ಮರಾಠಿ ಅಣ್ಣನ ಕಣ್ಣಿಗೆ ಬೆಣ್ಣೆ ಕನ್ನಡಮ್ಮನ ಕಣ್ಣಿಗೆ ಸುಣ್ಣ

Update: 2020-11-23 05:01 GMT

ಈಗಾಗಲೇ ರಾಜ್ಯದಲ್ಲಿರುವ ನಿಗಮಗಳು, ಅಕಾಡಮಿಗಳು, ಪ್ರಾಧಿಕಾರಗಳ ಸಂಖ್ಯೆ ಉಲ್ಬಣಗೊಂಡಿದೆೆ. ನಾಡಿನ ಹಿತಾಸಕ್ತಿಗಿಂತ ತಮ್ಮ ಪಕ್ಷದೊಳಗಿರುವ ಅತೃಪ್ತರನ್ನು ತಣಿಸುವುದಕ್ಕಾಗಿ ಬೇರೆ ಬೇರೆ ನಿಗಮಗಳನ್ನು, ಪ್ರಾಧಿಕಾರಗಳನ್ನು ಸಂಶೋಧಿಸಿ ಸ್ಥಾಪಿಸಲಾಗುತ್ತದೆ ಎಂಬ ಆರೋಪಗಳಿವೆ. ಎಲ್ಲ ಅಕಾಡಮಿಗಳನ್ನು ಬರ್ಖಾಸ್ತುಗೊಳಿಸಿ, ಅವುಗಳನ್ನು ಕನ್ನಡ ಸಂಸ್ಕೃತಿ ಇಲಾಖೆಯೊಳಗೆ ವಿಲೀನಗೊಳಿಸಬೇಕು ಎಂಬ ಒತ್ತಾಯವನ್ನು ಈ ಹಿಂದೆ ಹಲವು ಚಿಂತಕರು ಮಾಡಿದ್ದರು. ಕೆಲವೊಮ್ಮೆ ಕೆಲವು ಶೋಷಿತ ಸಮುದಾಯಗಳು ಅಪಾಯದಲ್ಲಿರುವ ತಮ್ಮ ಭಾಷೆ ಸಂಸ್ಕೃತಿಯನ್ನು ಉಳಿಸುವುದಕ್ಕೋಸ್ಕರ ಸರಕಾರದ ಮುಂದೆ ನಿರಂತರ ಹೋರಾಟಗಳನ್ನು ಮಾಡುವಾಗ ಅನಿವಾರ್ಯವಾಗಿ ಸರಕಾರ ಮಣಿಯಬೇಕಾಗುತ್ತದೆ.

ಕನ್ನಡದ ಜೊತೆಗೆ ಅವಿನಾಭಾವ ಸಂಬಂಧಗಳನ್ನು ಹೊಂದಿರುವ ಹಲವು ಪ್ರಾದೇಶಿಕ ಭಾಷೆಗಳು ಹೋರಾಟದ ಮೂಲಕವೇ ಅಕಾಡಮಿಗಳನ್ನು ತನ್ನದಾಗಿಸಿಕೊಂಡಿವೆ. ಆದರೆ ಇತ್ತೀಚೆಗೆ ಸರಕಾರ ಘೋಷಿಸಿರುವ ಮರಾಠಾ ಪ್ರಾಧಿಕಾರ ಮತ್ತು ವೀರಶೈವ ಲಿಂಗಾಯತ ನಿಗಮಗಳು ಇಂತಹ ಹೋರಾಟಗಳಿಗೆ ಹೊರತಾಗಿ ಸ್ಥಾಪನೆಯಾಗಿವೆ. ವೀರಶೈವ-ಲಿಂಗಾಯತ ನಿಗಮ ಸ್ಥಾಪನೆಯ ಕುರಿತಂತೆ ಲಿಂಗಾಯತ ಸಮುದಾಯದೊಳಗಿನ ಸ್ವಾಮೀಜಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತ ಮರಾಠಾ ಪ್ರಾಧಿಕಾರ ಸ್ಥಾಪನೆಯ ಬಗ್ಗೆಯು ಕನ್ನಡ ಸಂಘಟನೆಗಳು ಪ್ರಶ್ನೆಗಳನ್ನು ಎತ್ತಿವೆ. ಸರಕಾರದ ನಿರ್ಧಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿವೆ. ಸರಕಾರ ಮೊತ್ತ ಮೊದಲಾಗಿ ಉತ್ತರಿಸಬೇಕಾದುದು, ಈ ಪ್ರಾಧಿಕಾರ ಮತ್ತು ನಿಗಮಗಳನ್ನು ಅವಸರವಸರವಾಗಿ ರಚಿಸುವುದಕ್ಕೆ ಕಾರಣಗಳೇನು? ಪ್ರಾಧಿಕಾರವನ್ನು ಸ್ಥಾಪಿಸುವುದಕ್ಕಾಗಲಿ, ನಿಗಮಗಳನ್ನು ರಚಿಸುವುದಕ್ಕಾಗಲಿ ಸಂಬಂಧ ಪಟ್ಟ ಸಮುದಾಯ ಸರಕಾರವನ್ನು ಸಾಮೂಹಿಕವಾಗಿ ಒತ್ತಾಯಿಸಿದ ಉದಾಹರಣೆಗಳಿವೆಯೇ? ಹೀಗಿದ್ದರೂ ಸರಕಾರವೇ ಉದಾರವಾಗಿ ಆ ಸಮುದಾಯಗಳಿಗೆ ಈ ಕೊಡುಗೆಗಳನ್ನು ನೀಡಲು ಕಾರಣವೇನು? ಈ ನಾಡಿನಲ್ಲಿ ಶೋಷಿತ ಸಮುದಾಯಕ್ಕೆ ಸೇರಿದ ಹಲವು ಪಂಗಡಗಳು ತಮ್ಮ ಅಭಿವೃದ್ಧಿಗಾಗಿ ಸರಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಇಡುತ್ತಲೇ ಬಂದಿವೆೆ.

ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಳ್ಳುವ ಬಗ್ಗೆ ಹಲವು ಹೋರಾಟಗಾರರು ಸರಕಾರದ ಗಮನ ಸೆಳೆದಿದ್ದಾರೆ. ಒಳ ಮೀಸಲಾತಿಯನ್ನು ಜಾರಿಗೊಳಿಸುವುದಕ್ಕಾಗಿ ಯೋಜನೆಗಳನ್ನು ರೂಪಿಸಲು ದಲಿತ ಮುಖಂಡರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಎಲ್ಲ ಒತ್ತಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದ ಸರಕಾರ, ಏಕಾಏಕಿ ಮರಾಠಾ ಮತ್ತು ಲಿಂಗಾಯತರ ಕುರಿತಂತೆ ಆಸಕ್ತಿ ವಹಿಸಿರುವುದು ಯಾಕೆ? ಜೊತೆಗೆ ಈ ಪ್ರಾಧಿಕಾರ, ನಿಗಮಗಳ ಕುರಿತಂತೆಯೇ ಸರಕಾರದ ಬಳಿ ಗೊಂದಲಗಳಿವೆ. ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬೇಡಿಕೆಗಳು, ಆಗ್ರಹಗಳು ಧೂಳು ತಿನ್ನುತ್ತಿರುವಾಗ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಿದೆ. ಇದು ಮರಾಠಾ ಭಾಷೆಯನ್ನು ಮೇಲೆತ್ತುವ ನಿಟ್ಟಿನಲ್ಲಿ ಸ್ಥಾಪನೆಯಾಗಿದೆಯೇ ಅಥವಾ ಮರಾಠಾ ಸಮುದಾಯದ ಏಳಿಗೆಗೆ ಸಂಬಂಧಿಸಿ ಸ್ಥಾಪನೆಯಾಗಿದೆಯೇ ಎನ್ನುವುದರ ಕುರಿತಂತೆಯೇ ಸರಕಾರಕ್ಕೆ ಸ್ಪಷ್ಟತೆಯಿಲ್ಲ. ‘‘ಮರಾಠಿ ಭಾಷೆಗೂ ಪ್ರಾಧಿಕಾರಕ್ಕೂ ಯಾವ ಸಂಬಂಧವೂ ಇಲ್ಲ’’ ಎನ್ನುತ್ತಾರೆ ಮುಖ್ಯಮಂತ್ರಿ ಯಡಿಯೂರಪ್ಪ. ಮರಾಠಿ ಸಮುದಾಯದ ಐಡೆಂಟಿಟಿಯ ಕುರಿತಂತೆಯೇ ಹಲವು ಗೊಂದಲಗಳು ನಮ್ಮ ನಡುವೆ ಇವೆ. ಮರಾಠಾ ಸಮುದಾಯದ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿರುವ ಪರಿಶಿಷ್ಟರೂ ಇದ್ದಾರೆ. ಹಾಗೆಯೇ ಭಾಷಿಕ ಕಾರಣಕ್ಕಾಗಿ ಗುರುತಿಸಿಕೊಳ್ಳುತ್ತಿರುವ ಮರಾಠಿಗರೂ ನಮ್ಮ ಮುಂದಿದ್ದಾರೆ. ಕೆಲವು ಮರಾಠಾ ಸಮುದಾಯದ ಜನರಿಗೆ ಮರಾಠಿ ಗೊತ್ತೇ ಇಲ್ಲ. ಇದೇ ಸಂದರ್ಭದಲ್ಲಿ ಬೆಳಗಾವಿಯ ಗಡಿಭಾಗದಲ್ಲಿರುವ ಮರಾಠಿಗರು ತಮ್ಮನ್ನೆಂದೂ ಕನ್ನಡಿಗರೆಂದು ಭಾವಿಸಿಯೇ ಇಲ್ಲ. ಭಾಷೆ ಮತ್ತು ಗಡಿಯ ಕಾರಣಕ್ಕಾಗಿ ತಿಕ್ಕಾಟಗಳು ನಡೆಯುತ್ತಿರುವ ಹೊತ್ತಿನಲ್ಲಿ, ಮರಾಠಾ ಪ್ರಾಧಿಕಾರವನ್ನು ಘೋಷಿಸಿರುವುದು ಕನ್ನಡಿಗರ ಗಾಯದ ಮೇಲೆ ಎಳೆದ ಬರೆಯಾಗಿದೆ.
  
