ಅಂಫಾನ್ 'ಪ್ರ'ಚಂಡಮಾರುತದಿಂದ ಆದ ಹಾನಿ ಎಷ್ಟು ಗೊತ್ತೇ?

Update: 2020-12-03 04:40 GMT
ಫೈಲ್ ಫೋಟೊ

ಹೊಸದಿಲ್ಲಿ, ಡಿ.3: ಕಳೆದ ಮೇ ತಿಂಗಳಲ್ಲಿ ಭಾರತ- ಬಾಂಗ್ಲಾದೇಶ ಗಡಿಯ ಸುಂದರಬನ್ಸ್ ಪ್ರದೇಶದಲ್ಲಿ ವ್ಯಾಪಕ ಹಾನಿ ಮಾಡಿದ್ದ ಅಂಫಾನ್ ಸೂಪರ್ ಸೈಕ್ಲೋನ್ ಇದುವರೆಗೆ ಉತ್ತರ ಹಿಂದೂ ಮಹಾಸಾಗರದಲ್ಲಿ ಬೀಸಿದ ಚಂಡಮಾರುತಗಳ ಪೈಕಿ ಗರಿಷ್ಠ ಹಾನಿ ಉಂಟು ಮಾಡಿದ ಚಂಡಮಾರುತ ಎನಿಸಿಕೊಂಡಿದೆ. ಈ ಚಂಡಮಾರುತದಿಂದ ಆಗಿರುವ ಆರ್ಥಿಕ ನಷ್ಟ ಸುಮಾರು 14 ಶತಕೋಟಿ ಡಾಲರ್‌ಗಳು ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಓ)ಯ ವರದಿ ಹೇಳಿದೆ.

ಸ್ಟೇಟ್ ಆಫ್ ಗ್ಲೋಬಲ್ ಕ್ಲೈಮೇಟ್ ಹೆಸರಿನ ವರದಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಈ ವರದಿಯಲ್ಲಿ ಅಂಫಾನ್ ಉಂಟುಮಾಡಿರವು ಹಾನಿಯನ್ನು ಅಂದಾಜಿಸಲಾಗಿದೆ.

ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಚಂಡಮಾರುತಕ್ಕಿಂತ ಮುನ್ನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರೂ, 126 ಮಂದಿಯನ್ನು ಇದು ಬಲಿ ಪಡೆದಿತ್ತು. ಸುಮಾರು 156 ಕಿಲೋಮೀಟರ್ ವೇಗದ ಗಾಳಿ ಅಪ್ಪಳಿಸಿ ಆಸ್ತಿ ಪಾಸ್ತಿಗೆ ವ್ಯಾಪಕ ಹಾನಿ ಉಂಟುಮಾಡಿತ್ತು.

ಮುಖ್ಯವಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸೇರಿ ಭಾರತದಲ್ಲಿ 24 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಬಾಂಗ್ಲಾದಲ್ಲಿ 25 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಬಹಳಷ್ಟು ಮಂದಿ ತಕ್ಷಣ ವಾಪಸ್ಸಾದರೂ, 28 ಲಕ್ಷ ಮನೆಗಳು ಹಾನಿಗೀಡಾಗಿದ್ದರಿಂದ ಸಾವಿರಾರು ಮಂದಿ ನಿರಾಶ್ರಿತರಾದರು ಎಂದು ಡಬ್ಲ್ಯುಎಂಓ ಹೇಳಿಕೆ ನೀಡಿದೆ.

ಜಾಗತಿಕ ಮಟ್ಟದಲ್ಲಿ 2020 ಅತ್ಯಂತ ಉಷ್ಣ ವರ್ಷವಾಗಲಿದೆ ಎಂದೂ 1850ರಿಂದ ತಾಪಮಾನದ ದಾಖಲೆಗಳನ್ನು ಸಂಗ್ರಹಿಸಿರುವ ಡಬ್ಲ್ಯುಎಂಓ ಎಚ್ಚರಿಸಿದೆ.

2020ರ ಜನವರಿ-ಅಕ್ಟೋಬರ್ ಅವಧಿಯಲ್ಲಿ ಸರಾಸರಿ ತಾಪಮಾನ ಕೈಗಾರಿಕಾ ಕ್ರಾಂತಿಗೆ ಮುನ್ನ ಇದ್ದ ಉಷ್ಣತೆಗೆ ಹೋಲಿಸಿದರೆ 1.2 ಡಿಗ್ರಿಯಷ್ಟು ಹೆಚ್ಚಿದೆ. ಇದು ಅಪಾಯಕಾರಿ ಮಟ್ಟ ಎನಿಸಿದ 1.5 ಡಿಗ್ರಿಯನ್ನು ತಲುಪುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News