ಕ್ರಿಕೆಟ್ ಚೆಂಡು ತಲೆಗೆ ಬಡಿದು ಸಾವಿನ ದವಡೆಗೆ ಸಿಲುಕಿದ್ದ ವ್ಯಕ್ತಿ ಈಗ 16 ಬಿಲಿಯನ್ ಡಾಲರ್ ಒಡೆಯ !

Update: 2020-12-18 11:45 GMT

ಹೊಸದಿಲ್ಲಿ,ಡಿ.18: ಕ್ರಿಕೆಟ್ ಆಡುತ್ತಿದ್ದಾಗ ಚೆಂಡೊಂದು ಬಂದು ತಲೆಗೆ ಬಡಿದು ಸಾವು ಬದುಕು ನಡುವಿನ ಹೋರಾಟವು ಸಂಭವಿಸುತ್ತಿರದಿದ್ದಲ್ಲಿ ಇಂದು ಆ ವ್ಯಕ್ತಿ ವಿಶ್ವದ ಶ್ರೀಮಂತ ಬ್ಯಾಂಕರ್ ಎಂದೆನಿಸಿಕೊಳ್ಳುತ್ತಿರಲಿಲ್ಲವೇನೊ. ಕ್ರಿಕೆಟ್ ಕುರಿತಾದಂತೆ ಅತೀವ ಆಸಕ್ತಿಯಿದ್ದ ಆ ಯುವಕನ ತಲೆಗೆ ಚೆಂಡು ಬಡಿದು ಆಸ್ಪತ್ರೆಗೆ ಸೇರಿ, ಪವಾಡ ಸದೃಶವಾಗಿ ಬದುಕುಳಿದ ಬಳಿಕ ಕ್ರಿಕೆಟ್ ಅನ್ನು ತೊರೆದು ಹಣಕಾಸು ವ್ಯವಹಾರಕ್ಕಿಳಿದ ಉದಯ್ ಕೋಟಕ್ ಈಗ 16 ಬಿಲಿಯನ್ ಡಾಲರ್ ಒಡೆಯ.

ಈ ಎಲ್ಲ ಘಟನೆಗಳ ನಂತರ ತಮ್ಮ ಕುಟುಂಬದ ‘ಹತ್ತಿ’ ಉದ್ಯಮವನ್ನು ಕೆಲಕಾಲ ನಿಭಾಯಿಸಿದ ಬಳಿಕ 1985ರಲ್ಲಿ ಆಗಿನ ಪ್ರತಿಷ್ಟಿತ ಜಮ್ನಾಲಾಲ್ ಬಜಾಜ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ವಿದ್ಯಾರ್ಜನೆಗೈದರು. ಈಗ ಕೋಟಕ್ ರವರಿಗೆ 61 ವಯಸ್ಸು. ಬ್ಲೂಮ್ ರಂಗ್ ಬಿಲಿಯೇನರುಗಳ ಸೂಚ್ಯಂಕದ ಪ್ರಕಾರ ಅವರ ಒಟ್ಟು ಸಂಪತ್ತು 16,000 ಬಿಲಿಯನ್ ಡಾಲರ್. ಕೋವಿಡ್ ಕಾರಣದಿಂದಾಗಿ ಮತ್ತು ಆರ್ಥಿಕ ಕುಸಿತ ಕಾರಣದಿಂದಾಗಿ ಹಲವಾರು ಬ್ಯಾಂಕುಗಳು ಭಾರತದಲ್ಲಿ ನಷ್ಟ ಅನುಭವಿಸುತ್ತಿದ್ದರೂ, ಉದಯ್ ರವರ ಕೋಟಕ್ ಮಹೀಂದ್ರಾ ಬ್ಯಾಂಕ್ ಮಾತ್ರ ಎಲ್ಲಾ ಬ್ಯಾಂಕ್ ಗಳ ನಡುವೆ ವಿಭಿನ್ನವಾಗಿ ತಲೆ ಎತ್ತಿ ನಿಂತಿದೆ.

