ಪ್ರತಿಭಟನಾನಿರತ ರೈತರ ಜತೆ ಇಂದು ಕೇಂದ್ರ ಮಾತುಕತೆ

Update: 2020-12-01 03:37 GMT

ಹೊಸದಿಲ್ಲಿ, ಡಿ.1: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಜತೆ ಮಂಗಳವಾರ ಮಾತುಕತೆ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ರೈತ ಪ್ರತಿಭಟನೆಯ ಕಗ್ಗಂಟು ಬಿಡಿಸುವ ಸಂಬಂಧ ಬಿಜೆಪಿ ನಾಯಕರು ಚರ್ಚಿಸಿದ ಬಳಿಕ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.

ಈ ಮಧ್ಯೆ ಗೃಹ ಸಚಿವ ಅಮಿತ್ ಶಾ ಅವರು ಬಿಕೆಯು (ಏಕತಾ ಉಗ್ರಹಾನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಹಾನ್ ಮತ್ತು ಬಿಕೆಯು (ಏಕತಾ ದಕುಂದಾ) ಅಧ್ಯಕ್ಷ ಬೂಟಾ ಸಿಂಗ್ ಬುರ್ಜ್‌ಗಿಲ್ ಜತೆ ದೂರವಾಣಿ ಮೂಲಕ ಮಾತನಾಡಿ, ಷರತ್ತು ಹಿತವಾಗಿ ಮಾತುಕತೆ ನಡೆಸಲು ಮನವೊಲಿಸಿದ್ದಾರೆ. ಅಧಿಕೃತ ಲಿಖಿತ ಆಹ್ವಾನವನ್ನು ಎದುರು ನೋಡುತ್ತಿದ್ದೇವೆ ಎಂದು ಬುರ್ಜ್‌ಗಿಲ್ ಸ್ಪಷ್ಟಪಡಿಸಿದ್ದಾರೆ.

"ಅಮಿತ್ ಶಾ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಷರತ್ತುಗಳನ್ನು ವಿಧಿಸದೇ ಮಾತುಕತೆಗೆ ಆಗಮಿಸುವಂತೆ ಆಹ್ವಾನಿಸಿದ್ದಾರೆ. ಎಲ್ಲ ರೈತ ಸಂಘಟನೆಗಳಿಗೆ ಈ ಸಂದೇಶ ರವಾನಿಸುವಂತೆ ಕೋರಿದ್ದಾರೆ. ಈ ಹಿಂದೆ ಸಭೆಗಿಂತ ಮೊದಲು ಷರತ್ತು ವಿಧಿಸುವುದನ್ನು ನಾವು ತಿರಸ್ಕರಿಸಿದ್ದೇವೆ. ಇದೀಗ ಲಿಖಿತ ಆಹ್ವಾನ ಬಂದ ಬಳಿಕ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದೇವೆ" ಎಂದು ಬುರ್ಜ್‌ಗಿಲ್ ವಿವರಿಸಿದ್ದಾರೆ.

ಬಿಜೆಪಿಗೆ ಸೇರ್ಪಡೆಯಾಗಿರುವ ಪಂಜಾಬ್‌ನ ಮಾಜಿ ಸಚಿವ ಸುರ್ಜಿತ್ ಕುಮಾರ್ ಗ್ಯಾನಿಯವರು ಅಮಿತ್ ಶಾ ಮತ್ತು ರೈತ ಮುಖಂಡರ ದೂರವಾಣಿ ಮಾತುಕತೆಗೆ ವೇದಿಕೆ ಕಲ್ಪಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News