ದುರುದ್ದೇಶದಿಂದ ವಾಹನಗಳ ಪರಿಶೀಲನೆ ಮಾಡುವಂತಿಲ್ಲ: ಪೊಲೀಸ್ ಆಯುಕ್ತ ಕಮಲ್ ಪಂತ್

Update: 2020-12-12 17:43 GMT

ಬೆಂಗಳೂರು, ಡಿ.12: ನಗರ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಯಾವುದೇ ವಾಹನಗಳ ದಾಖಲೆ ಉದ್ದೇಶಪೂರ್ವಕ ಪರಿಶೀಲನೆ ಮಾಡುವಂತಿಲ್ಲ, ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಮಾತ್ರ ಕ್ರಮ ಜರುಗಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದರು.

ಶನಿವಾರ ನಗರದ ವೈಟ್‍ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿ ಪ್ರತಿ ತಿಂಗಳ ಎರಡನೆ ಶನಿವಾರ ನಡೆಯುವ ಸಂಚಾರ ಸಂಪರ್ಕ ದಿನದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿ ಅತಿ ವೇಗವಾಗಿ, ಅಜಾಗರೂಕತೆಯಿಂದ ಚಾಲನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

ಟೋಯಿಂಗ್ ಮಾಡುವ ಸಿಬ್ಬಂದಿಗಳು ರೌಡಿಗಳಂತೆ ವರ್ತನೆ ಮಾಡುತ್ತಾರೆ. ವರ್ತೂರು, ಗುಂಜೂರು, ವೈಟ್‍ಫೀಲ್ಡ್ ಭಾಗದಲ್ಲಿ ಪಾದಚಾರಿ, ಬಿಎಂಟಿಸಿ ಬಸ್‍ಗಳ ಹಿಂದೆ ಅಳವಡಿಸುವ ಜಾಹೀರಾತಿನಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಅಲವತ್ತುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಆದಷ್ಟು ಬೇಗ ಸಿಗ್ನಲ್ ಟೈಮರ್ ಅಳವಡಿಸುತ್ತೇವೆ. ಟೋಯಿಂಗ್ ಸಿಬ್ಬಂದಿ ಬಗ್ಗೆ ಯಾವುದೇ ದೂರಿಗಳಿದ್ದರೆ, ಹೆಚ್ಚಿನ ಶುಲ್ಕ ಪಡೆದರೆ ಅವರ ಬಗ್ಗೆ ಮಾಹಿತಿ ಕೊಡಿ. ಅವರ ಗುತ್ತಿಗೆ ವಜಾಗೊಳಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News