ಲಾಕ್‌ಡೌನ್ ಆನಂತರವೂ ದೇಶವನ್ನು ಕಾಡುತ್ತಿದೆ ಹಸಿವಿನ ಬಾಧೆ

Update: 2020-12-10 16:08 GMT

ಹೊಸದಿಲ್ಲಿ,ಡಿ.10: ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್ ಕೊನೆಗೊಂಡ ಐದು ತಿಂಗಳುಗಳ ಆನಂತರವೂ ಅವಕಾಶ ವಂಚಿತ ಹಾಗೂ ದುರ್ಬಲ ಸಮುದಾಯಗಳಲ್ಲಿ ಹಸಿವಿನ ಪರಿಸ್ಥಿತಿ ಇನ್ನೂ ಗಂಭೀರ ವಾಗಿಯೇ ಇದೆ ಎಂದು 11 ರಾಜ್ಯಗಳಲ್ಲಿ ನಡೆಸಲಾದ ‘ಹಂಗರ್‌ವಾಚ್’ ಸಮೀಕ್ಷೆಯು ಬಹಿರಂಗಪಡಿಸಿದೆ.

 ಕೋವಿಡ್-19 ಸಾಂಕ್ರಾಮಿಕದ ಹಾವಳಿಯ ನಡುವೆ ದೇಶದ ವಿವಿಧ ಭಾಗಗಳಲ್ಲಿ ತಲೆದೋರಿರುವ ಹಸಿವಿನ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಲು ಈ ವರ್ಷದ ಸೆಪ್ಟಂಬರ್‌ನಲ್ಲಿ ಆಹಾರದ ಹಕ್ಕು ಅಭಿಯಾನವು ಇತರ ಕೆಲವು ಜಾಲಸಂಸ್ಥೆಗಳ ಸಹಕಾರದೊಂದಿಗೆ ಹಂಗರ್ ವಾಚ್ (ಹಸಿವಿನ ಕಣ್ಗಾವಲು) ಅಭಿಯಾನವನ್ನು ನಡೆಸಿತ್ತು.

 ಉತ್ತರಪ್ರದೇಶ,ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸ್‌ಗಢ, ಜಾರ್ಖಂಡ್, ದಿಲ್ಲಿ, ತೆಲಂಗಾಣ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ 3,994 ನಾಗರಿಕರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

    ಲಾಕ್‌ಡೌನ್ ಪೂರ್ವದ ಅವಧಿಗೆ ಹೋಲಿಸಿದರೆ ಸೆಪ್ಟೆಂಬರ್- ಆಕ್ಟೋಬರ್ ತಿಂಗಳು ಗಳಲ್ಲಿ ತಮ್ಮ ಗುಣಮಟ್ಟದ ಆಹಾರ ಸೇವನೆಯ ಪ್ರಮಾಣವು ಕಡಿಮೆಯಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.

 ದವಸಧಾನ್ಯಗಳು, ದ್ವಿದಳ ಧಾನ್ಯಗಳು ಹಾಗೂ ತರಕಾರಿಗಳ ಸೇವನೆಯ ಪ್ರಮಾಣದಲ್ಲಿಯೂ ಲಾಕ್‌ಡೌನ್ ಹಾಗೂ ಆನಂತರದ ಅವಧಿಯಲ್ಲಿ ಕುಸಿತ ಉಂಟಾಗಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ನಿರ್ದಿಷ್ಟ ದುರ್ಬಲ ಬುಡಕಟ್ಟು ಪಂಗಡ (ಪಿವಿಟಿಜಿ) ಗಳಿಗೆ ಸೇರಿದ ಶೇ.77 ಕುಟುಂಬಗಳು, ಶೇ.76 ದಲಿತರು ಹಾಗೂ ಶೇ.54ರಷ್ಟು ಆದಿವಾಸಿಗಳು ತಮ್ಮ ಅಕ್ಕಿ ಅಥವಾ ಗೋಧಿಯ ಸೇವನೆಯ ಪ್ರಮಾಣದಲ್ಲಿ ಕುಸಿತವಾಗಿರುವುದಾಗಿ ತಿಳಿಸಿದ್ದಾರೆ. ಪ್ರತಿ ನಾಲ್ವರ ಪೈಕಿ ಒಬ್ಬರಲ್ಲಿ ಈ ಆಹಾರಧಾನ್ಯಗಳ ಸೇವನೆಯಲ್ಲಿ ಅಪಾರ ಕುಸಿತವುಂಟಾಗಿದೆ ಎಂದು ವರದಿಗಳು ತಿಳಿಸಿವೆ.

