ದುಬಾರಿಯಾಗಲಿದೆ. ಈ ಅಪರಾಧಕ್ಕೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ 10,000 ರೂ.ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ನೀಡುವ ಎಲ್‌ಡಿಎಫ್ ಸರಕಾರದ ಅಧ್ಯಾದೇಶಕ್ಕೆ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಶನಿವಾರ ಅಂಕಿತ ಹಾಕಿದ್ದಾರೆ. ರಾಜ್ಯದ ಎಲ್‌ಡಿಎಫ್ ಸರಕಾರವು ಕೇರಳ ಪೊಲೀಸ್ ಕಾಯ್ದೆಗೆ ಹೊಸದಾಗಿ ಕಲಂ 118 (ಎ)ಯನ್ನು ಸೇರ್ಪಡೆಗೊಳಿಸಿ ತಿದ್ದುಪಡಿಗೊಳಿಸುವ ಮೂಲಕ ಈ ಅಧ್ಯಾದೇಶವನ್ನು ತಂದಿದೆ.

ನೂತನ ಅಧ್ಯಾದೇಶದಂತೆ ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಅವಮಾನಿಸುವ ಅಥವಾ ಬೆದರಿಕೆಯೊಡ್ಡುವ ಯಾವುದೇ ಮಾಹಿತಿಯನ್ನು ಯಾವುದೇ ಸಂವಹನ ಮಾರ್ಗದ ಮೂಲಕ ಸೃಷ್ಟಿಸಿದರೆ ಅಥವಾ ರವಾನಿಸಿದರೆ ಆತ/ಆಕೆ ದಂಡನೆಗೆ ಅರ್ಹರಾಗುತ್ತಾರೆ.

ಈ ತಿದ್ದುಪಡಿಯು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮೂಲಕ ವಾಕ್‌ಸ್ವಾತಂತ್ರ್ಯದ ಮೇಲೆ ಅಪಾಯಕಾರಿ ಪರಿಣಾಮವನ್ನುಂಟು ಮಾಡುವ ಆತಂಕ ವ್ಯಕ್ತವಾಗಿದೆ. ವ್ಯಕ್ತಿಗಳನ್ನು ಗುರಿಯಾಗಿಸಿ ಕೊಂಡು ಸಾಮಾಜಿಕ ಮಾಧ್ಯಮಗಳ ದುರುಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನೂತನ ಅಧ್ಯಾದೇಶದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳ ಪೊಲೀಸ್ ಕಾಯ್ದೆಯ 118(ಡಿ) ಕಲಂ ವಿರುದ್ಧ 2015ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದ ವಕೀಲ ಅನೂಪ ಕುಮಾರನ್ ಅವರು ನೂತನ ಅಧ್ಯಾದೇಶವನ್ನು ತಾನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಜನರನ್ನು,ನಿರ್ದಿಷ್ಟವಾಗಿ ಮಹಿಳೆಯರನ್ನು ಸಾಮಾಜಿಕ ಮಾಧ್ಯಮಗಳ ದುರುಪಯೋಗ ದಿಂದ ರಕ್ಷಣೆ ನೀಡುವುದು 118(ಎ) ಕಲಮ್‌ನ ಉದ್ದೇಶವಾಗಿದೆ ಎಂದು ಸರಕಾರವು ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ನೂತನ ಕಾನೂನು ಅಧಿಕಾರಿಗಳು ಮತ್ತು ಸರಕಾರದಿಂದ ತಮ್ಮನ್ನು ಟೀಕಿಸುವವರ ವಿರುದ್ಧ ಬಳಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಕೇರಳ ಪೊಲೀಸ್ ಕಾಯ್ದೆಯ ಕಲಂ 118(ಡಿ)ಅನ್ನು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅದು ವಾಕ್‌ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದರಿಂದ ಅಸಾಂವಿಧಾನಿಕವಾಗಿದೆ ಎಂದು ಘೋಷಿಸಿತ್ತು.

ವಿಧೇಯಕಕ್ಕೆ ಸಂಬಂಧಿಸಿದಂತೆ ಸಂಪುಟವು ರಾಜ್ಯಪಾಲರಿಗೆ ಶಿಫಾರಸನ್ನು ಮಾಡಿದೆ ಎಂದು ಕಳೆದ ತಿಂಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದ ಸರಕಾರವು,ಸಾಮಾಜಿಕ ಮಾಧ್ಯಮಗಳ ಮೂಲಕ ದ್ವೇಷ ಅಭಿಯಾನ ಮತ್ತು ದಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಉಚ್ಚ ನ್ಯಾಯಾಲಯವು ರಾಜ್ಯ ಪೊಲೀಸರಿಗೆ ನಿರ್ದೇಶ ನೀಡಿದೆ. ಈ ಪಿಡುಗಿನ ವಿರುದ್ಧ ಹೋರಾಡಲು ಕಾನೂನು ಕೊರತೆಯಿದೆ. ಸರ್ವೋಚ್ಚ ನ್ಯಾಯಾಲಯವು ಕೇರಳ ಪೊಲೀಸ್ ಕಾಯ್ದೆಯ ಕಲಂ 118(ಡಿ) ಮತ್ತು ಐಟಿ ಕಾಯ್ದೆಯ ಕಲಂ 66-ಎ ಅನ್ನು ರದ್ದುಗೊಳಿಸಿದೆ ಮತ್ತು ಕೇಂದ್ರ ಸರಕಾರವು ಇವುಗಳಿಗೆ ಪರ್ಯಾಯವಾಗಿ ಯಾವುದೇ ಹೊಸ ಕಾನೂನನ್ನು ತಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಎಸಗಲಾಗುವ ಅಪರಾಧಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News