ಹೈದರಾಬಾದ್‍ ನಲ್ಲಿ ಪಾಕಿಸ್ತಾನೀಯರು ಇದ್ದರೆ, ನಿಮ್ಮ ಸಂಸದ, ಸಚಿವರೇನು ನಿದ್ದೆ ಮಾಡುತ್ತಿದ್ದರೇ?

Update: 2020-11-27 08:19 GMT

ಹೈದರಾಬಾದ್: ‘ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಅಲ್ಲಿರುವ ಪಾಕಿಸ್ತಾನ-ಪರ ಮಂದಿ ಹಾಗೂ ರೋಹಿಂಗ್ಯರನ್ನು ಹೊರಗೋಡಿಸಲು ಸರ್ಜಿಕಲ್ ದಾಳಿಗಳನ್ನು ನಡೆಸಲಾಗುವುದು' ಎಂದು ಬಿಜೆಪಿಯ ತೆಲಂಗಾಣ ಘಟಕದ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಹೇಳಿಕೆ ನೀಡಿದ್ದು ಭಾರೀ ವಿವಾದ ಸೃಷ್ಟಿಸಿತ್ತು.

ಇದೀಗ ಈ ಹೇಳಿಕೆಗೆ ತಿರುಗೇಟು ನೀಡಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ, “ಪಾಕಿಸ್ತಾನೀಯರು ಹಾಗೂ ರೋಹಿಂಗ್ಯ ಮುಸ್ಲಿಮರು ಹೈದರಾಬಾದಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದನ್ನು ತಡೆಯಲು ವಿಫಲವಾಗಿರುವುದಕ್ಕೆ  ಸಿಕಂದರಾಬಾದ್ ಬಿಜೆಪಿ ಸಂಸದ ಹಾಗೂ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿಶನ್ ರೆಡ್ಡಿ ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

“ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನನ್ನ ಒಂದೇ ಪ್ರಶ್ನೆ. ಕಳೆದ ಆರೂವರೆ ವರ್ಷಗಳಿಂದ ನೀವು ಈ ದೇಶ ಆಳುತ್ತಿದ್ದೀರಿ. ಸಿಕಂದರಾಬಾದ್‍ನಿಂದ ನಿಮ್ಮ ಪಕ್ಷದ ಸದಸ್ಯರೇ ಸಂಸದರಾಗಿದ್ದಾರೆ ಹಾಗೂ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿದ್ದಾರೆ. ಹೈದರಾಬಾದ್‍ನಲ್ಲಿ ಪಾಕಿಸ್ತಾನೀಯರು ಮತ್ತು ರೋಹಿಂಗ್ಯನ್ನರಿದ್ದರೆ, ಕಳೆದ ಒಂದೂವರೆ ವರ್ಷದಿಂದ ನಿಮ್ಮ ಸಚಿವರು ಏನು ಮಾಡುತ್ತಿದ್ದರು. ಅವರು ನಿದ್ದೆಯಲ್ಲಿದ್ದರೇ?, ರೋಹಿಂಗ್ಯನ್ನರು ಇಲ್ಲಿದ್ದಾರೆಂದು ಅವರಿಗೆ ತಿಳಿದಿರಲಿಲ್ಲವೇ?, ಹಳೆ ನಗರದಲ್ಲಿ ಪಾಕಿಸ್ತಾನೀಯರಿದ್ದಾರೆಂದು ನಿಮ್ಮ ಪಕ್ಷ ಹೇಳುತ್ತಿದೆ, ನಿಮ್ಮ ಸಿಕಂದರಾಬಾದ್ ಸಂಸದ ಹಾಗೂ ನಿಮ್ಮ ಸಚಿವರು ಅಸಮರ್ಥರು ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ, ಅವರನ್ನು ತಕ್ಷಣ  ಸಂಪುಟದಿಂದ ಕೈಬಿಡಬೇಕು'' ಎಂದು ಉವೈಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News