ಇತಿಹಾಸ ನಿರ್ಮಿಸಿದ ರೈತ ಹೋರಾಟ

Update: 2020-11-30 04:52 GMT

ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಾರ್ಪೊರೇಟೀಕರಣಗೊಳಿಸುವ ಕಾನೂನನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ತಂದಿರುವುದು ರೈತಾಪಿ ವರ್ಗವನ್ನು ಕೆರಳಿಸಿದೆ. ತಮ್ಮ ಬೆವರು ರಕ್ತ ಬಸಿದ ಭೂಮಿಯಿಂದಲೇ ತಮ್ಮನ್ನು ಹೊರದಬ್ಬಿ ಕಾರ್ಪೊರೇಟ್ ಲೂಟಿಕೋರರ ಗುಲಾಮಗಿರಿಗೆ ತಮ್ಮನ್ನು ದೂಡುವ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಇದರಿಂದ ಫ್ಯಾಶಿಸ್ಟ್ ಪ್ರಭುಗಳ ಪಿತ್ತ ನೆತ್ತಿಗೇರಿದೆ. ಜಲ ಫಿರಂಗಿ ಬಳಸಿ ನೇಗಿಲ ಯೋಗಿಗಳ ಬಾಯಿ ಮುಚ್ಚಿಸಲು ಹೊರಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಚಾರಿತ್ರಿಕ ಹೋರಾಟವನ್ನು ಬಿಟ್ಟರೆ ಇಂತಹದೊಂದು ದಿಟ್ಟ ಚಳವಳಿ ನಡೆದಿರಲಿಲ್ಲ.ಅದರಲ್ಲೂ ನರೇಂದ್ರ ಮೋದಿ ನೇತೃತ್ವದ ನಾಗಪುರ ಶಕ್ತಿ ಕೇಂದ್ರ ನಿಯಂತ್ರಿತ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನೆತ್ತಿಕೊಂಡು ಪ್ರಭುತ್ವದ ದಮನ ನೀತಿಯನ್ನು ಎದುರಿಸಿ ನಡೆದ ಹೋರಾಟಗಳು ವಿರಳ. ಆದರೆ ಮೋದಿ ಸರಕಾರದ ಮೂರು ಕರಾಳ ಕಾಯ್ದೆಗಳ ವಿರುದ್ಧ ಬೀದಿಗಿಳಿದ ರೈತರು ಅದರಲ್ಲೂ ಪಂಜಾಬ್, ಹರ್ಯಾಣ ರೈತರು ನಡೆಸಿದ ಹೋರಾಟ ಐತಿಹಾಸಿಕ. ಪೊಲೀಸರ ಲಾಠಿ, ಅಶ್ರುವಾಯು, ಜಲ ಫಿರಂಗಿಗಳನ್ನು ಎದುರಿಸಿ ನಡೆಸಿರುವ ಹೋರಾಟ ರೋಮಾಂಚಕ.

ಸರಕಾರದ ರೈತ ವಿರೋಧಿ ನೀತಿಗಳ ವಿರುದ್ಧ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ ರೈತರು ತಮ್ಮ ಟ್ರ್ಯಾಕ್ಟರ್‌ಗಳ ಜೊತೆಗೆ ದಿಲ್ಲಿಗೆ ಹೊರಟಿದ್ದರು. ಈ ರೈತರನ್ನು ಹರ್ಯಾಣದ ಮನೋಹರಲಾಲ್ ಕಟ್ಟಾ ನೇತೃತ್ವದ ಬಿಜೆಪಿ ಸರಕಾರದ ಪೊಲೀಸರು ಘಗ್ಗರ ನದಿ ಸೇತುವೆ ಬಳಿ ತಡೆದು ನಿಲ್ಲಿಸಿದರು. ದಿಲ್ಲಿಯಲ್ಲಿ ಕೊರೆಯುವ ಚಳಿ, ಕೊರೋನ ವ್ಯಾಪಕವಾಗಿದೆ ವಾಪಸು ಹೋಗಿ ಎಂದು ಹೆದರಿಸಿದರು.ರೈತರು ಮುಂದೆ ಸಾಗದಂತೆ ಬ್ಯಾರಿಕೇಡ್‌ಗಳನ್ನು ಹಾಕಿದರು. ಆದರೆ ರೈತರು ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಬ್ಯಾರಿಕೇಡ್‌ಗಳನ್ನು ಕಿತ್ತು ನದಿಗೆಸೆದರು. ಆಗ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಅಶ್ರುವಾಯು ಮತ್ತು ಜಲ ಫಿರಂಗಿ ಪ್ರಯೋಗ ಮಾಡಿದರು. ಇದ್ಯಾವುದಕ್ಕೂ ಜಗ್ಗದ ನೇಗಿಲಯೋಗಿಗಳು ಭದ್ರತಾ ಪಡೆಗಳನ್ನು ತಳ್ಳಿಕೊಂಡು 200 ಕಿ.ಮೀ. ದೂರದ ದಿಲ್ಲಿಯತ್ತ ಮುಂದೆ ಸಾಗಿದರು. ಕೊನೆಗೂ ದಿಲ್ಲಿಯನ್ನು ತಲುಪುವಲ್ಲಿ ಯಶಸ್ವಿಯಾದರು.

