ಮೋದಿ ಸರಕಾರದ ಪ್ರಚಾರಕ್ಕಾಗಿ ಬೃಹತ್ ತಪ್ಪುಮಾಹಿತಿ ಅಭಿಯಾನ

Update: 2020-12-10 15:38 GMT

ಬ್ರಸೆಲ್ಸ್ (ಬೆಲ್ಜಿಯಮ್), ಡಿ. 10: ಭಾರತ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯ ಪರವಾಗಿ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡುವುದಕ್ಕಾಗಿ ಭಾರತೀಯ ಗುಂಪುಗಳು ಯುರೋಪ್‌ನಲ್ಲಿ ಕೈಗೆತ್ತಿಕೊಂಡಿರುವ ಬೃಹತ್ ಸುಳ್ಳು ಮಾಹಿತಿ ಪ್ರಚಾರ ಅಭಿಯಾನವೊಂದನ್ನು ಬ್ರಸೆಲ್ಸ್‌ನಲ್ಲಿರುವ ಸರಕಾರೇತರ ಸಂಘಟನೆ (ಎನ್‌ಜಿಒ) ‘ಇಯು ಡಿಸ್‌ಇನ್ಫೊಲ್ಯಾಬ್’ ಬಯಲಿಗೆಳೆದಿದೆ.

ಈ ಸುಳ್ಳು ಪ್ರಚಾರ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಭಾರತದ ಅತಿ ದೊಡ್ಡ ವೀಡಿಯೊ ಸುದ್ದಿ ಸಂಸ್ಥೆ ಏಶ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ (ಎಎನ್‌ಐ) ಮತ್ತು ಅನುಮಾನಾಸ್ಪದ ವ್ಯಾಪಾರ ಸಂಘಟನೆ ಶ್ರೀವಾಸ್ತವ ಗ್ರೂಪ್ ಸೇರಿವೆ. 2019ರ ಕೊನೆಯಲ್ಲಿ ಯುರೋಪಿಯನ್ ಸಂಸತ್ತಿನ ಕಡುಬಲಪಂಥೀಯ ಸದಸ್ಯರಿಗೆ ಕಾಶ್ಮೀರ ಭೇಟಿಯನ್ನು ಏರ್ಪಡಿಸಿದ ಬಳಿಕ ಶ್ರೀವಾಸ್ತವ ಗ್ರೂಪ್ ಭಾರತದಲ್ಲಿ ಪ್ರಚಾರಕ್ಕೆ ಬಂದಿದೆ.

ಇಯು ಡಿಸ್‌ಇನ್ಫೊಲ್ಯಾಬ್ ಒಂದು ವರ್ಷ ತನಿಖೆ ನಡೆಸಿದ ಬಳಿಕ, ‘ಇಂಡಿಯನ್ ಕ್ರೋನಿಕಲ್ಸ್’ ಎಂಬ ವರದಿಯಲ್ಲಿ ಈ ಸುಳ್ಳು ಪ್ರಚಾರ ಅಭಿಯಾನವನ್ನು ಬಹಿರಂಗಪಡಿಸಿದೆ. ಫ್ರಾನ್ಸ್‌ನ ‘ಲೆಸ್ ಜೋರ್ಸ್’ ಮುಂತಾದ ಸುದ್ದಿ ಸಂಸ್ಥೆಗಳು ವಿಶೇಷವಾಗಿ ಪ್ರಕಟಿಸಿರುವ ಸುದ್ದಿಗಳ ಆಧಾರದಲ್ಲಿ ಅದು ತನ್ನ ವರದಿಯನ್ನು ಸಿದ್ಧಪಡಿಸಿದೆ.

ಈ ಭಾರತೀಯ ಸುಳ್ಳು ಪ್ರಚಾರ ಅಭಿಯಾನದ ವ್ಯಾಪ್ತಿ ಮತ್ತು ಪರಿಣಾಮವು 2016ರ ಅಮೆರಿಕ ಚುನಾವಣೆಯಲ್ಲಿ ರಶ್ಯ ನಡೆಸಿದ ಹಸ್ತಕ್ಷೇಪ ಕಾರ್ಯಾಚರಣೆಗೆ ಸಮವಾಗಿದೆ ಎಂದು ಸುಳ್ಳು ಪ್ರಚಾರ ನಿಗ್ರಹ ಪರಿಣತರೊಬ್ಬರನ್ನು ಉಲ್ಲೇಖಿಸಿ ‘ಲೆಸ್ ಜೋರ್ಸ್’ ವರದಿ ಮಾಡಿದೆ.

