ಎಂಡಿಎಚ್ ಮಾಲಕ ಧರ್ಮಪಾಲ್ ಗುಲಾಟಿ ನಿಧನ

Update: 2020-12-03 05:15 GMT

ಹೊಸದಿಲ್ಲಿ: ಪ್ರಮುಖ ಮಸಾಲೆ ಬ್ರಾಂಡ್ ಎಂಡಿಎಚ್ (ಮಹಾಶಿಯಾನ್ ಡಿ ಹಟ್ಟಿ)ಮಾಲಕ ಮಹಾಶಯ್ ಧರ್ಮಪಾಲ್ ಗುಲಾಟಿ ಗುರುವಾರ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಮಸಾಲೆಗಳ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ ಧರ್ಮಪಾಲ್ ದಿಲ್ಲಿಯ ಮಾತಾ ಚಾನನ್ ದೇವಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲವು ವಾರಗಳಿಂದ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಗುರುವಾರ ನಿಧನರಾದರು ಎಂದು ವರದಿಯಾಗಿದೆ.

ದಾದಾಜಿ ಎಂದು ಕರೆಯಲ್ಪಡುತ್ತಿದ್ದ ಧರ್ಮಪಾಲ್ ಅವರು 1923ರಲ್ಲಿ ಪಾಕಿಸ್ತಾನದ ಸಿಯಾಲ್ ಕೋಟ್ ನಲ್ಲಿ ಜನಿಸಿದ್ದರು. ಸಿಯಾಲ್ ಕೋಟ್ ನಲ್ಲಿ ತಂದೆಯ ಮಸಾಲೆ ಉದ್ಯಮವನ್ನು ಸೇರಿಕೊಂಡ ಅವರು ವಿಭಜನೆಯ ಬಳಿಕ ಭಾರತಕ್ಕೆ ಬಂದು ದಿಲ್ಲಿಯ ಕರೋಲ್ ಬಾಗ್ ನಲ್ಲಿ ಅಂಗಡಿ ತೆರೆದಿದ್ದರು.

ದಿಲ್ಲಿಯಲ್ಲಿ ಆರಂಭವಾದ ಎಂಡಿಎಚ್ ಭಾರತದ ಪ್ರಮುಖ ಮಸಾಲ ಉತ್ಪಾದಕ ಕಂಪೆನಿಯಾಗಿ ಬೆಳೆದಿದೆ. ಗುಲಾಟಿ ಅವರಿಗೆ 2019ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದರು.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಎಂಡಿಎಚ್ ಮಾಲಕ ಗುಲಾಟಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News