ಏಶ್ಯದಲ್ಲೇ ಅತ್ಯಂತ ಭ್ರಷ್ಟ ದೇಶ ಯಾವುದು ಗೊತ್ತೇ?

Update: 2020-11-26 04:19 GMT

ಹೊಸದಿಲ್ಲಿ, ನ.26: ಶೇಕಡ 39ರಷ್ಟು ದರದೊಂದಿಗೆ ಇಡೀ ಏಶ್ಯದಲ್ಲೇ ಅತ್ಯಂತ ಭ್ರಷ್ಟ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. ದೇಶದ ಶೇಕಡ 47ರಷ್ಟು ಮಂದಿ ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ ಶೇಕಡ 63ರಷ್ಟು ಮಂದಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸರಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್ ಇತ್ತೀಚೆಗೆ ಬಿಡುಗಡೆ ಮಾಡಿದ ಸಮೀಕ್ಷಾ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ದೇಶದಲ್ಲಿ ಶೇಕಡ 46ರಷ್ಟು ಮಂದಿ ಸಾರ್ವಜನಿಕ ಸೇವೆಗಳ ಸೌಲಭ್ಯ ಪಡೆಯಲು ತಮ್ಮ ವೈಯಕ್ತಿಕ ಸಂಬಂಧ ಬಳಸಿಕೊಳ್ಳುತ್ತಾರೆ ಎನ್ನುವುದೂ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಲಂಚ ನೀಡಿದವರಲ್ಲಿ ಶೇಕಡ 50ರಷ್ಟು ಮಂದಿಗೆ ಲಂಚದ ಬೇಡಿಕೆ ಇತ್ತು. ಶೇಕಡ 32ರಷ್ಟು ಮಂದಿ ತಮ್ಮ ವೈಯಕ್ತಿಕ ಸಂಪರ್ಕವನ್ನು ಬಳಸಿಕೊಳ್ಳದಿದ್ದರೆ ಸೇವೆಗಳು ಲಭಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಬೋಡಿಯಾದಲ್ಲಿ ಭ್ರಷ್ಟಾಚಾರ ಪ್ರಮಾಣ ಶೇಕಡ 37ರಷ್ಟಾಗಿದ್ದು, ಇಂಡೋನೇಶ್ಯ ಶೇಕಡ 30ರಷ್ಟು ಭ್ರಷ್ಟಾಚಾರದೊಂದಿಗೆ ಮೂರನೇ ಸ್ಥಾನದಲ್ಲಿದೆ. ಮಾಲ್ಡೀವ್ಸ್ ಮತ್ತು ಜಪಾನ್‌ನಲ್ಲಿ ಭ್ರಷ್ಟಾಚಾರ ಪ್ರಮಾಣ ಕನಿಷ್ಠ (ಶೇಕಡ 2). ದಕ್ಷಿಣ ಕೊರಿಯಾ (10%) ಮತ್ತು ನೇಪಾಳ (12%) ನಂತರದ ಸ್ಥಾನಗಳಲ್ಲಿವೆ. ಈ ದೇಶಗಳಲ್ಲಿ ಕೂಡಾ ಸರಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಮೀಕ್ಷೆ ಸಲಹೆ ಮಾಡಿದೆ.

ಜಪಾನ್‌ನಲ್ಲಿ ಶೇಕಡ 4ರಷ್ಟು ಮಂದಿ ಮಾತ್ರ ಸರಕಾರಿ ಸೌಲಭ್ಯಗಳನ್ನು ಪಡೆಯಲು ತಮ್ಮ ವೈಯಕ್ತಿಕ ಸಂಪರ್ಕ ಬಳಸಿಕೊಂಡಿದ್ದಾರೆ. ಆದರೆ ಭಾರತದಲ್ಲಿ ಈ ಪ್ರಮಾಣ ಶೇಕಡ 46. ಇಂಡೋನೇಷ್ಯಾದಲ್ಲಿ ಶೇಕಡ 36. ಇದಕ್ಕೂ ಮುನ್ನ ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್ ಕಳೆದ ಜನವರಿಯಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 80ನೇ ಸ್ಥಾನದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News