ಕೋವಿಡ್ ನ ಸಂದರ್ಭದಲ್ಲಿ ಹಲವಾರು ಬ್ಯಾಂಕುಗಳು ಮುಚ್ಚುಗಡೆಯ ಹಂತಕ್ಕೆ ತಲುಪಿದ್ದರೂ ಕೂಡಾ, ವಿಭಿನ್ನವಾದ ಕಾರ್ಯವೈಖರಿ ಮತ್ತು ಹೂಡಿಕೆದಾರರ ಹಾಗೂ ಶೇರು ಖರೀದಿದಾರರ ಅನುಕೂಲಕ್ಕೆ ತಕ್ಕಂತೆ ಉತ್ತಮ ಕಾರ್ಯವೈಖರಿಯನ್ನು ಪ್ರದರ್ಶಿಸಿದ ಕೋಟಕ್ ಮಹಿಂದ್ರಾ ಬ್ಯಾಂಕ್ ನ ಶೇರುಗಳು ಈ ವರ್ಷದಲ್ಲಿ 17%ದಷ್ಟು ಏರಿಕೆಯಾಗಿದೆ.

“ನಾನು ನೋಡಿದಂತೆ, ಉದಯ್ ಕೋಟಕ್ ವಿಶ್ವದ ಶ್ರೀಮಂತ ಬ್ಯಾಂಕ್ ಮಾಲಕ ಅನ್ನುವುದಕ್ಕಿಂತ, ವಿಶ್ವದ ಚಾಣಾಕ್ಷ ಬ್ಯಾಂಕರ್ ಅನ್ನಬಹುದು” ಎಂದು ಆನಂದ್ ಮಹಿಂದ್ರಾ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಉದಯ್ ಮಾಲಕತ್ವದ ಕೋಟಕ್ ಗ್ರೂಪ್, 1986ರಲ್ಲಿ ಮಹಿಂದ್ರಾ ಗ್ರೂಪ್ ನೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಕೋಟಕ್ ಮಹಿಂದ್ರಾ ಚಾಲನೆಗೆ ಬಂತು. “ಪ್ರಮುಖವಾಗಿ,  ಬ್ಯಾಂಕೊಂದನ್ನು ಯಾವ ರೀತಿಯಲ್ಲಿ ಉಳಿಸಬಹುದು ಮತ್ತು ಉತ್ತಮವಾಗಿ ಮುನ್ನಡೆಸಬಹುದು ಎಂಬುವುದರ ಕುರಿತು ಅವರಿಗೆ ಸಂಪೂರ್ಣ ಅರಿವಿದೆ” ಎಂದೂ ಾನಂದ್ ಮಹೀಂದ್ರಾ ರವರು ಉದಯ್ ಕೋಟಕ್ ಕುರಿತಾದಂತೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

1985 ರ ವೇಳೆ ಗುಜರಾತ್ ನಲ್ಲಿ ಪ್ರಾರಂಭವಾದ ಕೋಟಕ್ ಸಂಸ್ಥೆಯ ಪ್ರಾರಂಭದ ಬಂಡವಾಳ 30 ಲಕ್ಷ ರೂ. (41,000 ಡಾಲರ್) ಆಗಿತ್ತು. ಸ್ನೇಹಿತರ ಮತ್ತು ಕುಟುಂಬಸ್ಥರ ಸಹಾಯದಿಂದ ಸಂಸ್ಥೆಯನ್ನು ಪ್ರಾರಂಭಿಸಲಾಗಿತ್ತು. 1986ರಲ್ಲಿ ಮಹೀಂದ್ರಾರೊಂದಿಗೆ ಪಾಲುದಾರಿಕೆ ಪ್ರಾರಂಭಿಸಿದ ಬಳಿಕ ಸ್ಟಾಕ್ ಮಧ್ಯವರ್ತಿಕೆ, ಸಾಲ ಸೌಲಭ್ಯ, ಹೂಡಿಕೆ, ಜೀವ ವಿಮೆ, ಮ್ಯೂಚುವಲ್ ಫಂಡ್ಸ್ ಮುಂತಾದವುಗಳನ್ನು ಆರಂಭಿಸಲಾಯಿತು. 2003ರಲ್ಲಿ ರಿಸರ್ವ್ ಬ್ಯಾಂಕ್ ಅನುಮೋದನೆಯ ಮೂಲಕ ಸಾಲ ಸೌಲಭ್ಯವನ್ನೂ ಪ್ರಾರಂಭಿಸಲಾಯಿತು.