ಇನ್ನು ವೀರಶೈವ-ಲಿಂಗಾಯತ ನಿಗಮ ಸ್ಥಾಪನೆಯ ಅನಿವಾರ್ಯತೆಯ ಕುರಿತಂತೆ. ವೀರಶೈವಕ್ಕೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಈಗಾಗಲೇ ಹಲವು ಸ್ವಾಮೀಜಿಗಳು ಮತ್ತು ಲಿಂಗಾಯತ ನಾಯಕರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಲಿಂಗಾಯತ ಧರ್ಮದ ಸ್ಥಾಪಕ ಬಸವಣ್ಣನಾಗಿದ್ದರೆ, ವೀರಶೈವ ಧರ್ಮ ಶೈವ ಧರ್ಮದ ಒಂದು ಶಾಖೆಯಾಗಿದೆ ಮತ್ತು ಅದರ ಮೂಲಪುರುಷರೇ ಬೇರೆ. ಅವರಿಗೂ ಇತಿಹಾಸಕ್ಕೂ ಸಂಬಂಧವಿಲ್ಲ ಎಂದು ಅವರು ವಾದಿಸುತ್ತಿದ್ದಾರೆ. ಜೊತೆಗೆ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟವನ್ನೂ ನಡೆಸುತ್ತಾ ಬಂದಿದ್ದಾರೆ. ಈ ಸುದೀರ್ಘ ಹೋರಾಟಕ್ಕೆ ಯಾವ ಮನ್ನಣೆಯನ್ನೂ ನೀಡದಿರುವ ಸರಕಾರ, ಯಾರೂ ಬೇಡಿಕೊಳ್ಳದಿದ್ದರೂ ‘ವೀರಶೈವ-ಲಿಂಗಾಯತ’ ನಿಗಮ ಸ್ಥಾಪನೆಗೆ ಮುಂದಾಗಿರುವುದು ಲಿಂಗಾಯತ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ವೇಳೆ ನಿಗಮವನ್ನು ಸ್ಥಾಪಿಸುವುದಾದರೆ ಅದಕ್ಕೆ ‘ಬಸವಣ್ಣ’ನವರ ಹೆಸರನ್ನಿಡಬೇಕೇ ಹೊರತು ಜಾತಿಯ ಹೆಸರಿನಲ್ಲಿ ನಿಗಮ ಸ್ಥಾಪನೆಯ ಅಗತ್ಯವಿಲ್ಲ ಎಂದು ಲಿಂಗಾಯತ ಸ್ವಾಮೀಜಿಗಳು ಸಲಹೆ ನೀಡಿದ್ದಾರೆ. ಲಿಂಗಾಯತ ಸಮುದಾಯ ಕರ್ನಾಟಕದ ಸಬಲ ಸಮುದಾಯಗಳಲ್ಲಿ ಒಂದು. ನಾಡಿನ ರಾಜಕೀಯ ಮತ್ತು ಆರ್ಥಿಕ ಪ್ರಾತಿನಿಧ್ಯದಲ್ಲಿ ಈ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ.