    ತಮ್ಮ ತೊಗರಿಬೇಳೆ ಸೇವನೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದಾಗಿ ಶೇ.64 ಮಂದಿ ತಿಳಿಸಿದ್ದಾರೆ ಹಾಗೂ ಕಳೆದ ಎರಡು ತಿಂಗಳುಗಳಲ್ಲಿ ತಮ್ಮ ಹಸಿರು ತರಕಾರಿಗಳ ಸೇವನೆಯ ಪ್ರಮಾಣ ಕಡಿಮೆಯಾಗಿದೆಯೆಂದು ಶೇ.73 ಮಂದಿ ಮಾಹಿತಿ ನೀಡಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.56 ಮಂದಿ, ತಾವು ಲಾಕ್‌ಡೌನ್‌ಗೆ ಮುಂಚೆ ಯಾವತ್ತೂ ಒಂದು ಹೊತ್ತಿನ ಊಟವನ್ನು ಕೂಡಾ ತಪ್ಪಿಸಿಕೊಂಡಿರಲಿಲ್ಲ. ಆದರೆ ಲಾಕ್‌ಡೌನ್ ಹೇರಿಕೆಯ ಆನಂತರ ಸೆಪ್ಟಂಬರ್ ಹಾಗೂ ಅಕ್ಟೋಬರ್‌ನಲ್ಲಿ ಅನೇಕ ಸಲ ಊಟವಿಲ್ಲದೆ ಮಲಗಿದ್ದಾಗಿ ಶೇ.27 ಮಂದಿ ತಿಳಿಸಿದ್ದಾರೆ. ಪ್ರತಿ 20 ಕುಟುಂಬಗಳ ಪೈಕಿ, ಒಂದು ಕುಟುಂಬವು ಊಟ ಸೇವಿಸದೆ ರಾತ್ರಿ ಮಲಗಿದ್ದಾರೆಂದು ಸಮೀಕ್ಷಾ ವರದಿ ತಿಳಿಸಿದೆ.

ಕಡಿಮೆ ಆದಾಯದ ಕುಟುಂಬಗಳು ಪೌಷ್ಟಿಕ ಆಹಾರದ ಕೊರತೆಯಿಂದ ಅತ್ಯಧಿಕ ಬಾಧಿತ

 ಸೆಪ್ಟಂಬರ್ ಹಾಗೂ ಆಕ್ಟೋಬರ್ ತಿಂಗಳ ಅವಧಿಯಲ್ಲಿ, ಗುಣಮಟ್ಟದ ಪೌಷ್ಟಿಕ ಆಹಾರ ಸೇವನೆಯಲ್ಲೂ ಒಟ್ಟಾರೆ ಕುಸಿತ ಕಂಡುಬಂದಿದೆ. ಈ ಅವಧಿಯಲ್ಲಿ ತಮ್ಮ ಪೌಷ್ಟಿಕ ಆಹಾರ ಸೇವನೆಯ ಪ್ರಮಾಣ, ಕಳಪೆಯಾಗಿದೆ ಎಂದು 71ಶೇ ಹೇಳಿದರೆ, ಶೇ.40ರಷ್ಟು ಮಂದಿ ಅತ್ಯಂತ ಕಳಪೆಯಾಗಿದೆ ಎಂದು ಉತ್ತರಿಸಿದ್ದಾರೆ.

ಕಡಿಮೆ ಆದಾಯದ ಗುಂಪುಗಳ ಜನರು ಪೌಷ್ಟಿಕ ಆಹಾರದ ಕೊರತೆಯಿಂದ ಅತ್ಯಂತ ಹೆಚ್ಚು ಬಾಧಿತರಾಗಿದ್ದಾರೆ. ಮಾಸಿಕವಾಗಿ 15 ಸಾವಿರ ರೂ.ಗೂ ಅಧಿಕ ಆದಾಯ ಸಂಪಾದಿಸುತ್ತಿರುವವರ ಪೈಕಿ ಶೇ.62 ಮಂದಿ, ಲಾಕ್‌ಡೌನ್‌ನ ಮುಂಚಿನ ದಿನಗಳಿಗೆ ಹೋಲಿಸಿದರೆ, ಸೆಪ್ಟಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಪೌಷ್ಚಿಕತೆಯ ಗುಣಮಟ್ಟವು ಅತ್ಯಂತ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

  ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.79 ಮಂದಿಗೆ ಲಾಕ್‌ಡೌನ್‌ಗೆ ಮುನ್ನ ಮಾಸಿಕವಾಗಿ 7 ಸಾವಿರ ರೂ. ಆದಾಯವಿತ್ತು. ಅವರ ಪೈಕಿ ಶೇ.41 ಮಂದಿ ಮಾಸಿಕವಾಗಿ 3 ಸಾವಿರ ರೂ.ಗೂ ಅಧಿಕ ಆದಾಯವನ್ನು ಸಂಪಾದಿಸುತ್ತಿದ್ದರು.

   ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.59ರಷ್ಟು ದಲಿತರು ಹಾಗೂ ಆದಿವಾಸಿಗಳಾಗಿದ್ದು, ಶೇ.23 ಮಂದಿ ಓಬಿಸಿಗೆ ಸೇರಿದವರಾಗಿದ್ದಾರೆ. ಒಟ್ಟಾರೆಯಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.50 ಅಧಿಕ ಮಂದಿ ಮಹಿಳೆಯರೆಂದು ‘ಹಂಗರ್‌ವಾಚ್’ ಸಮೀಕ್ಷೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News