ವಿಧಾನಸಭೆ ಅಧಿವೇಶನದಲ್ಲಿ 10 ವಿಧೇಯಕಗಳ ಮಂಡನೆ: ಸ್ಪೀಕರ್ ಕಾಗೇರಿ

Update: 2020-11-28 14:34 GMT

ಬೆಂಗಳೂರು, ನ.28: ಮುಂದಿನ ಡಿಸೆಂಬರ್ 7ರಿಂದ 15ರವರೆಗೆ ನಡೆಯಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಈವರೆಗೆ ನಮಗೆ ಲಭ್ಯವಾಗಿರುವ ಮಾಹಿತಿಯಂತೆ ನಾಲ್ಕು ಆಧ್ಯಾದೇಶಗಳು ಸೇರಿದಂತೆ 10 ವಿಧೇಯಕಗಳನ್ನು ಮಂಡನೆ ಮಾಡಲಾಗುವುದು. ಇನ್ನು ಕೆಲವು ವಿಧೇಯಕಗಳು ಸರಕಾರದ ವತಿಯಿಂದ ಬರುವ ಸಾಧ್ಯತೆಗಳಿವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ(ನೇಮಕಾತಿ ಮುಂತಾದವುಗಳ, ಮೀಸಲಾತಿ)(ತಿದ್ದುಪಡಿ) ವಿಧೇಯಕ, 2018, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ, 2020, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಮತ್ತು ಕೆಲವು ಇತರ ಕಾನೂನು(ಎರಡನೆ ತಿದ್ದುಪಡಿ) ವಿಧೇಯಕ,2020 ವಿಧಾನಸಭೆಯಲ್ಲಿ ಮಂಡನೆಯಾಗಲಿವೆ ಎಂದರು.

ಕಳೆದ ಅಧಿವೇಶನದಲ್ಲಿ ಸರಕಾರದಿಂದ ಸ್ವೀಕರಿಸಿದ್ದು, ಮಂಡನೆಗೆ ಬಾಕಿ ಇರುವ ಶ್ರೀ ಜಗದ್ಗುರು ಮುರುಘಾರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕ, 2020, ವಿದ್ಯಾಶಿಲ್ಪ ವಿಶ್ವವಿದ್ಯಾಲಯ ವಿಧೇಯಕ, 2020 ಹಾಗೂ ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕ, 2020 ಮಂಡನೆಯಾಗಲಿವೆ ಎಂದು ಸ್ಪೀಕರ್ ಹೇಳಿದರು.

ಕಳೆದ ಅಧಿವೇಶನದ ನಂತರ ರಾಜ್ಯ ಸರಕಾರ ಹೊರಡಿಸಿರುವ 2020ನೆ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ)(ಎರಡನೆ ತಿದ್ದುಪಡಿ) ಆಧ್ಯಾದೇಶ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಇತರ ಕಾನೂನು(ಎರಡನೆ ತಿದ್ದುಪಡಿ) ಆಧ್ಯಾದೇಶ, ಕರ್ನಾಟಕ ಭೂ ಸುಧಾರಣೆಗಳ(ಎರಡನೆ ತಿದ್ದುಪಡಿ) ಆಧ್ಯಾದೇಶ ಮತ್ತು ಕರ್ನಾಟಕ ಸ್ಟಾಂಪು(ತಿದ್ದುಪಡಿ) ಆಧ್ಯಾದೇಶಗಳಿಗೆ ಸಂಬಂಧಿಸಿದ ವಿಧೇಯಕಗಳು ಮಂಡನೆಯಾಗಲಿವೆ ಎಂದು ಅವರು ಮಾಹಿತಿ ನೀಡಿದರು.

ಇನ್ನುಳಿದಂತೆ ಕಳೆದ ಅಧಿವೇಶನದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡಿದ್ದ ವ್ಯವಸ್ಥೆಗಳನ್ನೆ ಮುಂದುವರಿಸಲಾಗುವುದು. ಸಚಿವರು, ಶಾಸಕರು ಸೇರಿದಂತೆ ಅಧಿವೇಶನಕ್ಕೆ ನಿಯೋಜಿಸಲ್ಪಟ್ಟಿರುವವರಿಗೆ ಮಾತ್ರ ವಿಧಾನಸಭೆಯ ಮೊಗಸಾಲೆಗೆ ಪ್ರವೇಶವಿರುತ್ತದೆ. ಕ್ಯಾಂಟೀನ್ ಅನ್ನು ಹೊರಗಡೆ ವ್ಯವಸ್ಥೆ ಮಾಡಲಾಗುವುದು. ಸಚಿವರು, ಶಾಸಕರ ಆಪ್ತ ಸಹಾಯಕರಿಗೆ ಹೊರಗಡೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಮಾಧ್ಯಮ ಪ್ರತಿನಿಧಿಗಳಿಗೆ ಸಭಾಧ್ಯಕ್ಷ ವೀಕ್ಷಕರ ಗ್ಯಾಲರಿಯಲ್ಲಿ ವ್ಯವಸ್ಥೆ ಇರುತ್ತದೆ ಎಂದು ಅವರು ಹೇಳಿದರು.

ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರಬೇಕೇ? ಅಥವಾ ಬೇಡವೇ? ಎಂಬುದರ ಕುರಿತು ಆರೋಗ್ಯ ಇಲಾಖೆಯ ಜೊತೆ ಚರ್ಚೆ ನಡೆಸಿ, ಅಂತಿಮ ತೀರ್ಮಾನ ತಿಳಿಸಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News