ಈ ಮಣ್ಣಿನ ಮಕ್ಕಳ ಹೋರಾಟದಲ್ಲಿ ದೇಶದ ಎಲ್ಲ ಭಾಗಗಳಿಂದ ರೈತರು ಬಂದಿದ್ದರೂ ಕೂಡ ಅತ್ಯಂತ ಹೆಚ್ಚಿನ ಸಂಖ್ಯೆಯ ರೈತರು ಬಂದಿದ್ದು ಪಂಜಾಬ್, ಹರ್ಯಾಣಗಳಿಂದ. ಪಂಜಾಬಿನ ರೈತರು ಇಂತಹ ಸಮರೋಚಿತ ಹೋರಾಟಗಳಿಗೆ ಹೆಸರು ಮಾಡಿದವರು.

ಪಂಜಾಬ್ ರೈತರ ಈ ಹೋರಾಟದ ವಿವರಗಳನ್ನು ಓದಿದಾಗ ಹಿರಿಯ ಕಮ್ಯುನಿಸ್ಟ್ ನಾಯಕ ಬಿ.ವಿ. ಕಕ್ಕಿಲ್ಲಾಯರ ಮಾತುಗಳು ನೆನಪಾದವು. ಐವತ್ತರ ದಶಕದಲ್ಲಿ ನಡೆದ ಗೋವಾ ವಿಮೋಚನಾ ಹೋರಾಟದಲ್ಲಿ ಕಕ್ಕಿಲ್ಲಾಯರು ಕರ್ನಾಟಕದ ಕಮ್ಯುನಿಸ್ಟ್ ಕಾರ್ಯಕರ್ತರ ತಂಡದ ನೇತೃತ್ವವನ್ನು ವಹಿಸಿದ್ದವರು. ಆಗ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಗೋವಾ, ಮಡಗಾಂವ್, ವಾಸ್ಕೊ, ದಿಯು, ದಾಮನ್ ಮುಂತಾದ ಪ್ರದೇಶಗಳು ಪೋರ್ಚುಗೀಸರ ವಶದಲ್ಲಿದ್ದವು.ಅವುಗಳ ವಿಮೋಚನೆಗೆ ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ಮುಂತಾದ ಪಕ್ಷಗಳು ಹೋರಾಟ ಹಮ್ಮಿಕೊಂಡಿದ್ದವು. ಈ ಹೋರಾಟವೆಂದರೆ ಪೋರ್ಚುಗೀಸ್ ಸೈನಿಕರನ್ನು ಹಿಮ್ಮೆಟ್ಟಿಸಿ ಗೋವಾ ಗಡಿಯನ್ನು ಪ್ರವೇಶಿಸುವುದಾಗಿತ್ತು. ಆಗ ಬೆಳಗಾವಿ ಮೂಲಕ ಗೋವಾವನ್ನು ಪ್ರವೇಶಿಸುತ್ತಿದ್ದ ಚಳವಳಿಗಾರರ ಮೇಲೆ ಪೊಲೀಸರು ಎಂತಹ ದೌರ್ಜನ್ಯ ನಡೆಸುತ್ತಿದ್ದರೆಂದರೆ ಅಲ್ಲಿಂದ ಬದುಕಿ ಬರುವುದೇ ಸಾಧ್ಯವಿರಲಿಲ್ಲ. ಶಾಂತಿಯುತವಾಗಿ ಘೋಷಣೆ ಕೂಗುತ್ತಾ ಗೋವಾದೊಳಗೆ ನುಗ್ಗುತ್ತಿದ್ದ ಹೋರಾಟಗಾರರ ಮೇಲೆ ಪೋರ್ಚುಗೀಸ್ ಸೈನಿಕರು ಗುಂಡಿನ ಸುರಿಮಳೆ ಮಾಡುತ್ತಿದ್ದರು. ಹೀಗೆ ಗೋಲಿಬಾರ್ ನಡೆಯುತ್ತಿರುವಾಗ ಉಳಿದವರು ಹಿಂದೆ ಮುಂದೆ ಮಾಡಿದರೆ ಪಂಜಾಬಿನ ಸಂಗಾತಿಗಳು ಗುಂಡಿನ ದಾಳಿಗೆ ಎದೆಯೊಡ್ಡಿ ಮುನ್ನುಗ್ಗುತ್ತಿದ್ದರು ಎಂದು ಕಕ್ಕಿಲ್ಲಾಯರು ಪಂಜಾಬ್‌ನ ಸಿಖ್ ಸಂಗಾತಿಗಳ ಸಾಹಸದ ಕತೆಯನ್ನು ಹೇಳುತ್ತಿದ್ದರು. ದಿಲ್ಲಿಯಲ್ಲಿ ಪಂಜಾಬ್ ರೈತರು ಅಶ್ರುವಾಯು, ಜಲ ಫಿರಂಗಿ ಎದುರಿಸಿ ಭದ್ರತಾ ಪಡೆಗಳನ್ನು ಹಿಮ್ಮೆಟ್ಟಿಸಿ ಮುನ್ನುಗ್ಗಿದ್ದನ್ನು ನೋಡಿದಾಗ ಕಕ್ಕಿಲ್ಲಾಯರು ಹೇಳಿದ ಪಂಜಾಬಿಗಳ ಶೌರ್ಯದ ಕತೆ ನೆನಪಿಗೆ ಬಂತು.

ದಿಲ್ಲಿಗೆ ಬಂದ ಈ ಲಕ್ಷಾಂತರ ರೈತರಿಗೆ ಮಸೀದಿ, ದರ್ಗಾಗಳಲ್ಲಿ ಅಡಿಗೆ ಮಾಡಿ ದಾಸೋಹದ ವ್ಯವಸ್ಥೆ ಮಾಡಿದ ಮುಸಲ್ಮಾನರು ಬೆವರು ಬಸಿದು ದೇಶ ಕಟ್ಟಿದವರಿಗೆ ಸಾಥ್ ನೀಡಿದರು. ಈ ರೈತರಿಗೆ ಯಾವುದೇ ಜಾತಿ, ಮತಗಳ ಗೊಡವೆ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಇವರನ್ನು ಒಡೆಯಲು ಸಾಧ್ಯವಿಲ್ಲ. ತಮ್ಮ ಭೂಮಿಯನ್ನು ಕಿತ್ತುಕೊಂಡು ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಖದೀಮರ ಮಡಿಲಿಗೆ ಹಾಕಲು ಹೊರಟ ಖೋಟಾ ರಾಷ್ಟ್ರ ಭಕ್ತರ ಸರಕಾರದ ವಿರುದ್ಧ ಇವರೆಲ್ಲ ಸಿಡಿದೆದ್ದು ದಿಲ್ಲಿಗೆ ಬಂದಿದ್ದರು.

