ಕೇರಳ: ನಾರಾಯಣ ಗುರು ಚಿಂತನೆಗಳ ಮೇಲೆ ದಾಳಿ

Update: 2020-12-12 04:53 GMT

ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಹರ್ಷವರ್ಧನ್ ಡಿಸೆಂಬರ್ 4ರಂದು ನೀಡಿದ ಹೇಳಿಕೆಯೊಂದರಲ್ಲಿ ಕೇರಳದ ತಿರುವನಂತಪುರಂನಲ್ಲಿರುವ ರಾಜೀವ್‌ಗಾಂಧಿ ಜೀವತಂತ್ರಜ್ಞಾನ ಕೇಂದ್ರದ ನೂತನ ಕ್ಯಾಂಪಸ್‌ಗೆ ‘‘ಶ್ರೀ ಗುರೂಜಿ ಮಾಧವ ಸದಾಶಿವ ಗೋಳ್ವಲ್ಕರ್ ಸ್ಮಾರಕ ಕ್ಯಾನ್ಸರ್ ಹಾಗೂ ಸಾಂಕ್ರಾಮಿಕ ಸೋಂಕಿನ ಸಂಕೀರ್ಣ ಕಾಯಿಲೆಗಳಿಗಾಗಿನ ಕೇಂದ್ರ ’’ (ಶ್ರೀ ಗುರೂಜಿ ಮಾಧವ ಸದಾಶಿವ ಗೋಳ್ವಲ್ಕರ್ ನ್ಯಾಶನಲ್ ಸೆಂಟರ್ ಫಾರ್ ಕಾಂಪ್ಲೆಕ್ಸ್ ಡಿಸೀಸ್ ಇನ್ ಕ್ಯಾನ್ಸರ್ ಆ್ಯಂಡ್ ವೈರಲ್ ಇನ್‌ಫೆಕ್ಷನ್)ಎಂಬುದಾಗಿ ಹೆಸರಿಡಲಾಗುವುದೆಂದು ತಿಳಿಸಿದ್ದಾರೆ. ಮಾಧವ ಸದಾಶಿವ ಗೋಳ್ವಲ್ಕರ್ ಅವರು ಆರೆಸ್ಸೆಸ್ ಚಿಂತನೆಗಳಿಗೆ ರೂಪಕೊಟ್ಟವರಾಗಿದ್ದಾರೆ.

ವಿಪರ್ಯಾಸವೆಂದರೆ, ಇದೇ ಗೋಳ್ವಲ್ಕರ್ ಚಿಂತನೆಗಳ ವಿರುದ್ಧ ನಿರಂತರ ಹೋರಾಟಗಳು ನಡೆಸಿ ಕೇರಳದ ಮಹಿಳೆಯರು, ದಲಿತರು, ಈಳವರು ಮೊದಲಾದ ಶೋಷಿತ ಸಮುದಾಯಗಳು ಬದುಕುವ ಹಕ್ಕನ್ನು ತಮ್ಮದಾಗಿಸಿಕೊಂಡರು. ಒಂದು ಕಾಲದಲ್ಲಿ ಗೋಳ್ವಲ್ಕರ್ ಚಿಂತನೆಗಳು ಕೇರಳವನ್ನು ಅಕ್ಷರಶಃ ನರಕವನ್ನಾಗಿಸಿತ್ತು. ಮೇಲ್ಜಾತಿಯ ನಂಬೂದಿರಿಗಳ ದೌರ್ಜನ್ಯ ಯಾವ ಪರಮಾವಧಿಯನ್ನು ತಲುಪಿತ್ತೆಂದರೆ ಕೆಳಜಾತಿಯ ಹೆಣ್ಣು ಮಕ್ಕಳು ರವಿಕೆ ಧರಿಸಬೇಕಾದರೆ ತೆರಿಗೆಯನ್ನು ಕಟ್ಟಬೇಕಾಗಿತ್ತು. ಹೀಗೆ ತೆರಿಗೆ ಕಟ್ಟಲು ನಿರಾಕರಿಸಿದ ಈಳವ ಜಾತಿಗೆ ಸೇರಿದ ನಂಗೇಲಿ ಎಂಬಾಕೆ, ಪ್ರತಿಭಟನಾರ್ಥವಾಗಿ ತನ್ನ ಮೊಲೆಯನ್ನೇ ಕತ್ತರಿಸಿಕೊಂಡು ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಆಕೆಯ ಚಿತೆಗೆ ಗಂಡನೂ ಹಾರಿ ಪ್ರಾಣ ಕಳೆದುಕೊಂಡ. ನಂಗೇಲಿ ಬಾಳಿದ ಗ್ರಾಮ ಈಗಲೂ ‘ಮುಲಚ್ಚಿಪರಂಬು’ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದೆ. ಅಂದಿನ ಕೇರಳವನ್ನು ಆಳುತ್ತಿದ್ದ ಜಮೀನ್ದಾರ ವರ್ಗ ಮತ್ತು ಜಾತೀಯತೆಯನ್ನು ಕಂಡು ವಿವೇಕಾನಂದರು ‘ಇದೊಂದು ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು. ನಾರಾಯಣ ಗುರುಗಳಂತಹ ಸಮಾಜ ಸುಧಾರಕರು ನಡೆಸಿದ ಹೋರಾಟ, ಎಡಪಂಥೀಯ ಚಳವಳಿಗಳು ಕೇರಳವನ್ನು ಜಾತೀಯತೆಯ ಹುಚ್ಚಿನಿಂದ ಹೊರಗೆ ತಂದಿವು.

