ಮಹಿಳೆ ತನ್ನ ಇಷ್ಟದವರ ಜತೆ ಜೀವಿಸಬಹುದು: ದಿಲ್ಲಿ ಹೈಕೋರ್ಟ್ ತೀರ್ಪು

Update: 2020-11-26 03:56 GMT

ಹೊಸದಿಲ್ಲಿ, ನ.26: ವಯಸ್ಕ ಮಹಿಳೆ ತಾನು ಇಷ್ಟಪಟ್ಟವರ ಜತೆ ಜೀವಿಸಲು ಮುಕ್ತಳು ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 20 ವರ್ಷದ ಮಹಿಳೆಯನ್ನು ತನ್ನ ಪತಿಯ ಜತೆ ವಾಸಿಸಲು ಅವಕಾಶ ಮಾಡಿಕೊಟ್ಟ ಪ್ರಕರಣದಲ್ಲಿ ಈ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ರಜನೀಶ್ ಭಟ್ನಾಗರ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. ಬಿಜೆಪಿ ಆಡಳಿತದ ಉತ್ತರ ಪ್ರದೇಶದ 'ಲವ್ ಜಿಹಾದ್' ವಿರುದ್ಧದ ಕಾನೂನು ಜಾರಿಗೊಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ವಯಸ್ಕ ಪುರುಷ/ ಮಹಿಳೆ ತಾವು ಇಷ್ಟಪಟ್ಟವರನ್ನು ವಿವಾಹವಾಗುವ ಹಕ್ಕಿನ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ನಡೆಯುತ್ತಿರುವ ನಡುವೆಯೇ ಈ ತೀರ್ಪು ಹೊರಬಿದ್ದಿದೆ.

ಸುಲೇಖಾ ಎಂಬ 20 ವರ್ಷದ ಯುವತಿ ತಾನು ಇಷ್ಟಪಟ್ಟ ಬಬ್ಲೂ ಜತೆ ವಾಸಿಸಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಯುವತಿ ಅಪ್ರಾಪ್ತ ವಯಸ್ಸಿನವಳು ಎಂಬ ಕಾರಣ ನೀಡಿ ಯುವತಿಯನ್ನು ಅಪಹರಿಸಲಾಗಿದೆ ಎಂದು ಯುವತಿಯ ಕುಟುಂಬದವರು ಸಲ್ಲಿಸಿದ ಆಕ್ಷೇಪವನ್ನು ಹೈಕೋರ್ಟ್ ತಳ್ಳಿಹಾಕಿದೆ.

ಸುಲೇಖಾ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಬಳಿಕ ಆಕೆ ಮನೆ ಬಿಟ್ಟು ಹೋಗುವ ವೇಳೆಗೆ ವಯಸ್ಕಳಾಗಿದ್ದಳು ಎನ್ನುವುದನ್ನು ಖಚಿತಪಡಿಸಿಕೊಂಡ ನ್ಯಾಯಾಧೀಶರು, ಬಬ್ಲೂ ಮನೆಗೆ ಸೂಕ್ತ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.

ಯುವತಿಯ ಸಹೋದರಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, "ಅರ್ಜಿದಾರರು ಹಾಗೂ ಸುಲೇಖಾ ಕುಟುಂಬದವರ ಜತೆ ಪೊಲೀಸ್ ಅಧಿಕಾರಿಗಳು ಚರ್ಚಿಸಿ ಕಾನೂನು ಕೈಗೆತ್ತಿಕೊಳ್ಳದಂತೆ ಮತ್ತು ಸುಲೇಖಾ ಅಥವಾ ಬಬ್ಲೂ ಅವರಿಗೆ ಬೆದರಿಕೆ ಹಾಕದಂತೆ ಕ್ರಮ ಕೈಗೊಳ್ಳಬೇಕು" ಎಂದು ಸೂಚಿಸಿದೆ.

ಕೆಲ ದಿನಗಳ ಹಿಂದಷ್ಟೇ ಅಂತರ್ ಧರ್ಮೀಯ ವಿವಾಹಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿದ್ದ ಅಪರಾಧ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News