ಕುಟುಂಬಸ್ಥರು ಸೇರಿಕೊಂಡು ಪ್ರಾರಂಭಿಸಿದ ಕಂಪೆನಿಗಳಲ್ಲಿ ಕುಟುಂಬಸ್ಥರೇ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುವ ಸಾಂಪ್ರದಾಯಿಕ ಪದ್ಧತಿ ಈ ಸಂಸ್ಥೆಯಲ್ಲಿಲ್ಲ. ಉನ್ನತ ಜವಾಬ್ದಾರಿಯುತ ಸ್ಥಾನಗಳಿಗೆ ಅರ್ಹ ವ್ಯಕ್ತಿಗಳನ್ನು ನೇಮಿಸುವುದರಿಂದ ಸಂಸ್ಥೆಯ ಹೂಡಿಕೆದಾರರ ಆತ್ಮವಿಶ್ವಾಸವೂ ವೃದ್ಧಿಸಿದೆ.

“ಇದೆಲ್ಲವೂ ನಡೆಯುತ್ತಿರುವುದಕ್ಕೆ ಉದಯ್ ಕಾರಣ. ಅವರ ಕೆಳಗಡೆ ಹಲವಾರು ಉತ್ತಮ ವ್ಯಕ್ತಿಗಳು ಕೆಲಸ ನಿರ್ವಹಿಸುತ್ತಿದ್ದಾರೆ, ಆದರೆ ಉದಯ್ ರ ಸ್ಥಾನವನ್ನು ತುಂಬುವುದು ನಿಜಕ್ಕೂ ಕಷ್ಟಕರ ಕೆಲಸ. ಅವರೊಂದು ವಿಶ್ವವಿದ್ಯಾಲಯ ಇದ್ದಂತೆ” ಎಂದು ಮಾಜಿ ಬ್ಯಾಂಕ್ ಉದ್ಯಮಿ ಹಾಗೂ ಜೈನ್ ಇನ್ ಸ್ಟಿಟ್ಯೂಟ್ ನ ಪ್ರೊಫೆಸರ್ ಆಗಿರುವ ಅನಂತ್ ನಾರಾಯಣ್ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

“ನಾನು ಕೋಟಕ್ ಗೆ ಬಂಡವಾಳ ಹೂಡಲು ನಿರ್ಧರಿಸಿದ ಸಂದರ್ಭ ನನ್ನ ತಂದೆ, ಕುಟುಂಬಸ್ಥರೆಲ್ಲಾ, ಈಗಷ್ಟೇ ವ್ಯವಹಾರ ಶಾಲೆಯಿಂದ ಹೊರಬಂದ ಸಣ್ಣ ಯುವಕನ ಮೇಲೆ ನಿನಗೇಕೆ ಇಷ್ಟು ನಂಬಿಕೆ ಎಂದು ಪ್ರಶ್ನಿಸಿದ್ದರು. ಆ ವೇಳೆ ನಾನು ‘ಒಂದು ದಿನ ಆ ಯುವಕನ ಹೆಸರಿನೊಂದಿಗೆ ನನ್ನ ಸೇರಿಕೊಂಡಿರುವುದನ್ನು ನೋಡಿ ನಾನು ಸಂತೋಷಪಡುವ ಕಾಲವೊಂದು ಬರಲಿದೆ ಎಂದು ಹೇಳಿದ್ದೆ. ನನಗೆ ಅವರ ಕುರಿತು ಅಷ್ಟೊಂದು ಆತ್ಮ ವಿಶ್ವಾಸವಿತ್ತು ಎಂದು ಆನಂದ್ ಮಹಿಂದ್ರಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News