ಭೇಷ್ ಕೇರಳ... ಕೋವಿಡ್ ವಿರುದ್ಧದ ಹೋರಾಟಕ್ಕೆ ನೀತಿ ಆಯೋಗ ಶ್ಲಾಘನೆ!

Update: 2020-11-28 03:58 GMT

ತಿರುವನಂತಪುರ, ನ.28: ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಕೇರಳ ನಡೆಸುತ್ತಿರುವ ಹೋರಾಟವನ್ನು ನೀತಿ ಆಯೋಗದ ಕೋವಿಡ್-19 ಪರಿಹಾರ ಕುರಿತ ವರದಿ ಮುಕ್ತಕಂಠದಿಂದ ಶ್ಲಾಘಿಸಿದೆ.

ಸೋಂಕಿತರ ಸಂಪರ್ಕ ಪತ್ತೆಗೆ ರಾಜ್ಯ ಸಿದ್ಧಪಡಿಸಿದ ಮಾರ್ಗನಕ್ಷೆಗಳನ್ನು ವಿಶೇಷವಾಗಿ ವರದಿ ಉಲ್ಲೇಖಿಸಿದೆ. ಜತೆಗೆ ಕೋವಿಡ್ ಹರಡುವ ಸರಣಿಯನ್ನು ತುಂಡರಿಸುವ ಅಭಿಯಾನಕ್ಕೆ ಮತ್ತು ಪೊಲೀಸರು ಕೈ ಸ್ಯಾನಿಟೈಸ್ ಮಾಡುತ್ತಿರುವ ವಿಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

"ಕೋವಿಡ್-19 ಪರಿಹಾರ ಮತ್ತು ನಿರ್ವಹಣೆ: ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಕ್ರಮಗಳು" ಎಂಬ ವರದಿಯನ್ನು ನೀತಿ ಆಯೋಗ ಪ್ರಕಟಿಸಿದ್ದು, ಕೇರಳದ ಜಿಲ್ಲೆಗಳು ಕಂಡುಕೊಂಡ ಅನುಶೋಧನಾ ಕ್ರಮಗಳನ್ನು ಕೂಡಾ ಉಲ್ಲೇಖಿಸಿದೆ. ವಯನಾಡ್ ಜಿಲ್ಲೆಯಲ್ಲಿ ಆರಂಭಿಕ ಹಂತದಲ್ಲೇ ವರ್ಚುವಲ್ ಪ್ಲಾಟ್‌ಫಾರ್ಮ್ ಬಳಸಿಕೊಂಡು ವೈದ್ಯರು, ನರ್ಸ್‌ಗಳು ಮತ್ತು ಇತರ ಮುನ್ಪಡೆ ಕಾರ್ಯಕರ್ತರನ್ನು ಕೋವಿಡ್-19 ವಿರುದ್ಧದ ಸಮರಕ್ಕೆ ಸಕ್ರಿಯವಾಗಿ ಹೇಗೆ ತರಬೇತುಗೊಳಿಸಲಾಗಿದೆ ಎನ್ನುವುದನ್ನು ವರದಿಯಲ್ಲಿ ವಿವರಿಸಲಾಗಿದೆ. ಇದು ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಸರ್ವಸನ್ನದ್ಧತೆಯನ್ನು ವಿಸ್ತರಿಸಿದೆ ಎಂದು ವರದಿ ಹೊಗಳಿದೆ.

ವಲಸೆ ಅಧಿಕ ಇರುವ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ಜನರನ್ನು ತಲುಪಲು ರಾಜ್ಯ ಅನುಸರಿಸಿದ ಸಂವಹನ ಕಾರ್ಯತಂತ್ರಗಳು ಕೂಡಾ ಆಯೋಗದ ಮೆಚ್ಚುಗೆಗೆ ಪಾತ್ರವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News