ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಮೂಲಾಗ್ರ ಸುಧಾರಣೆ: ಸಚಿವ ಡಾ.ಕೆ.ಸುಧಾಕರ್

Update: 2020-12-24 16:51 GMT

ಬೆಂಗಳೂರು, ಡಿ.24: ಪ್ರತಿ ಕನ್ನಡಿಗನಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಗುರಿಯೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿ.ಎಚ್.ಸಿ)ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮುದಾಯ ಆರೋಗ್ಯ ಸೇವೆ ಉತ್ತಮವಾಗಿದೆ ಎಂದು ಜನರು ಮಾತನಾಡುತ್ತಾರೆ. ಆದರೆ ಇಡೀ ದೇಶದಲ್ಲಿ ಕರ್ನಾಟಕದ ಆರೋಗ್ಯ ಸೇವೆ ಉತ್ತಮ ಹಾಗೂ ಮಾದರಿಯಾಗಿರಬೇಕು ಎಂದು ಮುಖ್ಯಮಂತ್ರಿ ಕನಸು ಕಂಡಿದ್ದಾರೆ. ಈ ಕನಸಿಗೆ ಪೂರಕವಾಗಿ ಯೋಜನೆ ರೂಪಿಸಲಾಗಿದೆ ಎಂದರು.

ರಾಜ್ಯದಲ್ಲಿ 2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇದರಲ್ಲಿ ಅಸಮತೋಲನವಿದ್ದರೆ ಹೊಸ ಕೇಂದ್ರ ನಿರ್ಮಾಣ ಹಾಗೂ ಅಸ್ವಿತ್ವದಲ್ಲಿರುವ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಹೊಸ ಯೋಜನೆಯ ಉದ್ದೇಶ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 6 ಹಾಸಿಗೆ ಇದ್ದು, ಅದನ್ನು 12 ರಿಂದ 20 ಹಾಸಿಗೆಗೆ ಹೆಚ್ಚಿಸಲಾಗುವುದು. ಪಿಎಚ್‍ಸಿಯಲ್ಲಿ ಒಬ್ಬ ವೈದ್ಯ ಇದ್ದು, ಈ ಸಂಖ್ಯೆಯನ್ನು ಕನಿಷ್ಠ 3-4 ಕ್ಕೆ ಹೆಚ್ಚಿಸಲಾಗುವುದು. ಈ ಪೈಕಿ ಒಬ್ಬ ಮಹಿಳಾ ವೈದ್ಯೆ ಹಾಗೂ ಮತ್ತೊಬ್ಬರು ಆಯುಷ್ ವೈದ್ಯರಿರುತ್ತಾರೆ ಎಂದು ಅವರು ವಿವರಿಸಿದರು.

ಉತ್ತಮ ವಸತಿ ಕಲ್ಪಿಸದ ಕಾರಣಕ್ಕೆ ಅನೇಕ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದರು. ಒಂದೇ ಸಮುಚ್ಛಯದಲ್ಲಿ ನರ್ಸ್, ವೈದ್ಯರಿಗೆ ವಸತಿ, ಇತರೆ ಆರೋಗ್ಯ ಸಿಬ್ಬಂದಿಗೆ ವಸತಿ ಕಲ್ಪಿಸಲಾಗುತ್ತದೆ. 2 ಎಕರೆ ಪ್ರದೇಶದಲ್ಲಿ 6-8 ಕೋಟಿ ರೂ.ಖರ್ಚು ಮಾಡಿ ಹೊಸ ಪಿಎಚ್‍ಸಿ ನಿರ್ಮಿಸಲಾಗುತ್ತದೆ. 20 ಸಾವಿರ ಚದರ ಮೀಟರ್ ಆಡಳಿತ ಕಟ್ಟಡ, 12 ಹಾಸಿಗೆಯ ವಿಭಾಗ, ತಾಯಿ ಮತ್ತು ಶಿಶು ಕಾಳಜಿ ಕೇಂದ್ರ, ಪ್ರಯೋಗಾಲಯ ಇರಲಿದೆ. ಮಧುಮೇಹ ಪರೀಕ್ಷೆ, ರಕ್ತ ಪರೀಕ್ಷೆ ಸೇರಿದಂತೆ ನಾನಾ ಪರೀಕ್ಷೆಗಳನ್ನು ಉಚಿತವಾಗಿ ಮಾಡುವ ವ್ಯವಸ್ಥೆ ಇರಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನ ಬಳಸಿ ಉಚಿತ ಸೇವೆ ನೀಡಲಾಗುವುದು ಎಂದು ಸುಧಾಕರ್ ಹೇಳಿದರು.

