ದಲಿತ ವ್ಯಕ್ತಿಯ ಥಳಿಸಿ ಹತ್ಯೆ : ಕೊಲೆಗೆ ಕಾರಣವಾದ ಬೆಂಕಿಪೆಟ್ಟಿಗೆ !

Update: 2020-11-30 04:19 GMT

ಭೋಪಾಲ್ : ಕ್ಷುಲ್ಲಕ ಕಾರಣಕ್ಕೆ 50 ವರ್ಷ ವಯಸ್ಸಿನ ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆರೋಪಿಗಳು ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ಕೇಳಿದಾಗ, ದಲಿತ ವ್ಯಕ್ತಿ ನಿರಾಕರಿಸಿದ್ದೇ ಈ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಗುಣ ಜಿಲ್ಲೆಯ ಕರೋಡ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹತ್ಯೆಗೀಡಾದ ಲಾಲ್‌ಜಿರಾಂ ಅಹಿರ್‌ವಾರ್ ತಮ್ಮ ಹೊಲದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಯಶ್ ಯಾದವ್ ಮತ್ತು ಅಂಕೇಶ್ ಯಾದವ್ ಎಂಬವರು ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ಕೇಳಿದರು. ಲಾಲ್‌ಜಿರಾಂ ಇದಕ್ಕೆ ನಿರಾಕರಿಸಿದಾಗ ಆರಂಭವಾದ ವಾಗ್ವಾದ ತೀವ್ರ ಸ್ವರೂಪ ಪಡೆದು, ಲಾಲ್‌ಜಿ ರಾಂ ಅವರನ್ನು ಆರೋಪಿಗಳು ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದರು ಎಂದು ಪೊಲೀಸರು ವಿವರಿಸಿದ್ದಾರೆ.

ಹೊಡೆದಾಟದಲ್ಲಿ ತೀವ್ರ ಗಾಯಗೊಂಡಿದ್ದ ಲಾಲ್‌ಜಿರಾಂ ಅವರನ್ನು ಗುಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು ಎಂದು ಹೆಚ್ಚುವರಿ ಎಸ್ಪಿ ಟಿ.ಎಸ್.ಬಘೇಲ್ ವಿವರಿಸಿದ್ದಾರೆ.

ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರ 8.25 ಲಕ್ಷ ರೂ. ಹಣಕಾಸು ನೆರವು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News