ಭಾರತ ಕೃಷಿ ಪ್ರಧಾನ ದೇಶ. ಇಲ್ಲಿನ ಆರ್ಥಿಕತೆಗೆ ಅದೇ ಬೆನ್ನೆಲುಬು. ಕೊರೋನ ನಂತರವಂತೂ ಗ್ರಾಮೀಣ ಆರ್ಥಿಕತೆ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ವಾಗಿ ಕಾರ್ಪೊರೇಟೀಕರಣಗೊಳಿಸುವ ಕಾನೂನನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ತಂದಿರುವುದು ರೈತಾಪಿ ವರ್ಗವನ್ನು ಕೆರಳಿಸಿದೆ. ತಮ್ಮ ಬೆವರು, ರಕ್ತ ಬಸಿದ ಭೂಮಿಯಿಂದಲೇ ತಮ್ಮನ್ನು ಹೊರದಬ್ಬಿ ಕಾರ್ಪೊರೇಟ್ ಲೂಟಿಕೋರರ ಗುಲಾಮಗಿರಿಗೆ ತಮ್ಮನ್ನು ದೂಡುವ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಇದರಿಂದ ಫ್ಯಾಶಿಸ್ಟ್ ಪ್ರಭುಗಳ ಪಿತ್ತ ನೆತ್ತಿಗೇರಿದೆ. ಜಲ ಫಿರಂಗಿ ಬಳಸಿ ನೇಗಿಲ ಯೋಗಿಗಳ ಬಾಯಿ ಮುಚ್ಚಿಸಲು ಹೊರಟಿದ್ದಾರೆ.

ನಾನು ಕಳೆದ ಐದು ದಶಕದಲ್ಲಿ ಇಂತಹ ಹಲವಾರು ರೈತ ಹೋರಾಟಗಳನ್ನು ನೋಡಿದ್ದೇನೆ. ಕೆಲ ಹೋರಾಟಗಳಲ್ಲಿ ಸ್ವತಃ ಭಾಗವಹಿಸಿದ್ದೇನೆ. ನರಗುಂದ ರೈತರ ಹೋರಾಟ, ಗೋಲಿಬಾರ್ ನಂತರ ನಡೆದ ರೈತರ ಬೆಂಗಳೂರು ಜಾಥಾ ಇವೆಲ್ಲವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ನರಗುಂದ ಜಾಥಾ ನಂತರವೇ ರಾಜ್ಯ ರೈತ ಸಂಘ ಅಸ್ತಿತ್ವಕ್ಕೆ ಬಂದು ಮುಂದೆ ಪ್ರೊ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್ ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘಗಳನ್ನು ಕಟ್ಟಿದರು. ನರಗುಂದ ಹೋರಾಟ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಿಸಿತು. 1983ರಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬಂದು ರಾಮಕೃಷ್ಣ ಹೆಗಡೆ ರಾಜ್ಯದ ಮುಖ್ಯಮಂತ್ರಿಯಾದರು.ಆಗ ಕಮ್ಯುನಿಸ್ಟ್ ಪಕ್ಷಗಳ ಆರು ಮಂದಿ ರಾಜ್ಯ ವಿಧಾನಸಭೆಗೆ ಚುನಾಯಿತರಾಗಿ ಬಂದಿದ್ದರು.ಮುಂದೆ ಅದೇ ಹೆಗಡೆಯವರು ರೈತ ಚಳವಳಿಯ ವಿರುದ್ಧ ದಮನಸತ್ರ ನಡೆಸಿದರು. ಅದರ ವಿವರ ಈಗ ಬೇಡ. ರೈತರು ಬೀದಿಗೆ ಬಂದರೆ ಸರಕಾರದ ಅಡಿಪಾಯವೇ ನಡಗುತ್ತದೆ ಎಂಬುದನ್ನು ಹೇಳಲು ಎಂಬತ್ತರ ದಶಕದ ನರಗುಂದ ಹೋರಾಟದ ಪ್ರಸ್ತಾವ ಮಾಡಬೇಕಾಯಿತು.

