ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಡಿಸೆಂಬರ್ 31ರ ತನಕ ವಿಸ್ತರಣೆ

Update: 2020-11-26 09:13 GMT

ಹೊಸದಿಲ್ಲಿ :  ಜಗತ್ತಿನ ವಿವಿಧೆಡೆ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು  ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಡಿಸೆಂಬರ್ 2020ರ ಅಂತ್ಯದ ತನಕ ವಿಸ್ತರಿಸಿದೆ. ಆದರೆ ಈ ನಿರ್ಬಂಧವು ಕಾರ್ಗೋ ವಿಮಾನಗಳ ಹಾರಾಟಕ್ಕೆ ಹಾಗೂ ಮಹಾನಿರ್ದೇಶನಾಲಯದ ಅನುಮತಿ ಪಡೆದ ಇತರ ವಿಮಾನಗಳ ಹಾರಾಟಕ್ಕೆ  ಅನ್ವಯವಾಗುವುದಿಲ್ಲ.

ಆಯಾಯ ಪ್ರಕರಣಗಳನ್ನಾಧರಿಸಿ  ನಿರ್ದಿಷ್ಟ ಪ್ರಾಧಿಕಾರಗಳು ಕೆಲವೊಂದು ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಅನುಮತಿಸಬಹುದು ಎಂದು ಡಿಜಿಸಿಎ ಹೇಳಿದೆ.

ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳ  ಮೇಲಿನ ನಿರ್ಬಂಧವನ್ನು ಮೊದಲು ಮಾರ್ಚ್ 23ರಂದು ಹೇರಲಾಗಿತ್ತು. ಆದರೆ ಮೇ ನಂತರ ಕೆಲವೊಂದು ವಿಶೇಷ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಜುಲೈ ತಿಂಗಳಿನಿಂದ  ಭಾರತ ಏರ್ ಬಬ್ಬಲ್ ಏರ್ಪಾಟುಗಳನ್ನು ಹೊಂದಿದ್ದ ಕೆಲವೊಂದು ಆಯ್ದ ದೇಶಗಳಿಗೆ ವಿಮಾನ ಹಾರಾಟ ಆರಂಭಕ್ಕೆ ಅನುಮತಿ ದೊರಕಿತ್ತು. ಭಾರತ ಇದೀಗ ಸುಮಾರು 22 ರಾಷ್ಟ್ರಗಳ ಜೊತೆಗೆ ಏರ್ ಬಬ್ಬಲ್ ಏರ್ಪಾಡು ಮಾಡಿಕೊಂಡಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಬಹರೈನ್, ಭೂತಾನ್, ಕೆನಡ, ಇಥಿಯೋಪಿಯ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕೀನ್ಯ, ಮಾಲ್ಡೀವ್ಸ್, ನೆದರ್‌ಲ್ಯಾಂಡ್ಸ್, ನೈಜೀರಿಯ, ಓಮಾನ್,ಖತರ್, ರವಾಂಡ, ತಾಂಝಾನಿಯಾ, ಯುಎಇ, ಯುಕೆ, ಉಕ್ರೇನ್ ಹಾಗೂ ಅಮೆರಿಕದೊಂದಿಗೆ ಏರ್‌ಬಬ್ಬಲ್ ವ್ಯವಸ್ಥೆ ಮಾಡಿದೆ. 

ದೇಶೀಯ ವಿಮಾನ ಸೇವೆಗಳು ಮೇ 25ರಿಂದ ಆರಂಭಗೊಂಡಿದ್ದವು. ಈ ವರ್ಷದ ಮೇ ತಿಂಗಳಿನಿಂದ ವಂದೇ ಭಾರತ ಮಿಷನ್ ಅಡಿ ವಿಶೇಷ ಅಂತರ್‌ರಾಷ್ಟ್ರೀಯ ವಿಮಾನಗಳು ಕಾರ್ಯಾಚರಿಸುತ್ತಿವೆ.

 ಮಾರ್ಚ್ 23 ರ ಬಳಿಕ ಕೊರೋನ ವೈರಸ್ ಕಾರಣಕ್ಕೆ ಅಂತರ್‌ರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆಗಳನ್ನು ಭಾರತ ರದ್ದುಪಡಿಸಿತ್ತು. ಈ ತಿಂಗಳಾರಂಭದಲ್ಲಿ ಡಿಜಿಸಿಎ ಅಂತರ್‌ರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟದ ಮೇಲಿನ ನಿರ್ಬಂಧವನ್ನು ನ.30ರ ತನಕ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News