ಗೃಹ ಇಲಾಖೆ ಸಮನ್ಸ್ ಕಡೆಗಣಿಸಿದ ಬಂಗಾಳ ಮುಖ್ಯ ಕಾರ್ಯದರ್ಶಿ, ಡಿಜಿಪಿ

Update: 2020-12-15 03:45 GMT

ಕೊಲ್ಕತ್ತಾ, ಡಿ.15: ಕೇಂದ್ರದ ನಿರ್ದೇಶನಗಳನ್ನು ಧಿಕ್ಕರಿಸುವ ಪರಿಪಾಠವನ್ನು ಪಶ್ಚಿಮ ಬಂಗಾಳ ಮುಂದುವರಿಸಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ದಿಲ್ಲಿಯಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಅಳಪನ್ ಬಂಡೋಪಾಧ್ಯಾಯ ಮತ್ತು ಡಿಜಿಪಿ ವೀರೇಂದ್ರ ಭಾಗವಹಿಸಲಿಲ್ಲ.

ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನೀಡಿದ ಸಮನ್ಸ್ ಬಗ್ಗೆ ಮತ್ತು ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸಿದ ಕ್ರಮದ ಸಂಬಂಧ ಸ್ಪಷ್ಟನೆ ಕೋರಿ ಕೇಂದ್ರಕ್ಕೆ ಬರೆದಿರುವ ಎರಡು ಪತ್ರಗಳಿಗೆ ಸಂಬಂಧಿಸಿದಂತೆ ಯಾವ ಸ್ಪಂದನವೂ ಸಿಕ್ಕಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿ ಘಟನೆ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚರ್ಚಿಸಲು ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರು ಭಲ್ಲಾ ಅವರನ್ನು ಸೋಮವಾರ ಅವರ ಕಚೇರಿಯಲ್ಲಿ ಭೇಟಿ ಮಾಡುವಂತೆ ಕೇಂದ್ರ ಗೃಹ ಸಚಿವಾಲಯ ಸಮನ್ಸ್ ನೀಡಿತ್ತು. ಈ ಸಮನ್ಸ್ ಬಗ್ಗೆ ಉತ್ತರಿಸಿದ ಹಿರಿಯ ಅಧಿಕಾರಿಗಳು, ರಾಜ್ಯ ಸರಕಾರ ಈ ಪರಿಸ್ಥಿತಿ ಬಗ್ಗೆ ಈಗಾಗಲೇ ಗಮನ ಹರಿಸಿದ್ದು, ದಾಳಿ ಘಟನೆಗೆ ಸಂಬಂಧಿಸಿದಂತೆ ಹಲವು ಮಂದಿಯನ್ನು ಬಂಧಿಸಿದೆ. ಆದ್ದರಿಂದ ಹಾಜರಾತಿಗೆ ವಿನಾಯತಿ ನೀಡಬೇಕು ಎಂದು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News