ಎನ್‍ಇಪಿ ಜಾರಿಯಿಂದ ತಳ ಸಮುದಾಯಗಳು ಶಿಕ್ಷಣದಿಂದ ವಂಚಿತ: ಬಂಜಗೆರೆ ಜಯಪ್ರಕಾಶ್

Update: 2020-12-14 16:39 GMT

ಬೆಂಗಳೂರು, ಡಿ.14: ನೂತನ ಶಿಕ್ಷಣ ನೀತಿಯು ವೃತ್ತಿಪರ ಶಿಕ್ಷಣವನ್ನು ಕೇಂದ್ರೀಕರಿಸಿರುವುದರಿಂದ ಬುಡಕಟ್ಟು ಮತ್ತು ತಳಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ಗಾಂಧಿಭವನದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯು ಏರ್ಪಡಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರ ದುಂಡು ಮೇಜಿನ ಸಭೆಯಲ್ಲಿ ನಡೆದ ಚರ್ಚೆ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಳ ಸಮುದಾಯಗಳನ್ನು ಶಿಕ್ಷಣದಿಂದ ವಂಚಿಸುವ ಮೂಲಕ, ಈ ಹಿಂದೆ ಇದ್ದಂತಹ ಗುಲಾಮಗಿರಿ ಪದ್ಧತಿಗೆ ತಳ್ಳುವ ಹುನ್ನಾರ ಕೇಂದ್ರ ಸರಕಾರ ಮಾಡಲು ಹೊರಟಿದೆ. ಅಲ್ಲದೆ, ಈ ನೀತಿಯಲ್ಲಿ ಪ್ರಾಚೀನ ಶಿಕ್ಷಣ ತರಲಾಗುತ್ತಿದೆ. ಇದೂ ಸಹ ತಳಸಮುದಾಯವರಿಗೆ ಮಾರಕವಾಗಿದೆ. ಶಿಕ್ಷಣದಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಪ್ರಧಾನವಾಗಿ ಪರಿಗಣಿಸುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ಪ್ರೊ.ಅಬ್ದುಲ್ ರೆಹಮಾನ್ ಪಾಷಾ ಮಾತನಾಡಿ, ನೂತನ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ ಕಲಿಯಬೇಕೆಂದು ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತೃಭಾಷೆ ಎಂದು ಹೇಳದೇ ಕನ್ನಡ ಪ್ರಧಾನವಾದ ಭಾಷೆಯಾಗಬೇಕು. ಇಲ್ಲಿ, ಉರ್ದು, ಕೊಂಕಣಿ, ಬ್ಯಾರಿ ಅಂತಹ ಮಾತೃಭಾಷೆಯನ್ನು ಹೊಂದಿದವರು ಇದ್ದಾರೆ. ಅವರೆಲ್ಲರೂ ಕನ್ನಡದಲ್ಲಿ ಬೆಳೆಯುತ್ತಾರೆ. ಹೀಗಾಗಿ, ಶಾಲಾ ಶಿಕ್ಷಣ ಕನ್ನಡದಲ್ಲಿ ಕಲಿಯುವಂತಾಗಬೇಕು, ಕನ್ನಡ ಪಠ್ಯದಲ್ಲಿ ಕನ್ನಡ ಭಾಷಾ ಕೋಶ ಕಲಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಅಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಕೇಂದ್ರ ಸರಕಾರವು ಯಾವುದೇ ಚರ್ಚೆ ಹಾಗೂ ಅವಲೋಕನಕ್ಕೆ ಅವಕಾಶ ನೀಡದೆ ಆತುರವಾಗಿ ಈ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಶಿಕ್ಷಣ ಆಳುವ ವರ್ಗದ ಅಸ್ತ್ರವಾಗಿದ್ದು ತಳ ಸಮುದಾಯದವರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಇಡೀ ಶಿಕ್ಷಣ ರಾಷ್ಟ್ರೀಕರಣವಾಗಬೇಕಿತ್ತು, ಆದರೆ ಶಿಕ್ಷಣವನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ. ಸಂಘ ಪರಿವಾರದ ಲಾಭಕ್ಕೆ ನೀತಿಯನ್ನು ಜಾರಿಗೊಳಿಸುತ್ತಿದ್ದು ಇದನ್ನು ವಿರೋಧಿಸಲು ಜನ ಚಳವಳಿ ಅಗತ್ಯವಿದೆ ಎಂದರು.

ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದಂತಹ ಹಲವು ಸಾಹಿತಿಗಳು, ಲೇಖಕರು, ದಲಿತ ಸಂಘಟನೆಗಳ, ಕನ್ನಡಪರ ಸಂಘಟನೆಗಳ ಮುಖಂಡರು, ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ 2020ಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ನೀತಿಯು ಪರಿಷ್ಕರಣೆಗೊಳ್ಳಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ, ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಚರ್ಚೆಯಾಗುವ ವಿಷಯಗಳು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಬೇಕು ಎಂಬ ಬೇಡಿಕೆ ಮುಂದಿಟ್ಟವು. ಇದಕ್ಕೆ ಸಭೆಯಲ್ಲೂ ಸಹಮತ ವ್ಯಕ್ತವಾಯಿತು.

ಶಿಕ್ಷಣ ನೀತಿಯಲ್ಲಿ 8ನೇ ತರಗತಿವರೆಗೆ ವಾರ್ಷಿಕವಾಗಿ ಸಾರ್ವಜನಿಕ ಪರೀಕ್ಷೆ ನಡೆಯಬೇಕು. 15ನೇ ವಯಸ್ಸಿನವರೆಗೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬುದನ್ನು ನೀತಿಯಲ್ಲಿ ಸೇರಿಸಬೇಕು ಎಂದು ತಿಳಿಸಲಾಯಿತು. ನೂತನ ಶಿಕ್ಷಣ ನೀತಿಯು ಉತ್ತಮವಾಗಿದೆ. 1-6ನೇ ವಯಸ್ಸಿನ ಮಕ್ಕಳಲ್ಲಿ ಗ್ರಹಿಕೆಯ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಅವರಿಗೆ ಮಾತೃಭಾಷೆಯ ಶಿಕ್ಷಣ ಕಡ್ಡಾಯಗೊಳಿಸಿರುವುದು ಉತ್ತಮವಾಗಿದೆ. ಆದರೆ ಶಿಕ್ಷಣ ನೀತಿಯ ಅಂಶಗಳು ಎಲ್ಲ ಭಾರತೀಯ ಅಧಿಕೃತ ಭಾಷೆಗಳಿಗೆ ಅನುವಾದವಾಗುವ ಮೂಲಕ ಪ್ರತಿಯೊಬ್ಬರಿಗೂ ತಿಳಿಯುವಂತಾಗಬೇಕು. ಕೆಲವು ವಿಷಯಗಳ ಚರ್ಚೆಯಾದ ನಂತರ ನೂತನ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿಗಳು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಚಿಂತಕ ಶ್ರೀಪಾದ ಭಟ್, ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್, ಜಯ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News