ಅಕ್ಬರುದ್ದೀನ್ ಉವೈಸಿ, ತೆಲಂಗಾಣ ಬಿಜೆಪಿ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

Update: 2020-11-28 16:00 GMT

ಹೈದರಾಬಾದ್,ನ.28: ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಟಿಡಿಪಿ ಸ್ಥಾಪಕ ಎನ್.ಟಿ.ರಾಮರಾವ್ ಅವರ ಸಮಾಧಿಗಳ ಕುರಿತು ವಿವಾದಾತ್ಮಕ ಹೇಳಿಕೆಗಳಿಗಾಗಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಉವೈಸಿ ಮತ್ತು ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ ಕುಮಾರ್ ವಿರುದ್ಧ ಶನಿವಾರ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಎಐಎಂಐಎಂ ಸ್ಥಾಪಕ ಅಸದುದ್ದೀನ್ ಉವೈಸಿಯವರ ಸೋದರರಾಗಿರುವ ಅಕ್ಬರುದ್ದೀನ್ ನ.25ರಂದು ಬೃಹತ್ ಹೈದರಾಬಾದ್ ನಗರ ಪಾಲಿಕೆಯ ಚುನಾವಣಾ ಪ್ರಚಾರ ಭಾಷಣದಲ್ಲಿ ಜಲಮೂಲಗಳ ಬಳಿ ವಾಸವಿರುವ ಬಡವರನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ವಿರೋಧಿಸಿದ್ದು,ಹುಸೇನ್ ಸಾಗರ್ ಸರೋವರದ ದಂಡೆಯಲ್ಲಿರುವ ನರಸಿಂಹ ರಾವ್ ಮತ್ತು ಎನ್‌ಟಿಆರ್ ಅವರ ಸಮಾಧಿಗಳನ್ನೂ ತೆರವುಗೊಳಿಸಲಾಗುವುದೇ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.

ತನ್ನ ಈ ಹೇಳಿಕೆಗಾಗಿ ಅಕ್ಬರುದ್ದೀನ್ ಕ್ಷಮೆ ಯಾಚಿಸಬೇಕು ಎಂದು ಆಡಳಿತ ಟಿಆರ್‌ಎಸ್ ಮತ್ತು ಬಿಜೆಪಿ ಆಗ್ರಹಿಸಿದ್ದವು.

ಸಂತ ಹುಸೇನ್ ಶಾ ವಲಿ ಅವರಿಂದ ನಿರ್ಮಾಣಗೊಂಡಿದ್ದ 4,700 ಎಕರೆ ವಿಸ್ತೀರ್ಣದ ಹುಸೇನ್ ಸಾಗರ್ ಈಗ 700 ಎಕರೆಗಳಷ್ಟೂ ಉಳಿದಿಲ್ಲ. ರಸ್ತೆಗಳು, ಮಳಿಗೆಗಳು,ಇಬ್ಬರು ನಾಯಕರ ಸಮಾಧಿಗಳು ಮತ್ತು ಲುಂಬಿನಿ ಪಾರ್ಕ್ ಅಲ್ಲಿ ನಿರ್ಮಾಣಗೊಂಡಿವೆ ಎಂದೂ ಅಕ್ಬರುದ್ದೀನ್ ಹೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಂಸದರೂ ಆಗಿರುವ ಬಂಡಿ ಸಂಜಯ ಕುಮಾರ ಅವರು ಅಕ್ಬರುದ್ದೀನ್‌ರನ್ನು ಹೆಸರಿಸದೆ,ಸಮಾಧಿಗಳನ್ನು ನೆಲಸಮಗೊಳಿಸುವ ಧೈರ್ಯ ಅವರಿಗಿದೆಯೇ ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News