ಹೆಚ್ಚುತ್ತಿರುವ ಪೋರ್ಟಿಂಗ್: ಏರ್ ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದ ಜಿಯೋ

Update: 2020-12-15 07:08 GMT

ಹೊಸದಿಲ್ಲಿ,ಡಿ.15: ರಾಜಧಾನಿಯ ಗಡಿ ಪ್ರದೇಶಗಳಲ್ಲಿ ರೈತರ ಪ್ರತಿಭಟನೆ ಮುಂದುವರಿದಿರುವಂತೆಯೇ ಇತ್ತ  ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇನ್ಫೋಕಾಂ ಸಂಸ್ಥೆ ಟೆಲಿಕಾಂ ನಿಯಂತ್ರಣ  ಪ್ರಾಧಿಕಾರಕ್ಕೆ (ಟ್ರಾಯ್) ಪತ್ರ ಬರೆದು  ವೊಡಾಫೋನ್ ಐಡಿಯಾ ಮತ್ತು ಭಾರತಿ ಏರ್‍ಟೆಲ್ ಸಂಸ್ಥೆಗಳು  ನೈತಿಕತೆಗೆ ವಿರುದ್ಧವಾಗಿ ನಂಬರ್ ಪೋರ್ಟಬಿಲಿಟಿ (MNP) ಅಭಿಯಾನ ನಡೆಸಿ ಪರಿಸ್ಥಿತಿಯ ಲಾಭ ಗಿಟ್ಟಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದೆ.

ತಾನು ಸೆಪ್ಟೆಂಬರ್ 28ರಂದು ಬರೆದ ಪತ್ರದ ಮುಂದುವರಿದ ಭಾಗವಾಗಿ ಈಗ ಪತ್ರ ಮತ್ತೆ ಬರೆಯುತ್ತಿರುವುದಾಗಿ ಜಿಯೋ ಹೇಳಿದೆ. ಕೇಂದ್ರದ ಕೃಷಿ ಕಾಯಿದೆಗಳು ರಿಲಯನ್ಸ್ ಸಂಸ್ಥೆಗೇ ಹೆಚ್ಚು ಲಾಭಕರವಾಗಲಿವೆ ಎಂಬ ಸುಳ್ಳು ವದಂತಿಗಳನ್ನು ಹರಡಿ ಪರಿಸ್ಥಿತಿಯ ಲಾಭವನ್ನು ಎದುರಾಳಿ ಟೆಲಿಕಾಂ ಸಂಸ್ಥೆಗಳು ಪಡೆಯುತ್ತಿವೆ ಎಂದು ಆರೋಪಿಸಿದೆ.

ಈ ಎರಡೂ ಸಂಸ್ಥೆಗಳು ತಮ್ಮ ಉದ್ಯೋಗಿಗಳು, ಏಜೆಂಟರುಗಳು ಹಾಗೂ ರಿಟೇಲರುಗಳ ಮೂಲಕ ಈ ಅಪಪ್ರಚಾರದಲ್ಲಿ ತೊಡಗಿದೆ ಎಂದು ರಿಲಯನ್ಸ್ ಜಿಯೋ ತನ್ನ ಡಿಸೆಂಬರ್ 10ರ ಪತ್ರದಲ್ಲಿ ಆರೋಪಿಸಿದೆ. ಪಂಜಾಬ್ ಮತ್ತು ಇತರ ಉತ್ತರದ ಭಾಗಗಳಲ್ಲಿ ಇಂತಹ ಅಪಪ್ರಚಾರ ಕುರಿತ ಚಿತ್ರಗಳನ್ನೂ ಪತ್ರದ ಜತೆಗೆ ಲಗತ್ತಿಸಲಾಗಿದೆ.

ರಿಲಯನ್ಸ್ ಜಿಯೋ ತನ್ನ ಪತ್ರದಲ್ಲಿ ಮಾಡಿರುವ ಆರೋಪಗಳನ್ನು ವೊಡಾಫೋನ್ ಹಾಗೂ ಏರ್‍ಟೆಲ್ ಸಂಸ್ಥೆಗಳು ನಿರಾಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News