ಇಂದು ಕೇರಳ ಸಾಕ್ಷರತೆಯಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಆದರೆ ಇದಕ್ಕಾಗಿ ಸಾವಿರಾರು ಜನರು ತಮ್ಮ ಬದುಕನ್ನೇ ಬಲಿದಾನಗೈದಿದ್ದಾರೆ. ಜಾತೀಯ ಕ್ಯಾನ್ಸರ್‌ನಿಂದ ಕೇರಳವನ್ನು ಉಳಿಸಿದ ಅಂತಹ ಮಹನೀಯರ ಹೆಸರನ್ನು ಕ್ಯಾಂಪಸ್‌ಗೆ ಇಡುವ ಬದಲು, ಜಾತೀಯತೆಯನ್ನು ಪ್ರಬಲವಾಗಿ ಸಮರ್ಥಿಸುತ್ತಿದ್ದ ಗೋಳ್ವಲ್ಕರ್‌ರ ಹೆಸರನ್ನು ಇಡುವುದೆಂದರೆ ಅದು ನಾರಾಯಣ ಗುರುಗಳ ಚಿಂತನೆಗಳ ಮೇಲೆ ನಡೆಸುವ ದಾಳಿಯಾಗಿದೆ. ಕೇರಳದ ಜನರಿಗೆ ನೆಮ್ಮದಿಯ ಬದುಕನ್ನು ನೀಡಿದ್ದು ಸಂವಿಧಾನ. ಗೋಳ್ವಲ್ಕರ್ ಅವರು ಭಾರತದ ಸಂವಿಧಾನವನ್ನು ರದ್ದುಪಡಿಸಲು ಹಾಗೂ ಶೂದ್ರರು ಮತ್ತು ಮಹಿಳೆಯರನ್ನು ಉಪದರ್ಜೆಯ ಮಾನವರೆಂದು ಪರಿಗಣಿಸುವ ಮನುಸ್ಮತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದರು. ಭಾರತದಲ್ಲಿ ಅಲ್ಪಸಂಖ್ಯಾತರ ಸಮಸ್ಯೆಯನ್ನು ಬಗೆಹರಿಸಲು ಜರ್ಮನಿಯಲ್ಲಿ ಜನಾಂಗೀಯ ಶುದ್ಧೀಕರಣದ ಹೆಸರಿನಲ್ಲಿ ಯಹೂದ್ಯರ ನರಮೇಧ ನಡೆಸಿದ ಹಿಟ್ಲರ್‌ನ ಮಾದರಿಯನ್ನು ಅನುಸರಿಸಬೇಕೆಂದು ಅವರು ಹಿಂದೂಗಳಿಗೆ ಕರೆ ನೀಡಿದ್ದರು. 1960ರ ಡಿಸೆಂಬರ್ 17ರಂದು ಗೋಳ್ವಲ್ಕರ್ ಅವರನ್ನು ಗುಜರಾತ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ಆಹ್ವಾನಿಸಲಾಗಿತ್ತು. ತನ್ನ ಭಾಷಣದಲ್ಲಿ ಗೋಳ್ವಲ್ಕರ್ ಅವರು ಜನಾಂಗೀಯ ಸಿದ್ಧಾಂತದಲ್ಲಿ ತನಗಿರುವ ದೃಢವಾದ ನಂಬಿಕೆಯನ್ನು ಒತ್ತಿ ಹೇಳಿದರು. ಇತಿಹಾಸದಲ್ಲಿ ಭಾರತೀಯ ಸಮಾಜದಲ್ಲಿನ ವರ್ಣಸಂಕರದ ವಿಷಯವನ್ನು ಪ್ರಸ್ತಾವಿಸುತ್ತಾ ಅವರು ಹೀಗೆ ಹೇಳಿದ್ದರು;

