​ಇನ್ನು ಸ್ಥಳೀಯ ಭಾಷೆಯಲ್ಲಿ ಎಂಜಿನಿಯರಿಂಗ್ ಕೋರ್ಸ್ !

Update: 2020-11-27 06:03 GMT
ರಮೇಶ್ ಪೋಖ್ರಿಯಾಲ್

ಹೊಸದಿಲ್ಲಿ : ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಾಂತ್ರಿಕ ಶಿಕ್ಷಣವನ್ನು ಅದರಲ್ಲೂ ಮುಖ್ಯವಾಗಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾದೇಶಿಕ ಭಾಷೆಗಳಲ್ಲಿ ನೀಡಲು ಮುಂದಾಗಿದೆ. ಕೆಲ ಐಐಟಿಗಳು ಮತ್ತು ಎನ್‌ಐಟಿಗಳನ್ನು ಇದಕ್ಕಾಗಿ ಪಟ್ಟಿ ಮಾಡಲಾಗಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಹಾಲಿ ಇರುವ ಶಾಲಾ ಶಿಕ್ಷಣ ಮಂಡಳಿಗಳ ಪರಿಸ್ಥಿತಿಯನ್ನು ಅವಲೋಕಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಪಠ್ಯಕ್ರಮವನ್ನು ಪ್ರಕಟಿಸಲಿದೆ.

ಸಭೆ ಬಳಿಕ ಈ ಸಂಬಂಧ ಟ್ವೀಟ್ ಮಾಡಿದ ಪೊಖ್ರಿಯಾಲ್, "ಮಾತೃಭಾಷೆಯಲ್ಲ ಎಂಜಿನಿಯರಿಂಗ್ ಶಿಕ್ಷಣ ನೀಡುವ ಮಹತ್ವದ ನಿರ್ಧಾರವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಕೆಲ ಐಐಟಿ ಹಾಗೂ ಎನ್‌ಐಟಿಗಳನ್ನು ಈ ಉದ್ದೇಶಕ್ಕಾಗಿ ಆಯ್ಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

ಮುಂದಿನ ವರ್ಷದಿಂದ ಜೆಇಇ-ಮೈನ್ ಪರೀಕ್ಷೆಯನ್ನು ಹಿಂದಿ ಹಾಗೂ ಇಂಗ್ಲಿಷ್ ಜತೆಗೆ ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಈಗಾಗಲೇ ಎನ್‌ಟಿಎ ನಿರ್ಧರಿಸಿದೆ. ಆದರೆ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತದೆಯೇ ಎಂಬ ಬಗ್ಗೆ ಐಐಟಿಗಳು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಪರೀಕ್ಷೆಯನ್ನೂ ಪ್ರಾದೇಶಿಕ ಭಾಷೆಯಲ್ಲಿ ನಡೆಸುವಂತೆ ಶಿಕ್ಷಣ ಸಚಿವಾಲಯ ಐಐಟಿಗಳಿಗೆ ಸೂಚಿಸಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News