ಅಮೆರಿಕದ ಬಾಡಿಗೆ ಸೈನಿಕನಾಗಿ ಕೆಲಸ ಮಾಡುತ್ತಿರುವ ಇಸ್ರೇಲ್: ಇರಾನ್ ಅಧ್ಯಕ್ಷ ಹಸನ್ ರೂಹಾನಿ ಆರೋಪ

Update: 2020-11-28 15:28 GMT

ಟೆಹರಾನ್ (ಇರಾನ್), ನ. 28: ಇರಾನ್‌ನ ಪ್ರಮುಖ ಪರಮಾಣು ವಿಜ್ಞಾನಿ ಮುಹ್ಸಿನ್ ಫಕ್ರಿಝಾದೆಯನ್ನು ಕೊಂದದ್ದು ಇಸ್ರೇಲ್ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಶನಿವಾರ ಆರೋಪಿಸಿದ್ದಾರೆ ಹಾಗೂ ಇಸ್ರೇಲ್, ಅಮೆರಿಕದ ಬಾಡಿಗೆ ಸೈನಿಕನಾಗಿ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದ್ದಾರೆ.

‘‘ಜಾಗತಿಕ ಅಹಂಕಾರದ ದುಷ್ಟ ಕೈಗಳನ್ನು ಮತ್ತೊಮ್ಮೆ ನೋಡುತ್ತಿದ್ದೇವೆ. ಬಾಡಿಗೆ ಸೈನಿಕನಾಗಿ ಕೆಲಸ ಮಾಡುತ್ತಿರುವ ಇಸ್ರೇಲ್‌ನ ಕೈಗೆ ಈ ದೇಶದ ಪುತ್ರನ ರಕ್ತ ಅಂಟಿಕೊಂಡಿದೆ’’ ಎಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ರೂಹಾನಿ ಹೇಳಿದ್ದಾರೆ.

ಇರಾನ್ ಸಾಮಾನ್ಯವಾಗಿ ಅಮೆರಿಕಕ್ಕೆ ‘ಜಾಗತಿಕ ಅಹಂಕಾರ’ ಎಂಬ ಪದವನ್ನು ಬಳಸುತ್ತದೆ.

ಟೆಹರಾನ್ ಹೊರವಲಯದಲ್ಲಿ ಶುಕ್ರವಾರ ಫಕ್ರಿಝಾದೆ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಹಂತಕರು ಗುಂಡು ಹಾರಿಸಿದಾಗ ಅವರು ಗಂಭೀರವಾಗಿ ಗಾಯಗೊಂಡರು ಎಂದು ಇರಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಬಳಿಕ ಹಂತಕರು ಮತ್ತು ವಿಜ್ಞಾನಿಯ ಅಂಗರಕ್ಷಕರ ನಡುವೆ ಗುಂಡಿನ ವಿನಿಮಯ ನಡೆಯಿತು.

ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಪರಮಾಣು ವಿಜ್ಞಾನಿ ಬಳಿಕ ಆಸ್ಪತ್ರೆಯಲ್ಲಿ ‘ಹುತಾತ್ಮ’ರಾದರು ಎಂದು ಸಚಿವಾಲಯ ಹೇಳಿದೆ.

ಅವರ ಸಾವು ಇರಾನ್‌ನ ವೈಜ್ಞಾನಿಕ ಮುನ್ನಡೆಯನ್ನು ತಡೆಯುವುದಿಲ್ಲ ಎಂದು ರೂಹಾನಿ ಹೇಳಿದರು. ಇರಾನ್‌ನ ಅಭಿವೃದ್ಧಿಯನ್ನು ತಡೆಯುವಲ್ಲಿ ಶತ್ರುಗಳು ವಿಫಲರಾದ ಬಳಿಕ, ಕೊಲ್ಲುವ ಕಾರ್ಯಕ್ಕೆ ಅವರು ಇಳಿದಿದ್ದಾರೆ ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News