 ‘‘ಇಂದು ವರ್ಣಸಂಕರದ ಪ್ರಯೋಗಗಳನ್ನು ಕೇವಲ ಪ್ರಾಣಿಗಳ ಮೇಲಷ್ಟೇ ಮಾಡಲಾಗುತ್ತಿದೆ. ಆದರೆ ಇಂತಹ ಪ್ರಯೋಗಗಳನ್ನು ಮಾನವರ ಮೇಲೆ ನಡೆಸಲು ಇಂದಿನ ತಥಾಕಥಿತ ಆಧುನಿಕ ವಿಜ್ಞಾನಕ್ಕೆ ಇನ್ನೂ ಸಾಧ್ಯವಾಗಿಲ್ಲ. ಈ ಕ್ಷೇತ್ರದಲ್ಲಿ ನಮ್ಮ ಪೂರ್ವಿಕರು ಮಾಡಿದ್ದ ಪ್ರಯೋಗಗಳನ್ನು ನಾವು ಪರಿಶೀಲಿಸೋಣ. ವರ್ಣಸಂಕರದ ಮೂಲಕ ಉತ್ತಮ ಮಾನವ ತಳಿಯನ್ನು ಸೃಷ್ಟಿಸುವ ಪ್ರಯತ್ನವಾಗಿ ನಂಬೂದಿರಿ ಬ್ರಾಹ್ಮಣರ ವರ್ಣಸಂಕರವು ಉತ್ತರ ಕೇರಳದಲ್ಲಿ ಪ್ರಚಲಿತದಲ್ಲಿತ್ತು. ನಂಬೂದಿರಿ ಬ್ರಾಹ್ಮಣ ಕುಟುಂಬದ ಹಿರಿಯ ಪುತ್ರನು ಕೇರಳದ ವೈಶ್ಯ, ಕ್ಷತ್ರಿಯ ಅಥವಾ ಶೂದ್ರ ಸಮುದಾಯಗಳ ವಿವಾಹಿತ ಮಹಿಳೆಯ ಮೊದಲ ಸಂತಾನಕ್ಕೆ ನಂಬೂದಿರಿ ಬ್ರಾಹ್ಮಣನೇ ತಂದೆಯಾಗಬೇಕಿತ್ತು. ಆನಂತರ ಆ ಮಹಿಳೆಯು ತನ್ನ ಪತಿಯಿಂದ ಮಕ್ಕಳನ್ನು ಪಡೆಯಬಹುದಾಗಿತ್ತು. ಈ ಪ್ರಯೋಗವು ಮೊದಲನೇ ಮಗುವಿಗಷ್ಟೇ ಸೀಮಿತವಾಗಿತ್ತು. ಆದರೆ ಇಂದು ಇದನ್ನು ವ್ಯಭಿಚಾರವೆಂದು ಕರೆಯಲಾಗುತ್ತಿದೆ’’ ಎಂದವರು ಹೇಳಿದ್ದರು.

ಈ ನಂಬೂದಿರಿಗಳು ಕೇರಳದ ಕೆಳಜಾತಿಗಳ ಮೇಲೆ ಎಸಗಿರುವ ದೌರ್ಜನ್ಯವನ್ನು ಗೋಳ್ವಲ್ಕರ್ ಈ ಮೂಲಕ ಬಹಿರಂಗವಾಗಿ ಸಮರ್ಥಿಸುತ್ತಾರೆ. ಜಾತಿ ಭೇದಗಳನ್ನು ಸಮರ್ಥಿಸುತ್ತಾ ಗೋಳ್ವಲ್ಕರ್ ಹೀಗೆ ಹೇಳುತ್ತಾರೆ, ‘‘ ಇಂದು ನಾವು ಅರಿವಿಲ್ಲದೆ ವರ್ಣವ್ಯವಸ್ಥೆಯನ್ನು ಕೀಳು ಮಾಡಲು ಯತ್ನಿಸುತ್ತಿದ್ದೇವೆ. ಒಂದು ಸಮಾಜದಲ್ಲಿ ಕೆಲವು ವ್ಯಕ್ತಿಗಳು ಬುದ್ಧಿಜೀವಿಗಳಾಗಿರುತ್ತಾರೆ. ಇನ್ನು ಕೆಲವರು ಉತ್ಪಾದನೆಯಲ್ಲಿ ಹಾಗೂ ಸಂಪತ್ತನ್ನು ಗಳಿಸುವಲ್ಲಿ ಪರಿಣಿತರಾಗಿರುತ್ತಾರೆ. ಇನ್ನು ಕೆಲವರಿಗೆ ದೈಹಿಕ ಶ್ರಮಪಟ್ಟು ದುಡಿಯುವ ಸಾಮರ್ಥ್ಯವಿರುತ್ತದೆ. ನಮ್ಮ ಪೂರ್ವಿಕರು ಸಮಾಜದಲ್ಲಿ ಈ ನಾಲ್ಕು ವಿಶಾಲವಾದ ವಿಭಾಗಗಳನ್ನು ಕಂಡಿದ್ದರು. ವರ್ಣಾಶ್ರಮ ವ್ಯವಸ್ಥೆಯೆಂಬುದು ಈ ನಾಲ್ಕು ವಿಭಾಗಗಳ ಸಮರ್ಪಕ ಸಮನ್ವಯತೆಯಾಗಿದೆ ಹಾಗೂ ವ್ಯಕ್ತಿಗೆ ಅತ್ಯುತ್ತಮವಾಗಿ ಸೂಕ್ತವಾಗುವ ವೃತ್ತಿಯನ್ನು ನಡೆಸಲು, ವಂಶವಾಹಿ ಅಭಿವೃದ್ಧಿಯ ಮೂಲಕ ತನ್ನ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ’’ ಹೀಗೆ ಜಾತಿ ಭೇದವನ್ನೂ, ನಂಬೂದಿರಿಗಳ ಹಿರಿಮೆಗಳನ್ನೂ ಸಮರ್ಥಿಸುತ್ತಾ, ಜಾತಿಯ ಹೆಸರಲ್ಲಿ ಎಸಗಿದ ದೌರ್ಜನ್ಯಗಳಿಗೆಲ್ಲ ಮಾನ್ಯತೆಯನ್ನು ನೀಡುತ್ತಾರೆ ಗೋಳ್ವಲ್ಕರ್. ಮಹಿಳೆಯರನ್ನು ಹಾಗೂ ಕೇರಳದ ಸಮಾಜವನ್ನು ಬಹಿರಂಗವಾಗಿ ಕೀಳಾಗಿಸುವ ಇಂತಹ ಕ್ರಿಮಿನಲ್ ಚಿಂತನೆಗಳನ್ನು ಹೊಂದಿದ್ದ ಗೋಳ್ವಲ್ಕರ್ ಅವರ ಹೆಸರನ್ನು ಆ ರಾಜ್ಯದ ಪ್ರಮುಖ ವಿಜ್ಞಾನ ಕೇಂದ್ರಕ್ಕೆ ಇಡುವುದೆಂದರೆ, ನಂಬೂದಿರಿಗಳು ಸೇರಿದಂತೆ ಮೇಲ್ಜಾತಿಯ ಬ್ರಾಹ್ಮಣರು, ಜಮೀನ್ದಾರರ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಾ ಪ್ರಾಣ ಅರ್ಪಿಸಿದ ಸಾವಿರಾರು ಸಮಾಜ ಸುಧಾರಕರಿಗೆ ಮಾಡುವ ಅವಮಾನವಾಗಿದೆ. ನಂಬೂದಿರಿಗಳ ಮೊಲೆಕರವನ್ನು ಪ್ರತಿಭಟಿಸಿ ಮೊಲೆಯನ್ನೇ ಕತ್ತರಿಸಿ ಕೊಟ್ಟ ನಂಗೇಲಿಯ ಬಲಿದಾನಕ್ಕೆ ಮಾಡುವ ಅವಮಾನವಾಗಿದೆ. ‘ಒಂದೇ ಜಾತಿ, ಒಂದೇ ದೇವರು’ ಎಂದು ಘೋಷಿಸಿದ ನಾರಾಯಣ ಗುರುಗಳ ಚಿಂತನೆಗಳ ಮೇಲೆ ಈ ಮೂಲಕ ದಾಳಿ ನಡೆಸುವುದಕ್ಕೆ ಕೇಂದ್ರ ಸರಕಾರ ಯತ್ನಿಸುತ್ತಿದೆ. ಕೇರಳದ ಜನರು ಇದನ್ನು ಒಂದಾಗಿ ಪ್ರತಿಭಟಿಸಿ, ಭವಿಷ್ಯದ ನಂಗೇಲಿಯರ ಮಾನ ಪ್ರಾಣವನ್ನು ಉಳಿಸಬೇಕಾಗಿದೆ. ಕ್ಯಾಂಪಸ್‌ಗೆ ಹೆಸರಿಡುವುದಾದರೆ, ಜಾತೀಯತೆಯಿಂದ ಕೇರಳವನ್ನು ರಕ್ಷಿಸಲು ಹೋರಾಟ ನಡೆಸಿದ ಕೇರಳದ ನೆಲದ ಸಮಾಜ ಸುಧಾರಕನೊಬ್ಬನ ಹೆಸರನ್ನು ಇಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News