ದಲಿತರ ಮನೆಯಲ್ಲಿ ಅಮಿತ್ ಶಾ ಮಾಡಿದ ಊಟವನ್ನು ತಯಾರಿಸಿದ್ದು 'ಬ್ರಾಹ್ಮಣರು': ಮಮತಾ ಬ್ಯಾನರ್ಜಿ

Update: 2020-11-24 05:09 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಬಂಕೂರಾ ಎಂಬಲ್ಲಿನ ಆದಿವಾಸಿ ಕುಟುಂಬದ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿಗಿನ ಭೇಟಿ ಒಂದು 'ಬೂಟಾಟಿಕೆ' ಎಂದು ಬಣ್ಣಿಸಿದ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆ ಮನೆಯಲ್ಲಿ ಶಾ ಅವರಿಗೆ ಬಡಿಸಲಾದ ಊಟವನ್ನು 'ಬ್ರಾಹ್ಮಣರು' ಸಿದ್ಧಪಡಿಸಿದ್ದರು ಎಂದು ಆರೋಪಿಸಿದ್ದಾರೆ.

"ಶಾ ಅವರು ಇಲ್ಲಿಗೆ ಬಂದು ದಲಿತರ ಮನೆಯಲ್ಲಿ ಊಟ ಮಾಡಿರುವುದು ಬೂಟಾಟಿಕೆ. ಆಹಾರವನ್ನು ಹೊರಗಿನಿಂದ ತರಿಸಲಾಗಿತ್ತು ಹಾಗೂ ಬ್ರಾಹ್ಮಣರೊಬ್ಬರು ಸಿದ್ಧಪಡಿಸಿದ್ದರು,'' ಎಂದು ಆದಿವಾಸಿ ಬಾಹುಳ್ಯದ ಬಂಕೂರ ಜಿಲ್ಲೆ ಖತ್ರಾ ಎಂಬಲ್ಲಿ ಸರಕಾರಿ ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಹೇಳಿದರು.

"ದಲಿತ ಕುಟುಂಬ ಕ್ಯಾಬೇಜ್ ಮತ್ತು ಕೊತ್ತಂಬರಿ ಸೊಪ್ಪು ಕತ್ತರಿಸುತ್ತಿರುವ ವೀಡಿಯೋಗಳಿದ್ದವು ಆದರೆ ಈ ಆಹಾರ ಶಾ ಅವರು ಊಟ ಮಾಡುವಾಗ ಕಾಣಿಸಿರಲಿಲ್ಲ. ಅವರು ಬಾಸ್ಮತಿ ಅಕ್ಕಿ, ಪೊಸ್ತ ಬೋರಾ ತಿಂದಿದ್ದರು,'' ಎಂದು ಹೇಳಿದ ಬ್ಯಾನರ್ಜಿ, ಊಟವಾದ ನಂತರ ಶಾ ಹೊರಟು ಹೋದರು ಎಂದರು. "ಆ ಮನೆಯಲ್ಲಿ ತಲಸ್ಸೇಮಿಯಾದಿಂದ ಬಳಲುತ್ತಿರುವ ಒಂದು ಮಗುವಿದ್ದರೂ ಶಾ ಆ ಮಗುವನ್ನು ನೋಡಿಲ್ಲ,'' ಎಂದು ಮಮತಾ ಹೇಳಿದರು.

ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ  ಹೇಗೆ ಕಾಣಿಸುತ್ತಿದ್ದರು ಎಂದೂ ಗೃಹ ಸಚಿವರಿಗೆ ತಿಳಿದಿಲ್ಲ ಹಾಗೂ ಇದೇ ಕಾರಣದಿಂದ ಮುಂಡಾ ಅವರಂತೆಯೇ ಕಾಣುವ ಬೇರೊಬ್ಬರ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿದ್ದರು ಎಂದು ಹೇಳಿದ ಮಮತಾ,  ನವೆಂಬರ್ 15ರಂದು ಬಿರ್ಸಾ ಮುಂಡಾ ಜಯಂತಿಯಂದು ತಮ್ಮ ಸರಕಾರ ರಜೆ  ಘೋಷಿಸಲಿದೆ ಎಂದಿದ್ದಾರೆ.

"ಬಿರ್ಸಾ ಮುಂಡಾ ಪ್ರತಿಮೆ ಎಂದು ಅಂದುಕೊಂಡು ಶಾ ಅವರು  ಪ್ರತಿಮೆಯೊಂದಕ್ಕೆ ಮಾಲಾರ್ಪಣೆ ಮಾಡಿದ್ದರು. ನಂತರ ಅದು ಒಬ್ಬ ಬೇಟೆಗಾರನದ್ದೆಂದು ತಿಳಿದು ಬಂತು. ಆದರೆ ನಮ್ಮ ಮಾ, ಮಾತಿ, ಮನುಸ್ (ಟಿಎಂಸಿ ಘೋಷಣೆ) ಕಾರ್ಯಕರ್ತರು ಅಲ್ಲಿ ಬಿರ್ಸಾ ಮುಂಡಾ ಪ್ರತಿಮೆ ಸ್ಥಾಪಿಸುತ್ತಾರೆ, ಮುಂದಿನ ರಾಜ್ಯ ರಜೆಗಳ ಪಟ್ಟಿಯಲ್ಲಿ ಬಿರ್ಸಾ ಮುಂಡಾ ಜಯಂತಿಯೂ ಸೇರಲಿದೆ,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News