ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಆರೋಪ: ಪ್ರಕರಣ ದಾಖಲು

Update: 2020-12-28 14:01 GMT

ಬೆಂಗಳೂರು, ಡಿ.28: ಜಾಲತಾಣದಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವ ಕೃತ್ಯ ಸುಬ್ರಮಣ್ಯಪುರದಲ್ಲಿ ನಡೆದಿದೆ.

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಚ್ಚೇದಿತ ಮಹಿಳೆಯೊಬ್ಬರು ಕಳೆದ ಎರಡು ವರ್ಷಗಳಿಂದ ಸಂಗಾತಿಗಾಗಿ ಹುಡುಕುತ್ತಿದ್ದಾಗ ಶಾದಿ ಡಾಟ್ ಕಾಂ.ನಲ್ಲಿ ಕಾರ್ತಿಕ್ ಎಂಬಾತನ ಪರಿಚಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಾಗಿ ಕಾರ್ತಿಕ್ ಹೇಳಿ ಮಹಿಳೆಗೆ ಹತ್ತಿರವಾಗಿ ಬಳಿಕ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ.

ನಂತರ ಇಬ್ಬರು ಸೇರಿ ಅಪಾರ್ಟ್‍ಮೆಂಟ್ ಖರೀದಿಸುವ ಎಂದು ಹೇಳಿ ಆಕೆಯಿಂದ 70 ಲಕ್ಷ ರೂ. ಪಡೆದು ಅರೆಹಳ್ಳಿಯ ಬಳಿ ಫ್ಲ್ಯಾಟ್ ಖರೀದಿಸಿದ್ದ. ಕೆಲ ದಿನಗಳ ಬಳಿಕ ನಿನ್ನ ನಡತೆ ಸರಿಯಿಲ್ಲ ಎಂದು ಕಾರ್ತಿಕ್, ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದ್ದು, ಅಲ್ಲದೇ ವಿಚ್ಛೇದಿತ ಮಹಿಳೆಯ 13 ವರ್ಷದ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ 28 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದೇ ರೀತಿ ಹಲವು ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News