ಇಸ್ರೇಲ್, ಮೊರೊಕ್ಕೊ ನಡುವೆ ಶಾಂತಿ ಒಪ್ಪಂದ

Update: 2020-12-11 17:16 GMT

ರಬಕ (ಮೊರೊಕ್ಕೊ), ಡಿ. 11: ಇಸ್ರೇಲ್ ಮತ್ತು ಮೊರೊಕ್ಕೊ ಗುರುವಾರ ತಮ್ಮ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸಲು ನಿರ್ಧರಿಸಿವೆ. ಇದರೊಂದಿಗೆ ಆಗಸ್ಟ್ ಬಳಿಕ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕನೇ ಅರಬ್ ದೇಶ ಮೊರೊಕ್ಕೊ ಆಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಬಹರೈನ್ ಮತ್ತು ಸುಡಾನ್ ಇತರ ಮೂರು ದೇಶಗಳು.

ಅಮೆರಿಕದ ಮಧ್ಯಸ್ಥಿಕೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಒಪ್ಪಂದದ ಭಾಗವಾಗಿ, ಪಶ್ಚಿಮ ಸಹಾರದ ಮೇಲಿನ ಮೊರೊಕ್ಕೊದ ಸಾರ್ವಭೌಮತ್ವವನ್ನು ಅಂಗೀಕರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿದ್ದಾರೆ. ಪಶ್ಚಿಮ ಸಹಾರದ ನಿಯಂತ್ರಣಕ್ಕಾಗಿ ಮೊರೊಕ್ಕೊ ಮತ್ತು ಅಲ್ಜೀರಿಯ ಬೆಂಬಲಿತ ಪೊಲಿಸರಿಯೊ ಫ್ರಂಟ್‌ಗಳು ದಶಕಗಳಿಂದ ಸಂಘರ್ಷದಲ್ಲಿ ತೊಡಗಿವೆ. ಪೊಲಿಸರಿಯೊ ಫ್ರಂಟ್ ಮೊರೊಕ್ಕೊದ ಸಿಡಿದುಹೋದ ಬಣವಾಗಿದ್ದು, ಪಶ್ಚಿಮ ಸಹಾರದಲ್ಲಿ ಸ್ವತಂತ್ರ ದೇಶವೊಂದನ್ನು ಸ್ಥಾಪಿಸಲು ಬಯಸಿದೆ.

ಮೊರೊಕ್ಕೊ ಮತ್ತು ಇಸ್ರೇಲ್ ನಡುವಿನ ಶಾಂತಿ ಒಪ್ಪಂದವನ್ನು ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯ ಬಸ್ಸಾಂ ಅಲ್-ಸಾಲಿಹಿ ಖಂಡಿಸಿದ್ದಾರೆ.

‘‘ಫೆಲೆಸ್ತೀನ್ ಮತ್ತು ಅರಬ್ ಜಮೀನುಗಳ ಅತಿಕ್ರಮಣವನ್ನು ಇಸ್ರೇಲ್ ಕೊನೆಗೊಳಿಸಿದ ಬಳಿಕವಷ್ಟೇ ಅದರೊಂದಿಗೆ ಸಾಮಾನ್ಯ ಸಂಬಂಧ ಸಾಧ್ಯ ಎಂಬುದಾಗಿ 2002ರ ಅರಬ್ ಶಾಂತಿ ಒಪ್ಪಂದ ಹೇಳುತ್ತದೆ. ಯಾವುದೇ ಅರಬ್ ದೇಶವು ಒಪ್ಪಂದದಿಂದ ಹಿಂದೆ ಸರಿಯುವುದು ಅಸ್ವೀಕಾರಾರ್ಹ. ಅದು ಇಸ್ರೇಲ್‌ನ ಹಠಮಾರಿತನವನ್ನು ಹೆಚ್ಚಿಸುತ್ತದೆ ಹಾಗೂ ಫೆಲೆಸ್ತೀನ್ ಜನರ ಹಕ್ಕುಗಳ ಉಲ್ಲಂಘನೆಯನ್ನು ಹೆಚ್ಚಿಸುತ್ತದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News