ಆತ್ಮಹತ್ಯೆಗೆ ಕುಮ್ಮಕ್ಕು ಪ್ರಕರಣ: ಅರ್ನಬ್ ವಿರುದ್ಧ ಆರೋಪಪಟ್ಟಿ

Update: 2020-12-05 03:40 GMT

ಮುಂಬೈ, ಡಿ.5: ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಮುಂಬೈ ಪೊಲೀಸರು ಶುಕ್ರವಾರ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

2018ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಗಢ ಜಿಲ್ಲೆಯ ಅಲಿಬಾಗ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಆಂತರಿಕ ವಿನ್ಯಾಸಗಾರ ಅನ್ವಯ್ ನಾಯ್ಕ್ ಮತ್ತು ಅವರ ತಾಯಿ ಕುಮುದ್ ಅವರ ಆತ್ಮಹತ್ಯೆಗೆ ಅರ್ನಬ್ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿ ಈ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಗೋಸ್ವಾಮಿ ಜತೆಗೆ ಫಿರೋಝ್ ಶೇಖ್ ಮತ್ತು ನಿತೀಶ್ ಸಾರ್ಡಾ ವಿರುದ್ಧವೂ ಆರೋಪಪಟ್ಟಿ ಸಲ್ಲಿಕೆಯಾಗಿದೆ ಎಂದು ಸರಕಾರಿ ಅಭಿಯೋಜಕ ಪ್ರದೀಪ್ ಘರಾಟ್ ಹೇಳಿದ್ದಾರೆ. 65 ಮಂದಿ ಸಾಕ್ಷಿಗಳನ್ನು ಹೆಸರಿಸಲಾಗಿದೆ.

ಆರೋಪಟ್ಟಿ ಸಲ್ಲಿಕೆಗೆ ತಡೆ ನೀಡಬೇಕು ಎಂದು ಕೋರಿ ಅರ್ನಬ್ ಮುಂಬೈ ಹೈಕೋರ್ಟ್‌ನಲ್ಲಿ ಗುರುವಾರ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬಾಕಿ ಇದೆ. ಮೂವರು ಆರೋಪಿಗಳನ್ನು ಅಲಿಬಾಗ್ ಪೊಲೀಸರು ನವೆಂಬರ್ 4ರಂದು ಬಂಧಿಸಿದ್ದರು. ಆದರೆ ನವೆಂಬರ್ 11ರಂದು ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದರು. ಅರ್ನಬ್ ಹಾಗೂ ಇತರ ಇಬ್ಬರು ಆರೋಪಿಗಳ ಸಂಸ್ಥೆಯವರು ಅನ್ವಯ್ ನಾಯ್ಕ್ ಅವರಿಗೆ ನೀಡಬೇಕಿದ್ದ ಬಾಕಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿ ಅನ್ವಯ್ ನಾಯ್ಕ್ ಮತ್ತು ತಾಯಿ ಕುಮುದ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆಪಾದಿಸಲಾಗಿತ್ತು.

ಪುರಾವೆ ಬಯಸಿ 2019ರಲ್ಲಿ ಪ್ರಕರಣವನ್ನು ಮುಚ್ಚಲಾಗಿತ್ತು. ಈ ಪ್ರಕರಣವನ್ನು ಕಳೆದ ಮೇ ತಿಂಗಳಲ್ಲಿ ಮತ್ತೆ ತೆರೆಯಲಾಗಿತ್ತು. ಟಿವಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ವಿರುದ್ಧ ಮಹಾರಾಷ್ಟ್ರ ಸರಕಾರ ದ್ವೇಷ ಸಾಧನೆ ಮಾಡುತ್ತಿದೆ ಎಂದು ಅರ್ನಬ್ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News