ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ: ನಟಿ ಸಂಜನಾಗೆ ಹೈಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು

Update: 2020-12-11 12:51 GMT

ಬೆಂಗಳೂರು, ಡಿ.11: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ನಟಿ ಸಂಜನಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

3 ಲಕ್ಷ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಒದಗಿಸಬೇಕು, ಪ್ರತಿ ತಿಂಗಳು ಎರಡು ಬಾರಿ ಠಾಣೆಗೆ ಹಾಜರಾಗಬೇಕು, ತನಿಖೆಗೆ ಸಹಕರಿಸಬೇಕು, ಸಾಕ್ಷ್ಯಗಳನ್ನು ನಾಶಪಡಿಸಬಾರದೆಂಬ ಷರತ್ತುಗಳನ್ನು ವಿಧಿಸಿ ನ್ಯಾಯಪೀಠವು ಜಾಮೀನು ಮಂಜೂರು ಮಾಡಿದೆ. 

ಅರ್ಜಿದಾರರ ಪರ ವಾದಿಸಿದ್ದ ವಕೀಲರು, ಸಂಜನಾ ಗಲ್ರಾನಿ ಅವರು 2018ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಜೊತೆಗೆ ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಈ ಕೂಡಲೇ ಅವರು ಗೈನಕಾಲಜಿ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.ಇದರಿಂದಾಗಿ ಸೆ.8ರಿಂದ ಬಂಧನದಲ್ಲಿರುವ ರಾಗಿಣಿ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಆಗಲಿದ್ದಾರೆ. 

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪಾರ್ಟಿಗಳನ್ನು ಆಯೋಜಿಸಿ ಅಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಆರೋಪದಡಿ ನಟಿ ಸಂಜನಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅದರಂತೆ ಎನ್‍ಡಿಪಿಎಸ್ ಕಾಯ್ದೆ ಸೆಕ್ಷನ್ 21, 21ಸಿ, 27ಎ, 27ಬಿ, 29 ಹಾಗೂ ಐಪಿಸಿ ಸೆಕ್ಷನ್ 120ಬಿ ಅಡಿ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇದ್ದು, ಈಗ ಜೈಲಿನಲ್ಲಿಯೇ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News