ಸಂಸತ್ ಅಧಿವೇಶನ ರದ್ದು ಮಾಡಿದ್ದೇಕೆ?

Update: 2020-12-22 05:42 GMT

ದೇಶದ ರಾಜಧಾನಿ ದಿಲ್ಲಿಯಲ್ಲಿ ಕೊರೆಯುವ ಚಳಿಯಲ್ಲಿ ಸಾವಿರಾರು ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟಿಸುತ್ತಿರುವ ರೈತರು ಬೇರೇನನ್ನೂ ಕೇಳುತ್ತಿಲ್ಲ. ಬೇಸಾಯದ ಬದುಕಿಗೆ ಕಂಟಕಕಾರಿಯಾದ ಕೇಂದ್ರ ಸರಕಾರದ ಇತ್ತೀಚಿನ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ಒತ್ತಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಾನುಭೂತಿಯಿಂದ ಸ್ಪಂದಿಸಬೇಕಾದ ಕೇಂದ್ರ ಬಿಜೆಪಿ ಸರಕಾರ ಅತ್ಯಂತ ಅಸಡ್ಡೆಯಿಂದ ವರ್ತಿಸುತ್ತಿದೆ. ಈ ನಡುವೆ ಏಕಾಏಕಿ ಸಂಸತ್‌ನ ಚಳಿಗಾಲದ ಅಧಿವೇಶನವನ್ನು ಕೋವಿಡ್-19 ನೆಪ ಮಾಡಿಕೊಂಡು ರದ್ದು ಮಾಡಲಾಗಿದೆ. ಸರಕಾರ ಹೇಳುತ್ತಿರುವ ಕೋವಿಡ್ ಕಾರಣ ಬರೀ ನೆಪ ಮಾತ್ರ. ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೊರೋನ ಎಂಬ ವೈರಸ್‌ನ್ನು ಬಳಸಿಕೊಳ್ಳುವ ಕೀಳು ಮಟ್ಟಕ್ಕೆ ಈ ಸರಕಾರ ಇಳಿದಿದೆ. ಕೋವಿಡ್ ಅಪಾಯ ಇಲ್ಲವೆಂದಲ್ಲ, ಆದರೆ ಸಂಸತ್ ಅಧಿವೇಶನ ಮುಂದೂಡುವಷ್ಟು ಅದು ಈಗ ಭಯಾನಕವಾಗಿ ಉಳಿದಿಲ್ಲ.ಕೋವಿಡ್ ನೆಪ ಹೇಳುವ ಬಿಜೆಪಿ ನಾಯಕರು ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಹಾಗೂ ಈಗ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸಾವಿರಾರು ಜನರ ಭಾರೀ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತಾಡಿದ್ದನ್ನು, ಹೇಗೆ ತಾನೇ ಸಮರ್ಥಿಸಿಕೊಳ್ಳುತ್ತಾರೆ?.

ನೋಟು ಅಮಾನ್ಯೀಕರಣ, ಜಿಎಸ್‌ಟಿ ಸೇರಿದಂತೆ ಆರ್ಥಿಕ ವಲಯದ ಅಧ್ವಾನಗಳ ಬಗ್ಗೆ, ಈಗ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಸರಕಾರದ ಬಳಿ ಉತ್ತರಗಳಿಲ್ಲ. ಅಂತಲೇ ಸಂಸತ್ತಿನಲ್ಲಿ ಉತ್ತರಿಸುವ ಸಾಂವಿಧಾನಿಕ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುವ ಪಲಾಯನವಾದಿ ಮಾರ್ಗವನ್ನು ಈ ಸರಕಾರ ಹಿಡಿದಿದೆ ಅಂದರೆ ಅತಿಶಯೋಕ್ತಿಯಲ್ಲ.

 ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿರುವ ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಸರಕಾರ ಕಳೆದ ಏಳು ವರ್ಷಗಳಲ್ಲಿ ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಕಾರ್ಪೊರೇಟ್ ಬಂಡವಾಳಶಾಹಿಯ ಲೂಟಿಗೆ ದೇಶವನ್ನು ಮುಕ್ತಗೊಳಿಸಿರುವ ಈ ಸರಕಾರ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲ ರಂಗಗಳಲ್ಲಿ ವಿಫಲಗೊಂಡಿದೆ. ಕಳೆದ ಎಪ್ಪತ್ತು ವರ್ಷಗಳಿಂದ ಸ್ವತಂತ್ರ ಭಾರತದ ಸಾಧನೆಗಳನ್ನೆಲ್ಲ ಮಣ್ಣುಪಾಲು ಮಾಡಿದ ಈ ಸರಕಾರ ಸಾರ್ವಜನಿಕ ರಂಗದ ಉದ್ಯಮಗಳನ್ನೆಲ್ಲ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರನ್ನು ಸಂಕಟದ ಸುಳಿಗೆ ಸಿಲುಕಿಸಿ ಅವರ ಹಸಿದ ಹೊಟ್ಟೆಯ ಮೇಲೆ ಏಟಿನ ಮೇಲೆ ಏಟು ಕೊಡುತ್ತಿದೆ. ಕಾರ್ಮಿಕ ವರ್ಗದ ಹಕ್ಕುಗಳನ್ನು ನಾಶ ಮಾಡಿದ ಈ ಸರಕಾರ ಅನ್ನದಾತರ ಕೊರಳು ಹಿಸುಕಲು ಹೊರಟಿದೆ. ಇದನ್ನು ಪ್ರತಿಭಟಿಸಿ ನೊಂದ ನೇಗಿಲ ಯೋಗಿಗಳು ಕೊರೆಯುವ ಚಳಿಯಲ್ಲಿ ದಿಲ್ಲಿಗೆ ಬಂದರೆ ಅವರ ಅಹವಾಲನ್ನು ಆಲಿಸದೆ ಅವರ ಚಳವಳಿಯನ್ನೇ ನಾಶ ಮಾಡಲು ಮಸಲತ್ತು ಮಾಡುತ್ತಿದೆ.ಈ ಎಲ್ಲಾ ಅಂಶಗಳು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪವಾದರೆ ಉತ್ತರ ಕೊಡಲು ಕಷ್ಟವಾಗುತ್ತದೆ ಎಂದು ಹೆದರಿದ ಪುಕ್ಕಲು ಸರಕಾರ ಸಂಸತ್ ಅಧಿವೇಶನವನ್ನೇ ರದ್ದು ಗೊಳಿಸಲು ಮುಂದಾಗಿರುವುದು ಸರಿಯಲ್ಲ.

ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೇಶದ ಐದು ನೂರು ರೈತ ಸಂಘಟನೆಗಳ ಐವತ್ತು ಸಾವಿರಕ್ಕೂ ಹೆಚ್ಚು ರೈತರು ಕಳೆದ 26 ದಿನಗಳಿಂದ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ಕೊರೆಯುವ ಚಳಿಯಲ್ಲಿ 32 ಜನರು ಸಾವಿಗೀಡಾಗಿದ್ದಾರೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಸಹಾನುಭೂತಿಯಿಂದ ಸ್ಪಂದಿಸಬೇಕಾದ ಪ್ರಧಾನ ಮಂತ್ರಿ ನೇರವಾಗಿ ರೈತರೊಂದಿಗೆ ಮಾತಾಡುವುದನ್ನು ಬಿಟ್ಟು ಗುರುದ್ವಾರಗಳಿಗೆ ದರ್ಶನ ನೀಡುವ ಅಗ್ಗದ ಪ್ರಹಸನ ನಡೆಸಿದ್ದಾರೆ.ರೈತರ ಹೋರಾಟ ನ್ಯಾಯ ಸಮ್ಮತವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದ ನಂತರವೂ ಕಾರ್ಪೊರೇಟ್ ಲಾಬಿಯ ಕೈಗೊಂಬೆಯಾದ ಈ ಸರಕಾರ ಹೋರಾಡುತ್ತಿರುವ ರೈತರ ನಡುವೆ ಒಡಕು ಹುಟ್ಟಿಸುವ ಕೀಳು ಮಟ್ಟದ ರಾಜಕೀಯ ನಡೆಸಿದೆ. ದಿಲ್ಲಿಯಲ್ಲಿ ಒಂದೆಡೆ ತೀವ್ರ ಚಳಿಯಲ್ಲಿ ಬಟಾ ಬಯಲಿನಲ್ಲಿ ರೈತರು ಬೀಡು ಬಿಟ್ಟಿದ್ದರೆ, ಇನ್ನೊಂದೆಡೆ ಐದಾರು ಕಿ.ಮೀ ಅಂತರದ ಭವ್ಯ ಬಂಗಲೆಗಳಲ್ಲಿ ಈ ದೇಶದ ಚುಕ್ಕಾಣಿ ಹಿಡಿದವರು ಬೆಚ್ಚಗೆ ಪವಡಿಸಿದ್ದಾರೆ. ಸ್ವತಂತ್ರ ಭಾರತ ಇಂತಹ ಹೃದಯ ಹೀನ ಸರಕಾರವನ್ನು ಹಿಂದೆಂದೂ ಕಂಡಿರಲಿಲ್ಲ.