 ಶ್ರೀವಾಸ್ತವ ಗ್ರೂಪ್ ನಡೆಸುತ್ತಿರುವ ನಕಲಿ ಮಾಧ್ಯಮ ವೆಬ್‌ಸೈಟ್‌ಗಳು ಮತ್ತು ಸರಕಾರೇತರ ಸಂಘಟನೆಗಳು, ಭಾರತ-ಪರ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಪಾಕಿಸ್ತಾನ ಅಥವಾ ಚೀನಾ ವಿರೋಧಿ ನಿಲುವುಗಳನ್ನೊಳಗೊಂಡ ಲೇಖನಗಳನ್ನು ಬರೆಯುವಂತೆ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ ಮೇಲೆ ಹೇಗೆ ಪ್ರಭಾವ ಬೀರುತ್ತಿದ್ದವು ಎನ್ನುವುದನ್ನು ಡಿಸ್‌ಇನ್ಫೊಲ್ಯಾಬ್ ವರದಿ ವಿವರಿಸಿದೆ. ಈ ಲೇಖನಗಳನ್ನು ಬಳಿಕ, ಶ್ರೀವಾಸ್ತವ ಗ್ರೂಪ್‌ನ ನಕಲಿ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತಿತ್ತು. ಆಗ, ಎಎನ್‌ಐ ಸುದ್ದಿ ಸಂಸ್ಥೆಯು ಈ ಲೇಖನಗಳನ್ನು ಯುರೋಪಿಯನ್ ಮಾಧ್ಯಮಗಳ ವಿಶ್ವಾಸಾರ್ಹ ವರದಿಗಳೆಂಬಂತೆ ಉಲ್ಲೇಖಿಸಿ ವರದಿ ಮಾಡುತ್ತಿತ್ತು. ಅಂತಿಮವಾಗಿ ಭಾರತೀಯ ಮಾಧ್ಯಮಗಳು ಮತ್ತು ಸುದ್ದಿ ಚಾನೆಲ್‌ಗಳು ಎಎನ್‌ಐಯ ವರದಿಗಳನ್ನು ಯಥಾವತ್ ಪ್ರಕಟನೆ ಮತ್ತು ಪ್ರಸಾರ ಮಾಡುತ್ತಿದ್ದವು. ಈ ಪ್ರಕ್ರಿಯೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿತ್ತು.

ಅದೇ ವೇಳೆ, ಈ ಇಡೀ ಅಭಿಯಾನದಲ್ಲಿ ಭಾರತೀಯ ಗುಪ್ತಚರ ಸಂಸ್ಥೆಗಳು ಭಾಗಿಯಾಗಿರುವ ಸಾಧ್ಯತೆಯಿದೆ ಎಂಬ ಸಂಶಯವನ್ನೂ ‘ಲೆಸ್ ಜೋರ್ಸ್’ ವ್ಯಕ್ತಪಡಿಸಿದೆ.

ಮೋದಿ ಸರಕಾರ ತೆಗೆದುಕೊಂಡ ಕ್ರಮಗಳಿಗೆ ಯುರೋಪಿಯನ್ ನಾಯಕರ ಬೆಂಬಲವನ್ನು ಸೃಷ್ಟಿಸುವುದಕ್ಕಾಗಿ ಈ ಜಾಲವನ್ನು ಪದೇ ಪದೇ ಬಳಸಲಾಗುತ್ತಿತ್ತು ಎಂದು ಡಿಸ್‌ಇನ್ಫೊಲ್ಯಾಬ್’ ಹೇಳಿದೆ.

ಇದಕ್ಕೊಂದು ಉದಾಹರಣೆ 2019ರ ಲೋಕಸಭಾ ಚುನಾವಣೆಯ ಮೊದಲು ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ದಾಳಿ. ಶ್ರೀವಾಸ್ತವ ಗ್ರೂಪ್ ನಡೆಸುತ್ತಿರುವ ನಕಲಿ ವೆಬ್‌ಸೈಟ್ ‘ಇಪಿ ಟುಡೆ’, ಯುರೋಪಿಯನ್ ಸಂಸತ್ತಿನ ಸದಸ್ಯ ರೈಝಾರ್ಡ್ ಝಾರ್ನೆಕಿ ಈ ವಿಷಯದಲ್ಲಿ ಬರೆದ ಲೇಖನವೊಂದನ್ನು ಪ್ರಕಟಿಸಿತು. ಝಾರ್ನೆಕಿ ತನ್ನ ಲೇಖನದಲ್ಲಿ ದಾಳಿಯನ್ನು ಬೆಂಬಲಿಸಿದರು. ಬಳಿಕ ಎಎನ್‌ಐ ಈ ಲೇಖನವನ್ನು ಮರುಪ್ರಕಟಿಸಿತು. ಆದರೆ ಅದಕ್ಕೆ ಪ್ರಮುಖ ತಿರುವೊಂದನ್ನು ನೀಡಿತು. ಇದು ಮೋದಿಗೆ ಬೆಂಬಲ ವ್ಯಕ್ತಪಡಿಸಿ ಐರೋಪ್ಯ ಒಕ್ಕೂಟ ನೀಡಿದ ಅಧಿಕೃತ ಹೇಳಿಕೆಯಾಗಿದೆ ಎಂದು ಅದು ವರದಿ ಮಾಡಿತು. ಸಹಜವಾಗಿಯೇ ಈ ಸುದ್ದಿಯನ್ನು ಲಕ್ಷಾಂತರ ಭಾರತೀಯರಿಗೆ ತಲುಪುವ ‘ಎಕನಾಮಿಕ್ ಟೈಮ್ಸ್’ ಮುಂತಾದ ಭಾರತೀಯ ಮಾಧ್ಯಮಗಳು ಯಥಾವತ್ತಾಗಿ ಪ್ರಕಟಿಸಿದವು ಎಂದು ಡಿಸ್‌ಇನ್ಫೊಲ್ಯಾಬ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News