ಸುಳ್ಳು ಹೇಳುವುದರಲ್ಲಿ ಮೋದಿ, ಬಿಎಸ್‍ವೈಗೆ ನೊಬೆಲ್ ಕೊಡಬೇಕು: ಮಾಜಿ ಸಚಿವ ವಿ.ಎಸ್ ಉಗ್ರಪ್ಪ

Update: 2020-11-28 13:57 GMT

ಬೆಂಗಳೂರು, ನ.28: ವಿದ್ಯುತ್ ದರ, ನೀರಿನ ದರ ಹಾಗೂ ಆಸ್ತಿ ತೆರಿಗೆ ಇತ್ಯಾದಿಗಳ ದರ ಹೆಚ್ಚಿಸಲು ಹೊರಟಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಶನಿವಾರ ಆನಂದ್ ರಾವ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ರೈತರ ವಿರುದ್ಧ ಬಿಜೆಪಿ ಸರಕಾರ ದಮನಕಾರಿ ನೀತಿ ಅನುಸರಿಸುತ್ತಿದೆ. ರೈತರನ್ನು ಬೀದಿಪಾಲು ಮಾಡುವ ಭೂಸುಧಾರಣಾ ಕಾಯ್ದೆಯನ್ನು ನಾವು ವಿಧಾನಪರಿಷತ್‍ನಲ್ಲಿ ಕೆಡವಿದೆವು. ಹೀಗಾಗಿ, ಮೇಲ್ಮನೆ ಸಭಾಪತಿಯನ್ನೇ ಕೆಳಗಿಳಿಸಲು ಅವಿಶ್ವಾಸ ನಿರ್ಣಯ ತರುತ್ತಿದ್ದಾರೆ. ಪ್ರತಾಪ್ ಚಂದ್ರಶೆಟ್ಟಿ ವಿರುದ್ಧ ತಂದಿರುವ ಈ ಅವಿಶ್ವಾಸ ನಿರ್ಣಯವನ್ನು ಜೆಡಿಎಸ್‍ನವರು ವಿರೋಧಿಸಬೇಕು. ಇಲ್ಲವಾದರೆ ಜಾತ್ಯತೀತ ಜನತಾ ದಳ ಕೂಡ ರೈತ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಜನರ ಸಮಸ್ಯೆಗಳನ್ನ ಪರಿಹರಿಸಲು ಒತ್ತು ನೀಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಿತ್ಯ ಅತ್ಯಾಚಾರಗಳು ಸಂಭವಿಸುತ್ತಿವೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಆದರೆ, ಯುಪಿಗೆ ಅತ್ಯುತ್ತಮ ರಾಜ್ಯ ಎಂದು ಸರ್ಟಿಫಿಕೇಟ್ ಕೊಡುತ್ತಾರೆ ಎಂದು ಟೀಕಿಸಿದ ಅವರು, ರಾಜ್ಯದಲ್ಲೂ ಲವ್ ಜಿಹಾದ್ ಕಾನೂನು ತರುತ್ತಿದ್ದಾರೆ. ಈ ಸಂದರ್ಭದಲ್ಲಿ ಇದು ಬೇಕಾ ಎಂದು ಪ್ರಶ್ನೆ ಮಾಡಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೆಇಬಿಯವರು ಒಂದು ಯೂನಿಟ್ ವಿದ್ಯುತ್‍ಗೆ 40 ಪೈಸೆ ಹೆಚ್ಚಳ ಮಾಡಿದ್ದಾರೆ. ಆಸ್ತಿ ತೆರಿಗೆ ಹೆಚ್ಚಳ ಮಾಡುವ ತೀರ್ಮಾನ ಮಾಡಲಾಗಿತ್ತು. ಜನರು ವಿರೋಧಿಸಿದ್ದರಿಂದ ಸುಮ್ಮನಿದ್ದಾರೆ. ಮುಂದೆ ಅದನ್ನೂ ಮಾಡುತ್ತಾರೆ. ಹಾಗೆಯೇ ನೀರಿನ ದರ ಹೆಚ್ಚಿಸಿದ್ದಾರೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಕಾಲದಲ್ಲಿ 60 ರೂ. ಇದ್ದ ಪೆಟ್ರೋಲ್ ಬೆಲೆ ಈಗ 90ರ ಸಮೀಪಕ್ಕೆ ಬಂದಿದೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಹುಟ್ಟಾ ಸುಳ್ಳುಗಾರ. ನಾನು ನರೇಂದ್ರ ಮೋದಿ ಎಂದು ಅವರು ಹೇಳುವುದಷ್ಟೇ ಸತ್ಯದ ಮಾತು. ನರೇಂದ್ರ ಮೋದಿ ಅವರು ಕೊರೋನದಲ್ಲಿ ಶೀಘ್ರದಲ್ಲೇ ವಿಶ್ವದ ನಂಬರ್ ಒನ್ ಆಗಲಿದ್ದಾರೆ. ಜಿಡಿಪಿಯಲ್ಲೂ ಸಹ ಕೆಳಗಿನಿಂದ ಅವರು ನಂಬರ್ ಒನ್. ಭ್ರಷ್ಟಾಚಾರದಲ್ಲೂ ನಂಬರ್ ಒನ್. ಇಂಥ ಪ್ರಧಾನಮಂತ್ರಿಯಿಂದ ಏನಾದರೂ ಒಳ್ಳೆಯದನ್ನು ನಿರೀಕ್ಷಿಸಲು ಆಗುತ್ತಾ? ಪ್ರತಿಯೊಂದರಲ್ಲೂ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ವಿರುದ್ಧ ಹರಿಹಾಯ್ದರು.

ಸುಳ್ಳು ಹೇಳುವುದರಲ್ಲಿ ಮೋದಿ, ಬಿಎಸ್‍ವೈಗೆ ನೊಬೆಲ್: ಮಾಜಿ ಸಚಿವ ವಿ.ಎಸ್ ಉಗ್ರಪ್ಪ

ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಒಂದು ಸಮೀಕ್ಷೆ ಪ್ರಕಾರ ಇಡೀ ಏಷ್ಯಾದಲ್ಲಿ ಭಾರತವೇ ಅತ್ಯಂತ ಭ್ರಷ್ಟ ರಾಷ್ಟ್ರವಂತೆ. ಹೆಣ್ಣು ಮಕ್ಕಳ ಮೇಲೆ ಅತಿ ಹೆಚ್ಚು ಅತ್ಯಾಚಾರ ಆಗುವುದು ಭಾರತದಲ್ಲೇ ಎಂದು ಆ ಸಮೀಕ್ಷೆ ಹೇಳುತ್ತಿದೆ. ಅಧಿಕಾರಕ್ಕೆ ಬರುವ ಮುನ್ನ ಮೋದಿ ಅವರು ಬಡವರಿಗೆ 15 ಲಕ್ಷ ರೂ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈಗ ಜನರನ್ನ ಲೂಟಿ ಮಾಡುವುದು ಬಿಟ್ಟು ಮೋದಿ ಬೇರೆ ಏನು ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಯಾರಿಗಾದರೂ ನೊಬೆಲ್ ಕೊಟ್ಟರೆ ಅದು ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರಿಗೆ ಸಿಗಬೇಕು ಎಂದು ಮಾಜಿ ಸಚಿವ ವಿ.ಎಸ್ ಉಗ್ರಪ್ಪ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News