ದೇಶ ಒಂದಾಗಿ ಆಚರಿಸಬೇಕಾದ ರಾಷ್ಟ್ರೀಯ ಕಿಸಾನ್ ದಿನ

Update: 2020-12-23 05:50 GMT

ಇಂದು ರಾಷ್ಟ್ರೀಯ ಕಿಸಾನ್ ದಿನ. ರೈತರ ಪರವಾಗಿ ಈ ದೇಶ ಒಕ್ಕೊರಲಲ್ಲಿ ಧ್ವನಿಯೆತ್ತಬೇಕಾದ ದಿನ. ಅವರ ಕಷ್ಟ ಸುಖಗಳಿಗೆ ಕಿವಿಯಾಗಿ ಕೃಷಿಯ ಹಿರಿಮೆಗಳನ್ನು ಎತ್ತಿ ಹಿಡಿಯುವ ದಿನ. ದುರದೃಷ್ಟವಶಾತ್ ಕಿಸಾನ್ ದಿನದಂದು ರೈತರು ಬೀದಿಯಲ್ಲಿದ್ದಾರೆ. ರೈತರ ಬೇಡಿಕೆಗಳನ್ನು ಆಲಿಸಬೇಕಾದ ಸರಕಾರ, ರೈತರನ್ನು ನಕ್ಸಲರು, ಖಾಲಿಸ್ತಾನಿ ಉಗ್ರರು ಎಂಬಿತ್ಯಾದಿಯಾಗಿ ಕರೆದು ಜೈಲಿಗೆ ತಳ್ಳುವ ಹುನ್ನಾರ ನಡೆಸುತ್ತಿದೆ. ಲಾಲ್‌ಬಹದೂರ್ ಶಾಸ್ತ್ರಿಯವರ ಜೈ ಕಿಸಾನ್ ಘೋಷಣೆ ತಮಾಷೆಯ ವಸ್ತುವಾಗಿದೆ. ಗದ್ದೆಯಲ್ಲಿ ದುಡಿಯುವ ರೈತರು ಇಂದು ತಮ್ಮ ಉಳಿವಿಗಾಗಿ ಕೊರೆಯುವ ಚಳಿಯಲ್ಲಿ ಪ್ರಾಣವನ್ನು ಒತ್ತೆಯಿಟ್ಟು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತದ ಬೆನ್ನೆಲುಬು ಎಂದು ಕರೆಯಲ್ಪಟ್ಟ ರೈತರ ಬೆನ್ನೆಲುಬನ್ನೇ ಮುರಿಯುವ ಕಾನೂನಿನ ವಿರುದ್ಧ ಇದು ಮಾಡು ಮಡಿ ಹೋರಾಟ. ಅವರ ಪಾಲಿಗೆ ಇದು ಎರಡನೆಯ ಸ್ವಾತಂತ್ರ ಸಂಗ್ರಾಮವಾಗಿದೆ.

ಕೇಂದ್ರ ಹೊಸದಾಗಿ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳೆಂದರೆ : 1) ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಪ್ರೋತ್ಸಾಹ ಮತ್ತು ಸೌಲಭ್ಯ) ಕಾಯ್ದೆ 2020,2) ಬೆಲೆ ಖಾತರಿ ಮತ್ತು ಕೃಷಿ ಸೇವಾ ಕಾಯ್ದೆ, ರೈತರ (ಸಶಕ್ತೀಕರಣ ಮತ್ತು ಸುರಕ್ಷೆ) ಗುತ್ತಿಗೆ ಕಾಯ್ದೆ 2020 ಮತ್ತು 3) ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020. ಈ ಕಾಯ್ದೆಗಳು ಆಹಾರ ವಸ್ತುಗಳ ವಿತರಣೆ ಮತ್ತು ಮಾರಾಟ ಸೇರಿದಂತೆ ಕೃಷಿ ಆರ್ಥಿಕತೆಯ ಎಲ್ಲಾ ವಿಭಾಗಗಳನ್ನೂ ಉದ್ಯಮ (ಕಾರ್ಪೊರೇಟ್) ಸಂಸ್ಥೆಗಳ ನಿರಂಕುಶ ನಿಯಂತ್ರಣದಡಿ ತರಲಿವೆ ಮತ್ತು ಕನಿಷ್ಠ ಬೆಂಬಲ ಬೆಲೆಯಡಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಆಹಾರ ಧಾನ್ಯ ಖರೀದಿಸುವ ಪ್ರಕ್ರಿಯೆಯನ್ನು ಹಳಿತಪ್ಪಿಸಲಿವೆೆ. ಅಂತಿಮವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಸರಕಾರಕ್ಕೆ ಅವಕಾಶ ನೀಡಲಿವೆೆ. ಉದ್ಯಮಗಳಿಂದ ನಿಯಂತ್ರಿಸಲ್ಪಡುವ ಕೃಷಿ ಆರ್ಥಿಕತೆಯು ಬಡ-ಮಧ್ಯಮ ವರ್ಗದ ಜನರನ್ನು ಬಂಡವಾಳಶಾಹಿಗಳ ಗುತ್ತಿಗೆ ಕಾರ್ಮಿಕರನ್ನಾಗಿಸಲಿದೆ. ಸಂಸತ್ತಿನಲ್ಲಿ ತನಗಿರುವ ಭರ್ಜರಿ ಬಹುಮತದ ಲಾಭ ಪಡೆದ ಬಿಜೆಪಿ ಸರಕಾರ ವಿಪಕ್ಷ ಅಥವಾ ರೈತರ ಸಂಘಟನೆಗಳೊಂದಿಗೆ ಚರ್ಚಿಸದೆ ಈ ಕಾಯ್ದೆಗಳಿಗೆ ಅನುಮೋದನೆ ಪಡೆದಿದೆ. ಇದು ಪ್ರಜಾಪ್ರಭುತ್ವದ ನಿರ್ಲಜ್ಜ ಉಪೇಕ್ಷೆ, ರಾಷ್ಟ್ರೀಯ ಅಪರಾಧವಲ್ಲವೇ?

ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆ ಸಂಬಂಧಿತ ಸರಕಾರಗಳೊಂದಿಗೆ ಸಮಾಲೋಚಿಸದೆ ಕಾಯ್ದೆಗಳನ್ನು ಅಂಗೀಕರಿಸಲಾಗಿದೆ. ಖಾಸಗಿ ಉದ್ಯಮ ಸಂಸ್ಥೆಗಳ ಹಿತಾಸಕ್ತಿ ರಕ್ಷಿಸಲು ಒಕ್ಕೂಟ ವ್ಯವಸ್ಥೆಯ ಸಾಂವಿಧಾನಿಕ ತತ್ವಗಳನ್ನು ಸರಕಾರ ಗಾಳಿಗೆ ತೂರಿದೆ. ರಾಜ್ಯ ಸರಕಾರಗಳ ಹಕ್ಕುಗಳನ್ನು ಕಿತ್ತುಕೊಂಡು ಅವುಗಳನ್ನು ಕೈಗೊಂಬೆ ಸರಕಾರಗಳನ್ನಾಗಿಸಲು ಪ್ರಯತ್ನಿಸುತ್ತಿದೆ. ಸಾಮ, ದಾನ, ಭೇದ, ದಂಡ ಉಪಾಯಗಳಿಂದ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳ ಸರಕಾರವನ್ನು ನಿಗ್ರಹಿಸಲು ಮತ್ತು ಈ ಮೂಲಕ ದೇಶದಾದ್ಯಂತ ತನ್ನ ರಾಜಕೀಯ ಏಕಸ್ವಾಮ್ಯತೆ ಸಾಧಿಸಲು ಪ್ರಯತ್ನಿಸುತ್ತಿದೆ. ಎಲ್ಲಾ ಅಧಿಕಾರ ಕೇಂದ್ರಗಳನ್ನೂ ತನ್ನ ಮುಷ್ಟಿಯಲ್ಲಿರಿಸಿಕೊಂಡು ಜನತೆಯ ಬದುಕನ್ನು ಸರ್ವನಾಶಗೊಳಿಸುತ್ತಿದೆ.