ನರಗುಂದ ರೈತ ಹೋರಾಟ ಬೆಟರ್‌ಮೆಂಟ್ ಲೇವಿ ಮುಂತಾದ ಸ್ಥಳೀಯ ಸಮಸ್ಯೆಗಳ ವಿರುದ್ಧ ಆರಂಭವಾಯಿತು. ಅಂದಿನ ಗುಂಡೂರಾವ್ ಸರಕಾರ ಸಹಾನುಭೂತಿಯಿಂದ ವರ್ತಿಸಿದ್ದರೆ ಅದು ಹಿಂಸಾತ್ಮಕ ರೂಪ ತಾಳುತ್ತಿರಲಿಲ್ಲ. ಸರಕಾರದ ದಮನ ನೀತಿಯಿಂದ ಹತಾಶರಾದ ರೈತರಿಗೆ ಆಗ ಧಾರವಾಡದ ಕಮ್ಯುನಿಸ್ಟ್ ನಾಯಕರಾಗಿದ್ದ ವಿ.ಎನ್. ಹಳಕಟ್ಟಿ, ಮುಂದೆ ಶಾಸಕರಾದ ಬಿ.ಆರ್. ಯಾವಗಲ್ ಅವರು ನೇತೃತ್ವ ನೀಡಿದರು. ಈಗ ಸಿಪಿಎಂ ಹಿರಿಯ ನಾಯಕರಾದ ನಿತ್ಯಾನಂದ ಸ್ವಾಮಿ ಅವರು ಹಿನ್ನೆಲೆಯಲ್ಲಿ ನಿಂತು ಹೋರಾಟ ಸಂಘಟಿಸಿದರು. ಆಗ ಅವರು ಕಾವಿಧಾರಿ ಸನ್ಯಾಸಿ. ಮುಂದೆ ಕಾವಿ ಕಳಚಿ ಕಾಮ್ರೇಡ್ ಆದರು.

ಹೀಗೆ ಸೀಮಿತ ಬೇಡಿಕೆಗಳನ್ನು ಇಟ್ಟುಕೊಂಡು ಆರಂಭವಾದ ನರಗುಂದ ರೈತ ಹೋರಾಟ ಗುಂಡೂರಾವ್ ಅವರ ಸರಕಾರವನ್ನು ಉರುಳಿಸಿದರೂ ಮುಂದೆ ನಿರಂತರತೆಯನ್ನು ಕಾಯ್ದುಕೊಳ್ಳಲಿಲ್ಲ.ಆಗ 1985ರ ನಂತರ ಪ್ರೊ. ನಂಜುಂಡಸ್ವಾಮಿ ರೈತ ಹೋರಾಟಕ್ಕೆ ಹೊಸ ದಿಕ್ಕು ತೋರಿಸಿ ವ್ಯಾಪಕವಾಗಿ ಮುನ್ನಡೆಸಿದರು. ತೊಂಬತ್ತರ ನಂತರ ಗ್ಯಾಟ್, ಡಂಕಲ್ ಒಪ್ಪಂದಗಳ ಅಪಾಯದ ವಿರುದ್ಧ ಪ್ರೊಫೆಸರ್ ನಂಜುಂಡಸ್ವಾಮಿ ಮೂಡಿಸಿದ ರೈತ ಜಾಗೃತಿ ಅಸಮಾನ್ಯವಾದುದು. ಅದರ ವಿವರಗಳೂ ಈಗ ಬೇಡ.