ಇ-ಆಸ್ಪತ್ರೆ: ಸಣ್ಣ ಆಸ್ಪತ್ರೆಗಳಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆವರೆಗೂ ಅಂತರ್ಜಾಲ ಬಳಸಿ ಸಂಪರ್ಕ ಕಲ್ಪಿಸುವ ಇ-ಆಸ್ಪತ್ರೆ ಸೌಲಭ್ಯವಿರಲಿದೆ. ಪಿಎಚ್‍ಸಿಯಲ್ಲಿ ಎಕ್ಸ್ ರೇ ತೆಗೆದರೂ ಅದಕ್ಕೆ ಬೇಕಾದ ಸಲಹೆಯನ್ನು ಸೂಪರ್ ಸ್ಪೆಾಷಲಿಟಿ ಆಸ್ಪತ್ರೆ ತಜ್ಞರು ನೀಡುವಂತಹ ವ್ಯವಸ್ಥೆ ಇರಲಿದೆ. ತಜ್ಞ ವೈದ್ಯರ ತಪಾಸಣೆಗೆ ಅನುಕೂಲವಾಗಲು ಉತ್ತಮ ಗುಣಮಟ್ಟದ ಕ್ಯಾಮರಾ ಮತ್ತು ಟಿವಿಯೊಂದಿಗೆ ಟೆಲಿ-ಮೆಡಿಸಿನ್ ವ್ಯವಸ್ಥೆ ಇರಲಿದೆ ಎಂದು ಅವರು ತಿಳಿಸಿದರು.

80 ಸಾವಿರ ಜನಸಂಖ್ಯೆಗೆ ಒಂದರಂತೆ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಕೂಡ ಮೇಲ್ದರ್ಜೆಗೇರಿಸಲಾಗುವುದು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುವುದು. 200 ಹಾಸಿಗೆಗಳ ಜಿಲ್ಲಾಸ್ಪತ್ರೆಗಳು ಮುಂದಿನ ದಿನಗಳಲ್ಲಿ 500-700 ಹಾಸಿಗೆಯ ಆಸ್ಪತ್ರೆಯಾಗಿ ಅಭಿವೃದ್ಧಿಯಾಗಲಿವೆ. ಬೆಂಗಳೂರು, ಹುಬ್ಬಳ್ಳಿಗೆ ಆರೋಗ್ಯ ಕೇಂದ್ರಗಳು ಕೇಂದ್ರೀಕೃತವಾಗದೆ ಎಲ್ಲ ಕಡೆಗೂ ವಿಸ್ತರಿಸಲಾಗುವುದು. ಆಯಾ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಸಿಗುವಂತೆ ಮಾಡಲಾಗುವುದು ಎಂದು ಸುಧಾಕರ್ ಹೇಳಿದರು.

ಆಂಬ್ಯುಲೆನ್ಸ್ ಸೇವೆ: ಈ ಹಿಂದೆ 1 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ನೀಡಲಾಗುತ್ತಿತ್ತು. ಇನ್ನು ಮುಂದೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಂಬ್ಯುಲೆನ್ಸ್ ನೀಡಲಾಗುವುದು. ಅಂದರೆ, 30 ಸಾವಿರ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

ಶಾಲೆ ಆರಂಭ ಹಾಗೂ ವಿದ್ಯಾಗಮ ಕಾರ್ಯಕ್ರಮ ಆರಂಭಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಲಾಗಿತ್ತು. ಅದರಂತೆಯೇ ತೀರ್ಮಾನ ಕೈಗೊಳ್ಳಲಾಗಿದೆ. ರಾತ್ರಿ 11 ಗಂಟೆಗೆ ಮೀರಿ ಯುವಜನರು ಕ್ಲಬ್, ಪಬ್ ನಲ್ಲಿ ಸೇರಿ ಸಂಭ್ರಮಿಸುತ್ತಾರೆ. ಇಂತಹ ಚಟುವಟಿಕೆ ನಿಯಂತ್ರಣವಾಗಲಿ ಎಂಬ ಉದ್ದೇಶಕ್ಕೆ ನೈಟ್ ಕರ್ಫ್ಯೂ ತರಲಾಗಿತ್ತು. ಹೊಸ ಪ್ರಭೇದದ ವೈರಸ್ ಸೃಷ್ಟಿಯಾಗಿರುವ ಸಮಯದಲ್ಲಿ ಎಚ್ಚರದ ನಡವಳಿಕೆ ಅಗತ್ಯ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News