ಅಂದ ಹಾಗೆ, ಮೋದಿಯಂತೆಯೇ ಹಿಂದೆ ಹಿಟ್ಲರ್ ಕೂಡ ರೈತ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ದ. ‘ಜರ್ಮನಿಯು ಅದ್ಭುತ, ಮಾದರಿ ರೈತರ ದೇಶವಾಗಲಿದೆ ಇಲ್ಲವಾದರೆ ಜರ್ಮನಿ ಅಸ್ತಿತ್ವದಲ್ಲಿಯೇ ಇರುವುದಿಲ್ಲ’ ಎಂದು ಹಿಟ್ಲರ್ ಘೋಷಿಸಿದ್ದ. ಅಂತಿಮವಾಗಿ ಹಿಟ್ಲರ್ ಆಡಳಿತದಲ್ಲಿ ಜರ್ಮನಿಯ ರೈತರಿಗೆ ಏನು ದಕ್ಕಿತು? ರೈತರಿಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಗಳ ಕುರಿತ ಕಾನೂನುಗಳನ್ನು ಹಿಟ್ಲರ್ ತಿದ್ದುಪಡಿ ಮಾಡಿದ. ಆಸ್ತಿಯಲ್ಲಿ ಹಿರಿಯ ಮಗ ಅಥವಾ ಮಗಳಿಗೆ ಮಾತ್ರ ಹಕ್ಕು ಇದೆ ಎಂದು ನಿರ್ಬಂಧಿಸಿದ. ಈ ಮೂಲಕ ಮಿಲಿಯಾಂತರ ರೈತರ ಮಕ್ಕಳನ್ನು ಗ್ರಾಮದಿಂದ ಹೊರದೂಡಿದ, ಕೃಷಿ ಕಾರ್ಮಿಕರ ಸಹಿತ ಉಳಿದವರನ್ನೂ ಗುಲಾಮರನ್ನಾಗಿಸಿದ. ದೇಶದ ಯಾವುದೇ ಭಾಗದಲ್ಲಿ ಮುಕ್ತವಾಗಿ ಸಂಚರಿಸುವ ಅಥವಾ ತಮಗಿಷ್ಟ ಬಂದ ಕೆಲಸ ಮಾಡುವ ಹಕ್ಕನ್ನೂ ಅವರು ಕಳೆದುಕೊಂಡರು. ಜೊತೆಗೆ, ರೈತರು ತಮ್ಮ ಜಮೀನನ್ನು ತಮಗಿಷ್ಟ ಬಂದವರಿಗೆ ಮಾರುವ ಹಕ್ಕನ್ನು ಕಳೆದುಕೊಂಡರು. ಉದ್ಯಮಿಗಳಿಗೆ ಮಾರುವಂತೆ ಅವರನ್ನು ಬಲವಂತ ಮಾಡಲಾಯಿತು. ಭಾರತದಲ್ಲಿ ಹಿಟ್ಲರ್‌ನ ಜರ್ಮನಿ ಪುನರಾವರ್ತನೆಯಾಗುತ್ತಿದೆ.

