ದಿಲ್ಲಿ ಚಲೋ ಪ್ರತಿಭಟನಾ ರ‍್ಯಾಲಿಯತ್ತ ತೆರಳುತ್ತಿದ್ದ ರೈತರ ಮೇಲೆ ಅಶ್ರುವಾಯು, ಜಲಫಿರಂಗಿ

Update: 2020-11-26 06:38 GMT

  ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಎರಡು ದಿನಗಳ ದಿಲ್ಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ದಿಲ್ಲಿಯತ್ತ ಟ್ರಾಕ್ಟರ್‌ಗಳು ಹಾಗೂ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಸಾವಿರಾರು ರೈತರನ್ನು ಬಿಜೆಪಿ ಆಡಳಿತದ ಹರ್ಯಾಣ ಸರಕಾರದ ಭದ್ರತಾ ಸಿಬ್ಬಂದಿ ಹರ್ಯಾಣದ ಗಡಿಯಲ್ಲಿ ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಕೋಲು ಹಾಗೂ ಕತ್ತಿಗಳನ್ನು ಹಿಡಿದಿದ್ದ ಪಂಜಾಬ್‌ನ ಸಾವಿರಾರು ರೈತರು ಸೇತುವೆ ಬಳಿ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ನದಿಗೆ ಎಸೆಯುವ ಮೂಲಕ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೊಲೀಸರೊಂದಿಗೆ ಜಟಾಪಟಿ ನಡೆಸಿದ್ದಾರೆ.

ಪೊಲೀಸರು ರೈತರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿ ಚದುರಿಸಲು ಯತ್ನಿಸಿದ್ದಾರೆ. ಆದರೆ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ರೈತರು ಪೊಲೀಸರೊಂದಿಗೆ ಜಟಾಪಟಿಗಿಳಿದರು.

 ಆರು ರಾಜ್ಯಗಳಾದ-ಉತ್ತರಪ್ರದೇಶ, ಹರ್ಯಾಣ, ಉತ್ತರಾಖಂಡ, ರಾಜಸ್ಥಾನ, ಕೇರಳ ಹಾಗೂ ಪಂಜಾಬ್‌ನ ರೈತರುಗಳು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಯುತ್ತಿರುವ ದಿಲ್ಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

 ಏರುತ್ತಿರುವ ಕೊರೋನ ವೈರಸ್ ಪ್ರಕರಣದ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ನಗರದಲ್ಲಿಯಾವುದೇ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ್ದಾರೆ. ಗುರುಗಾಂವ್ ಹಾಗೂ ಫರಿದಾಬಾದ್‌ನಲ್ಲಿರುವ ದಿಲ್ಲಿಯ ಗಡಿಗಳನ್ನು ಮುಚ್ಚಲಾಗಿದೆ. ಜನಸಂದಣಿಯಾಗುವ ಕಾರಣಕ್ಕೆ ದಿಲ್ಲಿ ಮೆಟ್ರೋ ಸೇವೆಗಳನ್ನು ನಿರ್ಬಂಧಿಸಲಾಗಿದೆ. ನೆರೆಯ ನಗರಗಳ ರೈಲುಗಳನ್ನು ಮಧ್ಯಾಹ್ನ 2 ಗಂಟೆಯ ತನಕ ಸ್ಥಗಿತಗೊಳಿಸಲಾಗಿದೆ ಎಂದು ದಿಲ್ಲಿ ಮಟ್ರೋ ರೈಲು ಕಾರ್ಪೋರೇಶನ್ ಟ್ವೀಟಿಸಿದೆ.

 ಹರ್ಯಾಣದ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಆದೇಶದ ಮೇರೆಗೆ ಇಂದು ಹಾಗೂ ನಾಳೆ ಪಂಜಾಬ್‌ನ ಬಾರ್ಡರ್‌ನ್ನು ಹರ್ಯಾಣ ರಾಜ್ಯವು ಮುಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News