ಈಗ ಒಂದು ಅತ್ಯಂತ ಸಂಕೀರ್ಣ ಕಾಲಘಟ್ಟ. ನರಗುಂದ ಹೋರಾಟದ ನಂತರ ಹಾಗೂ ನಂಜುಂಡಸ್ವಾಮಿ ಅವರ ಸಮರೋಚಿತ ಚಳವಳಿಯ ನಂತರ ಸಾಕಷ್ಟು ಬದಲಾವಣೆಯಾಗಿದೆ. ನವ ಉದಾರೀಕರಣದ ಆರ್ಥಿಕ ನೀತಿಯ ಜೊತೆಗೆ ಫ್ಯಾಶಿಸ್ಟ್ ಕೋಮುವಾದ ಮೈತ್ರಿ ಮಾಡಿಕೊಂಡಿದೆ. ಹಿಟ್ಲರ್, ಹಿಮ್ಲರ್, ಗೊಬೆಲ್ಸ್‌ನಂತಹವರ ದಮನಕಾಂಡದಲ್ಲಿ ದೇಶ ನಲುಗಿ ಹೋಗಿದೆ. ಆಗ ನರಗುಂದ ಹೋರಾಟ ನಡೆದರೆ ಪ್ರಜಾವಾಣಿಯ ಅಂದಿನ ಸಂಪಾದಕರಾಗಿದ್ದ ಕೆ.ಎನ್. ಹರಿಕುಮಾರ್ ಅದನ್ನು ಬೆಂಬಲಿಸಿ ಎಂಟು ಪುಟಗಳ ಸಪ್ಲಿಮೆಂಟ್ ಮಾಡಿ ಜನರಿಗೆ ತಲುಪಿಸಿದ್ದರು.ಆದರೆ ಈಗ ಪ್ರಭುತ್ವದ ವಿರುದ್ಧ ನಡೆಯುವ ಪ್ರತಿರೋಧದ ಸುದ್ದಿಗಳು ಬಹುತೇಕ ಟಿವಿ ಮಾಧ್ಯಮಗಳಲ್ಲಿ ಬರುವುದಿಲ್ಲ. ಮುದ್ರಣ ಮಾಧ್ಯಮಗಳ ಕತೆಯೂ ಅಷ್ಟೆ. ವಾರ್ತಾಭಾರತಿ ಹಾಗೂ ಪ್ರಜಾವಾಣಿ ಮತ್ತು ಹಿಂದೂ ಪತ್ರಿಕೆಗಳನ್ನು ಬಿಟ್ಟರೆ ಬೇರೆಲ್ಲೂ ಇಂತಹ ಸುದ್ದಿಗಳು ಬರುವುದಿಲ್ಲ.ಆದರೆ ಸಾಮಾಜಿಕ ಜಾಲತಾಣದ ಮೂಲಕ ಅನೇಕ ಸಂಗತಿಗಳು ಗೊತ್ತಾಗುತ್ತವೆ.

ಈಗಿನ ರೈತರ ಆಕ್ರೋಶ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ. ಈಗಿನ ಪ್ರಭುತ್ವದ ಸರ್ವಾಧಿಕಾರಿಗಳು ಸಾಮಾನ್ಯರಲ್ಲ. ರೈತರನ್ನು ಮಾತಾಡಲು ಕರೆದು ಮೋಸ ಮಾಡಿ ಹೋರಾಟವನ್ನೇ ಮಾಯ ಮಾಡುವ ಮಹಾ ಪ್ರಚಂಡರು. ಭಿನ್ನಮತವೇ ಇರಬಾರದು ಎಂಬುದು ಇವರ ಆಡಳಿತ ನೀತಿ. ಅಂತಲೇ ಹೋರಾಟಗಳ ಪರವಾಗಿ ಧ್ವನಿಯೆತ್ತುವ ಚಿಂತಕರನ್ನು ಹಿಡಿದಿಡಿದು ಜೈಲಿಗೆ ತಳ್ಳುತ್ತಿದ್ದಾರೆ. ಸಂಘಟಿತ ಕಾರ್ಮಿಕ ವರ್ಗ ರೈತ ಹೋರಾಟದ ಜೊತೆ ಸೇರಿದರೆ ಎಂತಹ ದಮನಕಾಂಡವನ್ನೂ ಎದುರಿಸಬಹುದು. ಆದರೆ ಈ ನೌಕರ ವರ್ಗ ಕಾರ್ಲ್ ಮಾರ್ಕ್ಸ್ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಬರೆದಾಗಿನ ಕಾರ್ಮಿಕ ವರ್ಗವಲ್ಲ.ಎಲ್ಲವನ್ನೂ ಕಳೆದುಕೊಂಡ ಬಂಧನದ ಬೇಡಿಯನ್ನು ಮಾತ್ರ ಕಳಚಿಕೊಳ್ಳಬೇಕಾದ ಪ್ರೊೆಟೇರಿಯನ್ ವರ್ಗವಾಗಿ ಅದೀಗ ಉಳಿದಿಲ್ಲ. ಸರಕಾರದಿಂದ ಚೌಕಾಸಿ ಮೂಲಕ ಪಡೆದ ಸವಲತ್ತುಗಳಿಂದಾಗಿ ನವ ಮಧ್ಯಮ ವರ್ಗವಾಗಿ ಬದಲಾಗಿರುವ ಅದು ಚೂರು ಪಾರು ಆಸ್ತಿ ಅಂತಸ್ತುಗಳ ಜೊತೆಗೆ ಜಾತಿ, ಕೋಮುಗಳ ವೈರಸ್‌ಗಳನ್ನು ಅಂಟಿಸಿಕೊಂಡಿದೆ. ರಾಜಕೀಯವಾಗಿ ಬಿಜೆಪಿಯನ್ನು ಬೆಂಬಲಿಸುತ್ತ ಬಂದ ಕಾರ್ಮಿಕ ವರ್ಗಕ್ಕೂ ಈಗ ಹೊಸ ಸಂಕಟ ಬಂದಿದೆ. ಮೋದಿ ಸರಕಾರ ಕಾರ್ಮಿಕ ಕಾಯ್ದೆಗೆ ತಂದ ತಿದ್ದುಪಡಿಗಳು ಮಧ್ಯಮ ವರ್ಗವಾಗಿ ಸಂತೃಪ್ತಿಯಿಂದ ಇರುವ ನೌಕರ ವರ್ಗವನ್ನು ಮತ್ತೆ ಅನಿಶ್ಚಿತತೆಗೆ ದೂಡಿ ಬೀದಿ ಪಾಲು ಮಾಡುವ ಗಂಡಾಂತರ ಎದುರಾಗಿದೆ.ಇಂತಹ ಸನ್ನಿವೇಶದಲ್ಲಿ ರೈತ ಕಾರ್ಮಿಕ ಹೋರಾಟಗಳು ಜೊತೆ ಜೊತೆಯಾಗಿ ನಡೆಯಬೇಕಾಗಿದೆ.