ರೈತರ ಸಂಘಟನೆಗಳ ನೇತೃತ್ವದಲ್ಲಿ ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶದ ಲಕ್ಷಾಂತರ ಜನತೆ ಹೆದ್ದಾರಿಯಲ್ಲಿ ಅಳವಡಿಸಿದ ಬ್ಯಾರಿಕೇಡ್, ಕಬ್ಬಿಣದ ತಂತಿಯ ಬೇಲಿ, ರಸ್ತೆ ತಡೆಯನ್ನು ನಿವಾರಿಸಿಕೊಂಡು ಬಂದು ದಿಲ್ಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ತಡೆ ನಡೆಸಿ, ಜಲಫಿರಂಗಿ, ಅಶ್ರುವಾಯು ಪ್ರಯೋಗದ ಜೊತೆಗೆ ರೈತರ ಮೇಲೆ ದೈಹಿಕ ದಾಳಿಯನ್ನೂ ನಡೆಸುವುದು ಯಾವ ರೀತಿಯ ಪ್ರಜಾಪ್ರಭುತ್ವ ಮತ್ತು ಆಡಳಿತ? ಇದು ರೈತರ ಪ್ರಜಾತಾಂತ್ರಿಕ ಹಕ್ಕುಗಳ ಮೇಲೆ ನಡೆಸಿರುವ ಅಮಾನುಷ ಫ್ಯಾಶಿಸ್ಟ್ (ಉಗ್ರ ಬಲಪಂಥೀಯ) ಪ್ರಹಾರವಲ್ಲವೇ?ರಾಷ್ಟ್ರೀಯ ಹೆದ್ದಾರಿಗಳು, ರಾಜಧಾನಿ ನಗರಗಳು, ಪೊಲೀಸರ ಲಾಠಿ, ಜಲಫಿರಂಗಿಗಳು, ಪೊಲೀಸ್- ಮಿಲಿಟರಿ-ನ್ಯಾಯಾಂಗ- ಕಾರ್ಯಾಂಗ ಜನರ ರಕ್ಷಣೆಗಾಗಿ ಇರುವ ವ್ಯವಸ್ಥೆಗಳೇ ಅಥವಾ ಉದ್ಯಮ ಸಂಸ್ಥೆಗಳಿಗೆ ಲಾಭ ತಂದುಕೊಡಲು ಇರುವ ವ್ಯವಸ್ಥೆಗಳೆೀ? ಈ ದೇಶ ಕಾರ್ಮಿಕರಿಗೆ ಮತ್ತು ರೈತರಿಗೂ ಸೇರಿದೆಯೇ ಅಥವಾ ಕೇವಲ ಶ್ರೀಮಂತ ಬಂಡವಾಳಶಾಹಿಗಳಿಗೆ ಮಾತ್ರವೇ ? ಈ ವಾಸ್ತವತೆಯನ್ನು ಸ್ಪಷ್ಟವಾಗಿ ಅರಿತುಕೊಳ್ಳುವ ಸಮಯ ಇದೀಗ ಬಂದಿದೆ. ಈ ಬಾರಿಯ ರಾಷ್ಟ್ರೀಯ ಕಿಸಾನ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಒಂದೇ ಒಂದು ದಾರಿಯೆಂದರೆ, ನ್ಯಾಯಕ್ಕಾಗಿ ಬೀದಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಪರವಾಗಿ ದೇಶ ನಿಂತುಕೊಳ್ಳುವುದು.

ಈ ದೇಶವನ್ನು ಕಟ್ಟುವಲ್ಲಿ ರೈತರ ಪಾತ್ರ ಬಹುದೊಡ್ಡದು. ಸ್ವಾತಂತ್ರಾನಂತರ ದೇಶದಲ್ಲಿ ನಡೆದ ‘ಹಸಿರು ಕ್ರಾಂತಿ’ಯ ಕಾರಣದಿಂದಲೇ ನಾವು ಹೊಟ್ಟೆ ತುಂಬ ಊಟ ಮಾಡುತ್ತಿದ್ದೇವೆ ಮತ್ತು ಈ ಹಸಿರು ಕ್ರಾಂತಿಯಲ್ಲಿ ಪಂಜಾಬ್‌ನ ಪಾತ್ರ ಬಹುದೊಡ್ಡದು. ಇಂದು ಸರಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ಪಂಜಾಬಿನ ರೈತರೇ ಬಂಡೆದ್ದಿದ್ದಾರೆ. ಉಳಿದ ರಾಜ್ಯಗಳ ರೈತರು ಪಂಜಾಬನ್ನು ಹಿಂಬಾಲಿಸುತ್ತಿದ್ದಾರೆ. ಭಾರತದ ರೈತರ ಉಳಿವು ಎಂದರೆ ಭಾರತದ ಉಳಿವು ಎಂದೇ ಅರ್ಥ. ಆದುದರಿಂದ ಈ ಹೋರಾಟ ದೇಶದ ಪರವಾಗಿರುವ ಹೋರಾಟ. ಈ ಹೋರಾಟವನ್ನು ಬೆಂಬಲಿಸುವುದೆಂದರೆ ಉಂಡ ಅನ್ನದ ಋಣ ತೀರಿಸುವುದೆಂದು ಅರ್ಥ. ರೈತರ ಹೋರಾಟ ಗೆಲ್ಲಲಿ. ದೇಶವೂ ಆ ಮೂಲಕ ಗೆಲ್ಲಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News