 ತನ್ನ ಜನ ವಿರೋಧಿ ನೀತಿಗಳನ್ನು ಜಾರಿಗೆ ತರಲು ಕೋವಿಡ್ ಬಳಸಿಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿದ ಮೋದಿ ಸರಕಾರಕ್ಕೆ ಸಂಸತ್ತನ್ನು ಎದುರಿಸುವ ಧೈರ್ಯವಿಲ್ಲ. ಸದನದಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆಗಾಗ ಟಿವಿಯಲ್ಲಿ ಕಾಣಿಸಿಕೊಂಡು ‘ಮನ್ ಕಿ ಬಾತ್’ ಎಂದು ಸುಳ್ಳು ಹೇಳುವ ನಮ್ಮ ಪ್ರಧಾನಿಯವರಿಗೆ ಸಂಸತ್ತು ಮತ್ತು ಸುದ್ದಿ ಗೋಷ್ಠಿಗಳನ್ನು ಎದುರಿಸುವ ಧೈರ್ಯವಿಲ್ಲ. ಇದು ಸಂಸದೀಯ ಪರಂಪರೆಗೆ ಮಾಡುವ ಅಪಚಾರವಲ್ಲದೆ ಬೇರೇನೂ ಅಲ್ಲ. ಪ್ರಧಾನಮಂತ್ರಿ ಅವರು ಮತ್ತು ಅವರ ಸರಕಾರ ರೈತರ ಹಿತಕ್ಕಾಗಿ ಕೃಷಿ ಕಾನೂನು ತಿದ್ದುಪಡಿ ಮಾಡಿದ್ದರೆ ಅದನ್ನು ಸಂಸತ್ತಿನಲ್ಲಿ ಬಂದು ಸಮರ್ಥಿಸಿಕೊಳ್ಳಲಿ. ಸಮಸ್ಯೆಗಳು ಎದುರಾದಾಗ ಪಲಾಯನ ಮಾರ್ಗ ಬಹಳ ದಿನ ನೆರವಿಗೆ ಬರುವುದಿಲ್ಲ.

 ಪ್ರಜಾಪ್ರಭುತ್ವದಲ್ಲಿ ಜನರಿಂದ ಚುನಾಯಿತವಾದ ಸರಕಾರ ಜನತೆಯ ನೋವಿಗೆ ಸ್ಪಂದಿಸಬೇಕು.ಕೃಷಿ ಕಾಯ್ದೆಯನ್ನು ರದ್ದು ಗೊಳಿಸುವುದಿಲ್ಲ ಎಂದು ಪ್ರಧಾನಿಯಿಂದ ಹಿಡಿದು ಎಲ್ಲ ಸಚಿವರು ಹೇಳುವುದು ಪ್ರತಿಭಟನೆ ಮಾಡುತ್ತಿರುವ ರೈತರಲ್ಲಿ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗುತ್ತದೆ. ಇಂತಹ ವಿಷಯವನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡುವುದರಿಂದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

ರೈತರು ತಮ್ಮ ಬದುಕಿನ ಪ್ರಶ್ನೆಯನ್ನೆತ್ತಿಕೊಂಡು ಹೋರಾಡುತ್ತಿರುವುದರಿಂದ ಅವರು ಹಿಂದೆ ಸರಿಯುವ ಸಾಧ್ಯತೆ ಇಲ್ಲ. ಸೋಮವಾರದಿಂದ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಅವರು ಆರಂಭಿಸಿದ್ದಾರೆ.ಡಿಸೆಂಬರ್ 25ರಿಂದ 27ರವರೆಗೆ ಹರ್ಯಾಣದಲ್ಲಿ ಟೋಲ್ ಸಂಗ್ರಹವನ್ನು ತಡೆಯುವುದಾಗಿ ರೈತ ಹೋರಾಟದ ವಕ್ತಾರರು ಹೇಳಿದ್ದಾರೆ.

ಕಾರ್ಪೊರೇಟ್ ಬಂಡವಾಳಶಾಹಿ ಪರವಾಗಿ ನೀತಿ, ಧೋರಣೆಗಳನ್ನು ರೂಪಿಸಲು, ಜನತೆಯ ಹೋರಾಟಗಳನ್ನು ದಮನ ಮಾಡಲು ಹಾಗೂ ಸಾಹಿತಿ, ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ಈ ಸರಕಾರಕ್ಕೆ ಕೋವಿಡ್ ಅಡ್ಡಿಯುಂಟು ಮಾಡುವುದಿಲ್ಲ, ಆದರೆ ಸಂಸತ್ತಿನ ಅಧಿವೇಶನ ನಡೆಸಲು ಕೋವಿಡ್ ಅಡ್ಡಿಯಾಗಿದೆಯಂತೆ. ಇದಕ್ಕಿಂತ ಅಪಹಾಸ್ಯದ ಹಾಗೂ ಖಂಡನಾರ್ಹವಾದ ಸಂಗತಿ ಇನ್ನೊಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News