ಶೈಕ್ಷಣಿಕವಾಗಿಯೂ ಮುಂದುವರಿದಿರುವ ಸಮುದಾಯವಿದು. ಹೀಗಿದ್ದೂ ಯಾವ ಮಾನದಂಡದ ಮೇಲೆ ಸರಕಾರ ಒಂದು ಜಾತಿಗೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿದೆ ಎನ್ನುವ ಪ್ರಶ್ನೆಯೆದ್ದಿದೆ. ಜನಸಂಖ್ಯೆ ಮತ್ತು ಸಮಾಜದಲ್ಲಿ ಬಲಾಢ್ಯರಾಗಿರುವುದು ನಿಗಮ ಸ್ಥಾಪನೆಗೆ ಅರ್ಹತೆಯೆಂದು ಸರಕಾರ ಭಾವಿಸಿದೆಯೇ? ಈ ನಾಡಿನಲ್ಲಿ ಯಾವುದೇ ಮಠಗಳಿಲ್ಲದ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ಹಲವು ಜಾತಿಗಳಿವೆ. ಇಂತಹ ಜಾತಿಗಳನ್ನು ಗುರುತಿಸಿ ಅವರಿಗೆ ಪ್ರತ್ಯೇಕ ನಿಗಮವನ್ನು ಮಾಡಿದ್ದಿದ್ದರೆ ಅದಕ್ಕೊಂದು ಅರ್ಥವಿತ್ತು. ಇದೀಗ ದುರ್ಬಲ ಜಾತಿಗಳು ಸರಕಾರದ ಸವಲತ್ತುಗಳನ್ನು ತಮ್ಮದಾಗಿಸಲು ತಮಗೊಂದು ಮಠಗಳನ್ನು ಕಟ್ಟಿಕೊಳ್ಳುವುದು ಮತ್ತು ಮಠಾಧೀಶರನ್ನು ಹೊಂದುವುದು ಅನಿವಾರ್ಯ ಎನ್ನುವಂತಾಗಿದೆ.

ಮರಾಠಾ ಸಮುದಾಯವನ್ನು ಓಲೈಸುವುದಕ್ಕಾಗಿ ಮತ್ತು ವೀರಶೈವ ಲಿಂಗಾಯತ ಸ್ವಾಮೀಜಿಗಳನ್ನು ಮೆಚ್ಚಿಸುವುದಕ್ಕಾಗಿ ಚುನಾವಣಾ ತಂತ್ರದ ಭಾಗವಾಗಿ ಈ ಘೋಷಣೆಗಳನ್ನು ಮಾಡಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಸ್ವತಃ ಸ್ವಾಮೀಜಿಗಳೇ ಈ ಬಗ್ಗೆ ತಮ್ಮ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಶಿವಸೇನೆಯ ಪರವಾಗಿರುವ ಮರಾಠಿ ಭಾಷಿಕರನ್ನು ಮೆಚ್ಚಿಸುವುದು, ಪ್ರಾಧಿಕಾರ ಸ್ಥಾಪನೆಯ ಹಿಂದಿರುವ ಇನ್ನೊಂದು ಉದ್ದೇಶವಾಗಿದೆ. ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಇದ್ದೂ ಇಲ್ಲದಂತಿದೆ. ಅದನ್ನು ಮೇಲೆತ್ತುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ವಹಿಸುವುದು ಸರಕಾರದ ಗುರಿಯಾಗಬೇಕಾಗಿತ್ತು. ಹಿಂದಿ ಮತ್ತು ಇತರ ಭಾಷೆಗಳ ದಾಳಿಯಿಂದ ಕನ್ನಡ ತತ್ತರಿಸುತ್ತಿರುವಾಗ, ಕನ್ನಡದ ರಕ್ಷಣೆಗೆ ಮುಂದಾಗದೆ ಮರಾಠಿಯ ರಕ್ಷಣೆಗೆ ಮುಂದಾಗುತ್ತಿರುವುದು ವಿಪರ್ಯಾಸವೇ ಸರಿ. ಒಂದೆಡೆ ಕೇಂದ್ರದಿಂದ ಹಿಂದಿ ಹೇರಿಕೆ ನಡೆಯುತ್ತಿರುವಾಗ, ಸರಕಾರವೇ ಕನ್ನಡಿಗರ ಮೇಲೆ ಮರಾಠಿ ಭಾಷೆಯನ್ನು ಹೇರಲು ಕನ್ನಡಿಗರ ಹಣವನ್ನು ಬಳಸಲು ಮುಂದಾಗಿರುವುದು ಖಂಡನೀಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News