ನಾಗಾಲ್ಯಾಂಡ್: ನಾಯಿ ಮಾಂಸ ಮಾರಾಟ ನಿಷೇಧಿಸಿದ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆ

Update: 2020-11-28 13:14 GMT

ಗುವಾಹಟಿ, ನ.28: ನಾಗಾಲ್ಯಾಂಡ್‌ನಲ್ಲಿ ನಾಯಿ ಮಾಂಸ ಮಾರಾಟ ನಿಷೇಧಿಸಿದ ರಾಜ್ಯ ಸರಕಾರದ ಆದೇಶಕ್ಕೆ ಗುವಾಹಟಿ ಹೈಕೋರ್ಟ್‌ನ ಕೊಹಿಮಾ ಪೀಠ ಶನಿವಾರ ತಡೆಯಾಜ್ಞೆ ನೀಡಿದೆ.

ಇದರಿಂದ ಸದ್ಯಕ್ಕೆ ನಾಗಾಲ್ಯಾಂಡ್‌ನಲ್ಲಿ ವಾಣಿಜ್ಯ ಉದ್ದೇಶದಿಂದ ನಾಯಿ ಮಾಂಸ ಆಮದು ಮಾಡಿಕೊಳ್ಳಲು, ವ್ಯಾಪಾರ ಮಾಡಲು ಮತ್ತು ಮಾರಾಟ ನಡೆಸಲು ಅವಕಾಶವಿದೆ ಎಂದು ಸರಕಾರದ ಮೂಲಗಳು ಹೇಳಿವೆ. ನಿತ್ರಾಣಗೊಂಡ ನಾಯಿಗಳನ್ನು ಗೋಣಿಚೀಲದಲ್ಲಿ ತುಂಬಿಸಿ ರವಾನಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ನಾಯಿಮಾಂಸದ ಆಮದು, ವ್ಯಾಪಾರ ಮತ್ತು ಮಾರಾಟವನ್ನು ನಿಷೇಧಿಸಲು ನಾಗಾಲ್ಯಾಂಡ್ ಸರಕಾರ ಕಳೆದ ಜುಲೈಯಲ್ಲಿ ನಿರ್ಧರಿಸಿತ್ತು.

ನಾಗಾಲ್ಯಾಂಡ್‌ನ ಕೆಲವು ಸಮುದಾಯಗಳಲ್ಲಿ ನಾಯಿ ಮಾಂಸದ ಖಾದ್ಯ ಜನಪ್ರಿಯವಾಗಿದೆ. ಇದನ್ನು ವಿರೋಧಿಸಿ , ಕೊಹಿಮಾ ನಗರಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಮಾಂಸದ ವ್ಯವಹಾರ ನಡೆಸುವ ಸಂಘದ ವತಿಯಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸುವಂತೆ ಹೈಕೋರ್ಟ್ ನಾಗಾಲ್ಯಾಂಡ್ ಸರಕಾರಕ್ಕೆ ಸೆಪ್ಟಂಬರ್ 14ರಂದು ಅವಕಾಶ ನೀಡಿತ್ತು. ಆದರೆ ಸರಕಾರ ಅಫಿಡವಿಟ್ ಸಲ್ಲಿಸದ ಕಾರಣ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಮಿಝೊರಾಂನಲ್ಲೂ ನಾಯಿ ಮಾಂಸದ ಆಮದು ಮತ್ತು ವ್ಯಾಪಾರಕ್ಕೆ ಮಾರ್ಚ್‌ನಿಂದ ನಿಷೇಧ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News