‘ಒಂದು ದೇಶ-ಒಂದು ಚುನಾವಣೆ’ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ: ಸ್ಪೀಕರ್ ಕಾಗೇರಿ

Update: 2020-11-28 13:42 GMT

ಬೆಂಗಳೂರು, ನ.28: ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯ ಎದುರು ಪ್ರಸ್ತಾಪಿಸಿರುವ ‘ಒಂದು ದೇಶ-ಒಂದು ಚುನಾವಣೆ’ ಕುರಿತು ಡಿ.7ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದ ಕೊನೆಯ ಎರಡು ದಿನಗಳ ಕಾಲ ಡಿ.14 ಹಾಗೂ 15ರಂದು ವಿಶೇಷ ಚರ್ಚೆ ನಡೆಸಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸಂಬಂಧಪಟ್ಟ ಇನ್ನಿತರರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು.

ಪ್ರಧಾನಿ ಇಷ್ಟು ಗಂಭೀರವಾದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅದು ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ನಮ್ಮ ರಾಜ್ಯದ ವಿಧಾನಸಭೆಯಲ್ಲಿ ಇಡೀ ದೇಶದಲ್ಲೆ ಮೊದಲನೆ ಬಾರಿ ಚರ್ಚೆ ನಡೆಸಬೇಕಾದ ಜವಾಬ್ದಾರಿಯನ್ನು ನಾವು ತೆಗೆದುಕೊಂಡಿರುವುದರಿಂದ, ಶಾಸನ ಸಭೆಯ ಎಲ್ಲ ಸದಸ್ಯರು ಈ ಚರ್ಚೆಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಎರಡು ದಿನಗಳ ಕಾಲ ನಡೆಯುವ ಈ ಚರ್ಚೆ ಬಹಳ ಅರ್ಥಪೂರ್ಣವಾಗಿ, ಫಲಪ್ರದವಾಗಿ ನಡೆದರೆ ಮತ್ತು ಆ ಚರ್ಚೆ ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಒಂದು ದಿಕ್ಸೂಚಿಯಾಗುವ ರೀತಿಯಲ್ಲಿ ನಾವು ಕಾರಣಿಕರ್ತರಾಗಬೇಕು ಎಂದು ಸ್ಪೀಕರ್ ಹೇಳಿದರು.

ಗುಜರಾತ್ ರಾಜ್ಯದ ಕೆವಾಡಿಯಾದಲ್ಲಿ ನ.25 ಹಾಗೂ 26ರಂದು ನಡೆದ ದೇಶದ ಎಲ್ಲ ವಿಧಾನಸಭೆ, ವಿಧಾನಪರಿಷತ್ತಿನ ಪೀಠಾಸೀನ ಅಧಿಕಾರಿಗಳ (ಸ್ಪೀಕರ್ ಗಳು) ಸಮಾವೇಶದಲ್ಲಿ ‘ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಪರಸ್ಪರ ಸಾಮರಸ್ಯ, ಸಮನ್ವಯತೆಯೂ ಸದೃಢ ಪ್ರಜಾಪ್ರಭುತ್ವದ ಬುನಾದಿಯಾಗಿದೆ’ ಎಂಬ ವಿಷಯದ ಕುರಿತು ಚರ್ಚೆಯಾಯಿತು ಎಂದು ಸ್ಪೀಕರ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ‘ಒಂದು ದೇಶ-ಒಂದು ಚುನಾವಣೆ’ ಈ ವಿಷಯವನ್ನು ಸಮಾವೇಶದಲ್ಲಿ ಆದ್ಯತೆಯ ಮೇಲೆ ಪ್ರಸ್ತಾಪಿಸಿದ್ದಾರೆ. ದೇಶ, ಲೋಕಸಭೆ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರುವ ಮುನ್ನ ರಾಜ್ಯಗಳಲ್ಲಿ ವಿಧಾನಸಭೆಯಲ್ಲಿ ಚರ್ಚೆಯಾಗಲಿ ಎಂದು ಅವರು ಹೇಳಿದ್ದಾರೆ ಎಂದು ಕಾಗೇರಿ ಹೇಳಿದರು.

ಈ ಹಿಂದೆಯೂ ಒಂದು ದೇಶ, ಒಂದು ಚುನಾವಣೆ ಬಗ್ಗೆ ಚರ್ಚೆಗಳು ನಡೆದಿವೆ. ತಜ್ಞರು ವಿವಿಧ ದೇಶಗಳಲ್ಲಿನ ಚುನಾವಣಾ ವ್ಯವಸ್ಥೆ, ನಮ್ಮ ದೇಶದಲ್ಲಿನ ಚುನಾವಣಾ ವ್ಯವಸ್ಥೆಗಳ ಬಗ್ಗೆ ಹಲವಾರು ಅಭಿಪ್ರಾಯಗಳು, ಲೇಖನಗಳನ್ನು ಬರೆದಿದ್ದಾರೆ ಎಂದು ಅವರು ತಿಳಿಸಿದರು.

ನಮ್ಮ ರಾಜ್ಯದ ವಿಧಾನಸಭೆಯಲ್ಲಿ ಈ ಕಳೆದ ಮಾರ್ಚ್ ನಲ್ಲಿ ನಡೆಸಿದ ಸಂವಿಧಾನದ ಮೇಲೆ ಎಂಟು ದಿನಗಳ ಕಾಲ ನಡೆದ ಚರ್ಚೆಯ ಬಗ್ಗೆಯೂ ಈ ಸಮಾವೇಶದಲ್ಲಿ ಆರು ಪುಟಗಳ ಸಂಕಿಪಕ್ಷ ಮಾಹಿತಿ ಒದಗಿಸಲಾಯಿತು. ನಮ್ಮ ಪ್ರಯತ್ನಕ್ಕೆ ಈ ಸಮಾವೇಶದಲ್ಲಿ ಸಾಕಷ್ಟು ಪ್ರೋತ್ಸಾಹದಾಯಕ ಹಾಗೂ ಅಭಿನಂದನಾರ್ಹ ಪ್ರತಿಕ್ರಿಯೆ ಸಿಕ್ಕಿತ್ತು. ಸಂವಿಧಾನದ ಮೇಲೆ ನಡೆದ ಚರ್ಚೆಯ ಅಂಶಗಳನ್ನು ಇಟ್ಟುಕೊಂಡು ಪುಸ್ತಕ ಸಿದ್ಧಪಡಿಸುವ ಕೆಲಸ ಅಂತಿಮ ಹಂತದಲ್ಲಿದೆ ಎಂದು ಸ್ಪೀಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News