ಕೇಂದ್ರದ ಕಾರ್ಮಿಕ ಕಾಯ್ದೆಗಳನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Update: 2020-11-26 16:25 GMT

ಬೆಂಗಳೂರು, ನ.26: ಕೇಂದ್ರ ಸರಕಾರದ ಕಾರ್ಮಿಕ ಕಾಯ್ದೆಗಳನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಮಳೆಯಲ್ಲೇ ಮೆರವಣಿಗೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದವು.

ಎಐಎಸ್‍ಎಫ್, ಎಸ್‍ಎಫ್‍ಐ, ಎಐಡಿಎಸ್‍ಒ, ಎಐಎಸ್‍ಎ, ಕೆವಿಎಸ್, ಎಐಟಿಯುಸಿ, ಸಿಐಟಿಯುಸಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕೊರೋನ ಪ್ರಾರಂಭಿಕ ದಿನಗಳಲ್ಲಿ ಅನಿರೀಕ್ಷಿತವಾಗಿ ಲಾಕ್‍ಡೌನ್ ಮಾಡಲಾಯಿತು. ಮೊದಲೇ ಸಂಕಷ್ಟದಲ್ಲಿರುವ ಕಾರ್ಮಿಕರ ಹಿತ ಕಾಪಾಡುವ ಬದಲಿಗೆ ಮತ್ತಷ್ಟು ಸಂಕಷ್ಟ ಮಾತ್ರವಲ್ಲ, ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಅನ್ನದಾತ ರೈತ ಶ್ರಮಿಕರನ್ನು ಸಂಕಷ್ಟಕ್ಕೆ ತಳ್ಳುವ ಹಲವು ಕಾಯ್ದೆಗಳನ್ನು ಜಾರಿಗೆ ತರಲಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೊರೋನ ಸಂಕಷ್ಟದಿಂದ ಉದ್ಯೋಗಗಳನ್ನು ಕಳೆದುಕೊಂಡು ಸುಮಾರು 15 ಕೋಟಿ ಜನರ ಬದುಕು ಬೀದಿಗೆ ಬಿದ್ದಿದೆ. ಇಂತಹ ಆದಾಯ ತೆರಿಗೆ ರಹಿತ ಕುಟುಂಬಗಳಿಗೆ 7500 ರೂ. ಪಾವತಿಸಬೇಕು. ಅಗತ್ಯವಿರುವವರಿಗೆ ತಿಂಗಳಿಗೆ 10 ಕೆಜಿ ಉಚಿತ ಪಡಿತರ ನೀಡಬೇಕು. ನರೇಗಾ ಕೆಲಸವನ್ನು 200 ದಿನಗಳಿಗೆ ಹೆಚ್ಚಿಸಿ ನಗರ ಪ್ರದೇಶಗಳಿಗೆ ವಿಸ್ತರಿಸಿ ಕೂಲಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಹಣಕಾಸು ವಲಯ ಸೇರಿದಂತೆ ಸಾರ್ವಜನಿಕ ವಲಯ, ರೈಲ್ವೆ ರಕ್ಷಣಾ ವಲಯದ ಆರ್ಡಿನೆನ್ಸ್, ಕಾರ್ಖಾನೆಗಳು, ಬಂದರು ಮುಂತಾದ ಸರಕಾರಿ ಉತ್ಪಾದನಾ ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ಎನ್‍ಪಿಸಿ ರದ್ದುಮಾಡಿ ಹಿಂದಿನ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮಳೆ ನಡುವೆಯೂ ಚಾಲಕರ ಪ್ರತಿಭಟನೆ

ನಗರದಲ್ಲಿ ಸೈಕ್ಲೋನ್ ಮಳೆಯ ನಡುವೆಯೂ ಗುರುವಾರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು. ಆರ್ಥಿಕ ಸಂಕಷ್ಟ ಇರುವುದರಿಂದ ಸಾಲ ಮರುಪಾವತಿ ತಡೆ ಅವಧಿ ವಿಸ್ತರಣೆ ಮಾಡಬೇಕು. ಅಸಂಘಟಿತ ಚಾಲಕರಿಗೆ ಅಭಿವೃದ್ಧಿ ನಿಗಮ ಜಾರಿಯಾಗಬೇಕು. ಹೊಸ ಆಟೋ ಮಾರಾಟ ತೆರಿಗೆಯನ್ನು ಶೇ.17ರಿಂದ ಶೇ.5ಕ್ಕೆ ಇಳಿಕೆ ಮಾಡಬೇಕು. ಹಳೇ ವಾಹನಗಳಿಗೂ ಎಫ್‍ಸಿ, ಪ್ರಯಾಣ ದರ ಹೆಚ್ಚಳ ಮಾಡಬೇಕು. ಖಾಸಗಿ ಬ್ಯಾಂಕುಗಳು ಚಾಲಕರಿಂದ ಹೆಚ್ಚು ಬಡ್ಡಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. 15 ವರ್ಷದ ಹಳೆ ವಾಹನಗಳ ಫಲಕ ಎಫ್‍ಸಿ ನಿಲ್ಲಿಸಿರುವುದನ್ನು ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಚಾಲಕರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News