ಬರಲಿರುವ ದಿನಗಳು ಇನ್ನಷ್ಟು ಸಂಕಷ್ಟದ ದಿನಗಳಾಗಿವೆ. ರೈತರು ಬೆವರು ಬಸಿದು ಬದುಕುವ ತಮ್ಮ ಭೂಮಿಯನ್ನು ಕಳೆದುಕೊಂಡರೆ, ಕಾರ್ಮಿಕರು ಅಪಾರ ತ್ಯಾಗ ಬಲಿದಾನದಿಂದ ಪಡೆದ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಕಾರ್ಮಿಕ ಕಾನೂನಿಗೆ ತಂದಿರುವ ತಿದ್ದುಪಡಿ ಶ್ರಮಿಕರ ಮರಣ ಶಾಸನವಾಗಿದೆ.ಇಂತಹ ಸನ್ನಿವೇಶದಲ್ಲಿ ಹೋರಾಟ ಅನಿವಾರ್ಯ ವಾಗುತ್ತದೆ. ಇಂದಿನ ಪೀಳಿಗೆಯ ಕಾರ್ಮಿಕರಿಗೆ ಹೋರಾಟದ ಅನುಭವವಿಲ್ಲ. ಹಿಂದಿನವರ ತ್ಯಾಗ ಬಲಿದಾನದಿಂದ ಲಭ್ಯವಾದ ಸವಲತ್ತುಗಳನ್ನು ಅವರು ಅನುಭವಿಸುತ್ತಿದ್ದಾರೆ. ಆದರೆ ಬರಲಿರುವ ದಿನಗಳು ಹಿಂದಿನಂತಿರುವುದಿಲ್ಲ. ಶ್ರಮಿಕರ ಹೋರಾಟವನ್ನು ದಾರಿ ತಪ್ಪಿಸಲು ಫ್ಯಾಶಿಸ್ಟ್ ಮನುವಾದಿ ಶಕ್ತಿಗಳು ದೇವರು ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಕುತಂತ್ರ ಮಾಡುತ್ತಾರೆ. ಅದಕ್ಕಾಗಿ ಆರ್ಥಿಕ ಹೋರಾಟದ ಜೊತೆ ಜೊತೆಗೆ ವೈಚಾರಿಕ, ಸೈದ್ಧಾಂತಿಕ ಸಮರಕ್ಕೂ ದುಡಿಯುವ ವರ್ಗ ತಯಾರಾಗಬೇಕಾಗಿದೆ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News